ಕುಮಟಾ: ₹೧೦೭.೯೪ ಕೋಟಿ ಬಜೆಟ್ ಮಂಡನೆ

KannadaprabhaNewsNetwork |  
Published : May 14, 2026, 01:15 AM IST
ಫೋಟೋ : ೧೩ಕೆಎಂಟಿ_ಎಂಎವೈ_ಕೆಪಿ೧ : ತಾಪಂ ಸಭೆಯಲ್ಲಿ ಅಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ ಬಜೆಟ್ ಮಂಡಿಸಿದರು. ಇಒ ರಾಜೇಂದ್ರ ಭಟ್ ಇದ್ದರು.  | Kannada Prabha

ಸಾರಾಂಶ

ಇಲ್ಲಿನ ತಾಪಂ ಸಭಾಭವನದಲ್ಲಿ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ ಬುಧವಾರ ನಡೆದ ಸಭೆಯಲ್ಲಿ ೨೦೨೬-೨೭ನೇ ಸಾಲಿಗಾಗಿ ತಾಪಂ ಬಜೆಟ್(ಆಯವ್ಯಯ) ಮಂಡಿಸಿದರು.

ಸಾಮಾನ್ಯ ಸಭೆಯಲ್ಲಿ ಆಯವ್ಯಯ ಮಂಡಿಸಿದ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ

ಕನ್ನಡಪ್ರಭ ವಾರ್ತೆ ಕುಮಟಾ

ಇಲ್ಲಿನ ತಾಪಂ ಸಭಾಭವನದಲ್ಲಿ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ ಬುಧವಾರ ನಡೆದ ಸಭೆಯಲ್ಲಿ ೨೦೨೬-೨೭ನೇ ಸಾಲಿಗಾಗಿ ತಾಪಂ ಬಜೆಟ್(ಆಯವ್ಯಯ) ಮಂಡಿಸಿದರು. ವಿವಿಧ ಲೆಕ್ಕ ಶೀರ್ಷಿಕೆಗಳಡಿ ಅನುದಾನ ನಿಗದಿ ಪಡಿಸಿ ಒಟ್ಟೂ ₹೧೦೭.೯೪ ಕೋಟಿ ಬಜೆಟ್ ಮಂಡಿಸಿದರು.

ಪ್ರಸಕ್ತ ಬಜೆಟ್‌ನಲ್ಲಿ ಕಳೆದ ೨೦೨೪-೨೫ ನೇ ಸಾಲಿನ ಬಜೆಟ್ ಗಿಂತ ₹೬.೪೩ ಕೋಟಿ ಅನುದಾನ ಕಡಿಮೆ ನಿಗದಿಸಲಾಗಿದೆ. ಈ ಪೈಕಿ ತಾಪಂ ಅಧೀನ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ವೇತನಾಂಶಕ್ಕೆ ₹೧೦೪.೬೨ ಕೋಟಿ ನಿಗದಿಯಾಗಿದ್ದು, ವೇತನೇತರ ವೆಚ್ಚಕ್ಕೆ ₹೩.೩೧ ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.ಬಳಿಕ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ, ಮಳೆಗಾಲ ಆರಂಭವಾಗುವುದರೊಳಗೆ ಸಾಧ್ಯವಾದಷ್ಟು ಕಾಮಗಾರಿಗಳನ್ನು ಸಂಪೂರ್ಣಗೊಳಿಸಬೇಕು. ಮಳೆಗಾಲಪೂರ್ವ ಸಿದ್ಧತೆ ಹಾಗೂ ಜಂಗಲ್ ಕಟಿಂಗ್‌ನಂತಹ ನಿರ್ವಹಣಾ ಕಾಮಗಾರಿಗಳನ್ನೂ ಕೈಗೊಂಡು ಸಮಸ್ಯೆಗಳಾಗದಂತೆ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದರು.ಸಾಧ್ಯವಿರುವ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಫಲಕ ಅಳವಡಿಸಬೇಕು ಎಂದರು. ಕಡು ಬೇಸಿಗೆಯ ಈ ಸಂದರ್ಭ ಪಂಚಾಯಿತಿ ಮಟ್ಟದಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿ ಹಾಗೂ ಅರಣ್ಯ ಇಲಾಖೆಯಿಂದಲೂ ಆಯ್ದ ಪ್ರದೇಶದಲ್ಲಿ ಕಾಡುಪ್ರಾಣಿಗಳಿಗೆ ನೀರಿಡಬೇಕು. ಮನೆಮನೆಗಳಲ್ಲೂ ಪಶುಪಕ್ಷಿಗಳಿಗೆ ನೀರುಣಿಸುವುದು ಉತ್ತಮ ಕಾರ್ಯ. ತಂಬಾಕು ಮುಕ್ತ ಗ್ರಾಮಗಳ ಸಫಲತೆಗೆ ವಿಶೇಷ ನಿಗಾವಹಿಸಿ ಎಂದರು.ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಪ್ರಗತಿ ಮಂಡಿಸಿ, ತಾಲೂಕಿನಲ್ಲಿ ಅರ್ಹ ವಿದ್ಯಾರ್ಥಿನಿಯರಿಗೆ ಎಚ್.ಪಿ.ವಿ ಲಸಿಕೆಯನ್ನು ಕೇವಲ ಶೇ.೪೬ರಷ್ಟು ಮಾತ್ರ ನೀಡಲಾಗಿದೆ. ಶಾಲೆಗೆ ರಜೆ ಹಾಗೂ ಕೆಲವೊಂದು ಸಮುದಾಯದ ಹಿಂಜರಿಕೆ ಕಾರಣದಿಂದ ಗುರಿ ಸಾಧಿಸುವುದು ಸಮಸ್ಯೆಯಾಗಿದೆ. ಆದರೂ ಮನೆಮಟ್ಟದಲ್ಲಿ ತೆರಳಿ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದರು.

