ಟಿಕೆಟ್‌ಗಾಗಿ ಪಕ್ಷದ ಹಿರಿಯ ನಾಯಕರ ಮನೆ ಬಾಗಿಲು ತಟ್ಟುತ್ತಿರುವ ಆಕಾಂಕ್ಷಿಗಳು
ಕನ್ನಡ ಪ್ರಭ ವಾರ್ತೆ ಮುಂಡಗೋಡ
ರಾಜ್ಯ ಸರ್ಕಾರ ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಮೀಸಲಾತಿ ಪ್ರಕಟಿಸಿದ್ದು, ಇನ್ನೇನು ಚುನಾವಣೆಗೆ ದಿನಾಂಕ ನಿಗದಿಯಾಗುವುದು ಮಾತ್ರ ಬಾಕಿ ಇದ್ದು, ಇಲ್ಲಿಯ ಪಪಂ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಸಾಗಿದ್ದು, ಚುನಾವಣೆಗೆ ಸ್ಪರ್ಧಿಸಲು ಹಲವರು ಮುಗಿಬಿಳುತ್ತಿದ್ದಾರೆ. ತಮಗೇ ಟಿಕೆಟ್ ನೀಡುವಂತೆ ಪಕ್ಷದ ಹಿರಿಯ ನಾಯಕರ ಮನೆ ಬಾಗಿಲು ತಟ್ಟುವವರ ಸಂಖ್ಯೆ ಹೆಚ್ಚಿದೆ.೧೯ ಸದಸ್ಯ ಬಲ ಹೊಂದಿರುವ ಇಲ್ಲಿಯ ಪಟ್ಟಣ ಪಂಚಾಯಿತಿಗೆ ಕಳೆದ ಅವಧಿಯಲ್ಲಿ ಬಿಜೆಪಿ ೧೦ ಮತ್ತು ಕಾಂಗ್ರೆಸ್ ನಿಂದ ೯ ಜನ ಆಯ್ಕೆಯಾಗಿದ್ದರು. ಮೊದಲ ಅವಧಿಗೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಆಡಳಿತ ನಡೆಸಿದರೆ, ಶಾಸಕ ಶಿವರಾಮ ಹೆಬ್ಬಾರ ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿ ಬಳಿಕ ಈಗ ಮತ್ತೆ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಳ್ಳುವ ಮೂಲಕ ಅವರ ಪ್ರಭಾವದಿಂದ ಕೆಲ ಬಿಜೆಪಿ ಸದಸ್ಯರೇ ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದಿಂದ ಅಧಿಕಾರ ಅನುಭವಿಸಿದರು.
ಕಳೆದ ಅವಧಿಯಲ್ಲಿ ಪಟ್ಟಣದಲ್ಲಿ ಹೇಳಿಕೊಳ್ಳುವಂತಹ ಯಾವುದೇ ರೀತಿ ಅಭಿವೃದ್ಧಿ ಏನೂ ಕಂಡಿಲ್ಲ. ಬಿನ್ನಮತ ಚಟುವಟಿಕೆಯಲ್ಲಿಯೇ ಹೆಚ್ಚು ಕಾಲಹರಣವಾಗಿರುವುದರಿಂದ ಅಭಿವೃದ್ದಿ ಕುಂಠಿತವಾಗಲು ಕಾರಣ ಎಂದರೂ ತಪ್ಪಾಗಲಿಕ್ಕಿಲ್ಲ. ಅವ್ಯವಹಾರ, ಅಧಿಕಾರ ಆಸೆ ಹಾಗೂ ಒಳ ಜಗಳದಿಂದಾಗಿ ಸದಸ್ಯರು ಉತ್ತಮ ಹೆಸರು ಪಡೆಯುವಲ್ಲಿ ವಿಫಲರಾಗಿದ್ದಾರೆ. ಹೋರಾಟ ಮನೋಭಾವನೆ ತೋರಿಸುತ್ತಿದ್ದ ಹೊಸ ಮುಖಗಳು ಪಪಂ ಪ್ರವೇಶಿಸಿ ಏನೋ ಬದಲಾವಣೆ ಮಾಡುತ್ತಾರೆ ಎಂದು ಆಯ್ಕೆ ಮಾಡಿ ಕಳುಹಿಸಿದ ಜನತೆಯ ನಿರೀಕ್ಷೆ ಹುಸಿಯಾಗಿದ್ದಂತೂ ಸತ್ಯ.
ಆದರೆ ಪಕ್ಷಗಳು ಮಾತ್ರ ಹೊಸಬರಿಗೆ ಅವಕಾಶ ನೀಡಲು ಚಿಂತನೆ ನಡೆಸಿವೆ. ಬಹುತೇಕವಾಗಿ ಹಿಂದಿನವರಿಗೆ ಟಿಕೆಟ್ ಸಿಗುವ ಸಾಧ್ಯತೆ ತೀವ್ರ ಕಡಿಮೆ. ಯಾರು ಉತ್ತಮ ಕೆಲಸ ಮಾಡಿ ಜನರ ಮನ ಗೆದ್ದಿದ್ದಾರೆ ಎಂಬುವುದನ್ನು ಗಮನಿಸುತ್ತಿದ್ದು, ಅಭ್ಯರ್ಥಿಯ ಗೆಲುವು ಮುಖ್ಯ ಎನ್ನುವ ಮಂತ್ರ ಜಪಿಸುತ್ತಿರುವ ಪಕ್ಷಗಳು ಸ್ಥಳೀಯವಾಗಿ ಅಭಿಪ್ರಾಯ ಸಂಗ್ರಹಣೆ ಮಾಡುತ್ತಿದ್ದು, ಹಿತವರನ್ನು ಗುರುತಿಸುವಲ್ಲಿ ಯಾವುದೇ ರೀತಿ ಹಿಂದೆ ಬಿದ್ದಿಲ್ಲ.
ಆಕಾಂಕ್ಷಿಗಳು ಸಾಕಷ್ಟು ಜನರಿದ್ದಾರೆ. ಪಕ್ಷ ನಿಷ್ಠೆ ಹಾಗೂ ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತರು ಸ್ಥಳೀಯರ ಕುಂದು ಕೊರತೆ ಸಮಸ್ಯೆಗಳಿಗೆ ಸ್ವಂದಿಸುವ ವ್ಯಕಿಗಳನ್ನು ಗುರುತಿಸಿ ಪಕ್ಷದಿಂದ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ ತಿಳಿಸಿದ್ದಾರೆ.