ತಾಲೂಕಾಸ್ಪತ್ರೆಯಲ್ಲಿ ನೂತನ ನಿರ್ಮಿತ ಟ್ರಾಮಾಸೆಂಟರ್‌ಗೆ ಲಿಫ್ಟ ಅಳವಡಿಕೆಯೂ ಮುಗಿದಿದೆ. ಸರ್ಟಿಫಿಕೇಶನ್ ಮಾತ್ರ ಬಾಕಿ ಇದ್ದು ತಿಂಗಳಲ್ಲೇ ಉದ್ಘಾಟನೆಗೆ ಪ್ರಯತ್ನ ನಡೆದಿದೆ ಎಂದು ತಾಲೂಕಾಸ್ಪತ್ರೆ ಅಧಿಕಾರಿ ತಿಳಿಸಿದರು. ಬಿಇಒ ಉದಯ ನಾಯ್ಕ, ತಾಲೂಕಿನಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮವಾಗಿದೆ ಎಂದರು.ಕೃಷಿ ಇಲಾಖೆಯಿಂದ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ, ಪ್ರಸಕ್ತ ಮುಂಗಾರು ವಾಡಿಕೆ ಮಳೆಯು ಶೇ. ೯೫ ರಷ್ಟು ಮಾತ್ರ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರೈತರ ಅಗತ್ಯಕ್ಕೆ ತಕ್ಕಂತೆ ೬೫೫ ಕ್ವಿಂಟಲ್ ಭತ್ತ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು ಈಗಾಗಲೇ ೧೭೦ ಕ್ವಿಂಟಲ್ ಲಭ್ಯವಿದ್ದು ಮಳೆ ಬಿದ್ದ ತಕ್ಷಣ ವಿತರಿಸಲಾಗುವುದು. ರಸಗೊಬ್ಬರವನ್ನು ಸಾಫ್ಟವೇರ್ ತಂತ್ರಾಂಶದ ಮೂಲಕವೇ ವಿತರಿಸಲಾಗುವುದು ಎಂದರು.

ಆಡಳಿತಾಧಿಕಾರಿ ಪ್ರತಿಕ್ರಿಯಿಸಿ, ತಾಲೂಕಿನ ಇತರ ಸಗಟು ವಿತರಕರಲ್ಲಿರುವ ಬೀಜ, ರಸಗೊಬ್ಬರ, ಕೀಟನಾಶಕ ಮುಂತಾದವುಗಳ ಗುಣಮಟ್ಟ ಹಾಗೂ ಪ್ರಮಾಣವನ್ನು ಕಾಲಕಾಲಕ್ಕೆ ಪರಿಶೀಲಿಸಿ ಎಂದು ಸೂಚಿಸಿದರು. ತೋಟಗಾರಿಕೆ ಅಧಿಕಾರಿ ಲಿಂಗರಾಜ ಇಟ್ನಾಳ, ₹೨.೩೨ ಕೋಟಿ ಬೆಳೆ ವಿಮೆ ಪರಿಹಾರವನ್ನು ಅಡಕೆ ಬೆಳೆಗಾರರಿಗೆ ಜಮಾ ಮಾಡಲಾಗಿದೆ ಎಂದರು.

ಹೆಸ್ಕಾಂ ಇಇ ರಾಜೇಶ ಮಡಿವಾಳ, ತಾಲೂಕಿನಲ್ಲಿ ೧೭೪ ಸೂರ್ಯಘರ ಘಟಕ ಅಳವಡಿಕೆಯಾಗಿದೆ. ಜಿಲ್ಲೆಯಲ್ಲೇ ಮೊಟ್ಟ ಮೊದಲ ಬಾರಿಗೆ ಕುಮಟಾ ಕೈಗಾರಿಕಾ ವಸಾಹತು ಪ್ರದೇಶಕ್ಕೆ ಪ್ರತ್ಯೇಕ ೧೧೦ ಕೆವಿ ಫೀಡರ್ ನೀಡಲಾಗಿದ್ದು ಕೊಂಕಣ ರೈಲ್ವೆ ಮಾರ್ಗದಲ್ಲಿ ಅಂಡರ್ ಗ್ರೌಂಡ್ ಲೈನ್ ಹಾಕುವುದು ಮಾತ್ರ ಬಾಕಿ ಇದೆ. ಇದಕ್ಕಾಗಿ ಕೊಂಕಣ ರೈಲ್ವೆಯವರಿಗೆ ₹೨.೫೫ ಲಕ್ಷ ಸಂದಾಯಿಸಲಾಗಿದೆ. ಅರಣ್ಯ ಗ್ರಾಮ ನನ್ನಳ್ಳಿಗೆ ವಿದ್ಯುತ್ ಸಂಪರ್ಕ ಸಮಸ್ಯೆ ಬಗೆಹರಿಸಲಾಗಿದೆ ಎಂದರು. ಆದರೆ ವಿವಿಧ ಪಂಚಾಯಿತಿಗಳಿಂದ ಒಟ್ಟೂ ₹೬೭.೬೨ ಲಕ್ಷ ಬಿಲ್ ಬಾಕಿ ಇದೆ. ಹೇಗಾದರೂ ಮಾಡಿ ಭರಣ ಮಾಡಿಸಿ ಎಂದರು. ಆಡಳಿತಾಧಿಕಾರಿ ಪ್ರತಿಕ್ರಿಯಿಸಿ, ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಇಂಥ ಸ್ಥಿತಿ ಇದೆ. ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯಲಿದೆ ಎಂದರು.ಪಿಡಬ್ಲುಡಿ ಎಇ ಎಂ.ಪಿ. ನಾಯ್ಕ, ಮೇದಿನಿ ರಸ್ತೆಗೆ ₹೪ ಕೋಟಿ ಮಂಜೂರಾಗಿದ್ದರೂ ಅರಣ್ಯ ಇಲಾಖೆಯಿಂದ ಅನುಮತಿ ಈವರೆಗೆ ಸಿಕ್ಕಿಲ್ಲದೇ ಕಾಮಗಾರಿ ಆರಂಭವಾಗಿಲ್ಲ ಎಂದರು. ವಾಲಗಳ್ಳಿಯ ಹಾರೋಡಿ ಕ್ರಾಸ್ ಬಳಿ ಮಳೆಗಾಲದಲ್ಲಿ ರಸ್ತೆಯ ಮೇಲೆ ಮಳೆನೀರು ಕಟ್ಟಿಕೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ಕಾಮಗಾರಿ ನಡೆಸಲು ಭೂಸ್ವಾಧೀನಕ್ಕೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು ಶೀಘ್ರ ಸಲ್ಲಿಸಲಾಗುವುದು ಎಂದರು. ಉಳಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಇಒ ರಾಜೇಂದ್ರ ಭಟ್ ಇದ್ದರು. ತಾಪಂ ಅಧಿಕಾರಿ ನಾಗರಾಜ ಶೆಟ್ಟಿ ಸ್ವಾಗತಿಸಿ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಮುಚ್ಚುವ ಹುನ್ನಾರ: ಗಡ್ಡಿ- ಬಂಡ್ರಾಳ್ ಗ್ರಾಮಸ್ಥರ ಪ್ರತಿಭಟನೆ
ಕಾಳನದಿ ದಡದಲ್ಲಿ ಮರಿ ಕಾವಲು ಕಾಯುತ್ತಿರುವ ಮೊಸಳೆಯಮ್ಮ