ದೇವಾಲಯಕ್ಕೆ ಜಾಗ ನೀಡದ ವಿವಾದ: ಶೆಡ್‌ಗೆ ಬೆಂಕಿ ಹಾಕಿದ ಕಿಡಿಗೇಡಿಗಳು

KannadaprabhaNewsNetwork |  
Published : Feb 12, 2025, 12:33 AM IST
11 ಬೀರೂರು 1 ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ಮೈಲಾರಪ್ಪ, ಜಯಮ್ಮ ದಂಪತಿಗಳಿಗೆ ಸೇರಿದ ಶೆಡ್ ಗೆ ಬೆಂಕಿ ಹಾಕಿ 20ಲಕ್ಷರೂ ಮೌಲ್ಯದ ವಸ್ತುಗಳನ್ನು ಹಾಳು ಮಾಡಿರುವುದು. | Kannada Prabha

ಸಾರಾಂಶ

ಬೀರೂರು, ದೇವಾಲಯಕ್ಕೆ ಜಾಗ ನೀಡಲಿಲ್ಲವೆಂಬ ಕಾರಣಕ್ಕೆ ಮಿನಿ ಟ್ರಾಕ್ಟರ್, ಮೋಟಾರು, ಕೇಬಲ್, ಹುಲ್ಲಿನ ಬವಣೆ ಹಾಗೂ 3 ಸಾವಿರ ಕೊಬ್ಬರಿ ಇದ್ದ ಶೆಡ್ಡಿಗೆ ಗ್ರಾಮದ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

ಹೊತ್ತಿ ಉರಿದ ಟ್ರಾಕ್ಟರ್, ಹುಲ್ಲಿನ ಬವಣೆ । ದೊಡ್ಡಘಟ್ಟ ಗ್ರಾಮದಲ್ಲಿ ಘಟನೆ: ಪೊಲೀಸರು, ಕಂದಾಯಾಧಿಕಾರಿ ಭೇಟಿ

ಕನ್ನಡಪ್ರಭ ವಾರ್ತೆ,ಬೀರೂರು.ದೇವಾಲಯಕ್ಕೆ ಜಾಗ ನೀಡಲಿಲ್ಲವೆಂಬ ಕಾರಣಕ್ಕೆ ಮಿನಿ ಟ್ರಾಕ್ಟರ್, ಮೋಟಾರು, ಕೇಬಲ್, ಹುಲ್ಲಿನ ಬವಣೆ ಹಾಗೂ 3 ಸಾವಿರ ಕೊಬ್ಬರಿ ಇದ್ದ ಶೆಡ್ಡಿಗೆ ಗ್ರಾಮದ ಕಿಡಿಗೇಡಿಗಳು ಬೆಂಕಿ ಹಾಕಿದ ಪರಿಣಾಮ 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ. ದೊಡ್ಡಘಟ್ಟ ಗ್ರಾಮದ ತೆಲುಗು ಗೌಡ ಸಮಾಜದ ಮೈಲಾರಪ್ಪ ಮತ್ತು ಜಯಮ್ಮ ದಂಪತಿಗೆ ಸೇರಿದ್ದ ಶೆಡ್‌ಗೆ ಕಿಡಿಗೇಡಿಗಳು ಬೆಂಕಿಇಟ್ಟು ಸುಟ್ಟು ಹಾಕಿದ್ದು ಈ ಬಡಕುಟುಂಬದ ಮೈಲಾರಪ್ಪ, ಜಯಮ್ಮ ಗೋಳಾಡುತ್ತಿದ್ದ ದೃಶ್ಯ ಕಂಡು ಬಂತು. ಘಟನೆ ವಿವರ: ದೊಡ್ಡಘಟ್ಟ ಗ್ರಾಮದ 90 ಮನೆಗಳಲ್ಲಿ ತೆಲುಗುಗೌಡ ಸೇರಿದಂತೆ ಮತ್ತಿತರರ ಸಮಾಜ ದವರು ವಾಸಿಸುತ್ತಿದ್ದಾರೆ. ಈ ಗ್ರಾಮದ ಮುಂಭಾಗದಲ್ಲಿ ಊರಿನ ಹಿರಿಯರು ಗ್ರಾಮಕ್ಕೆ ಗುಳ್ಳಮ್ಮದೇವಿ ದೇಗುಲ ಕಟ್ಟಿಸಲು ತೀರ್ಮಾನಿಸಿ, ಅದರಂತೆ ದೇವಸ್ಥಾನದೊಂದಿಗೆ ಶಾಲೆ ಕಟ್ಟಿಸಲು ತೀರ್ಮಾನಿಸಿ ದ್ದರಿಂದ ಇನ್ನು ಹೆಚ್ಚಿನ ಜಾಗಕ್ಕಾಗಿ ಊರಿನ ಹಿರಿಯರು ತೀರ್ಮಾನಿಸಿದ್ದರು. ಅದಕ್ಕೆ ದೇವಾಲಯ ಮಂಭಾಗದ ಸರ್ವೆ ನಂ. 74ರ ಮೈಲಾರಪ್ಪನವರ ತಂದೆಗೆ ಜಮೀನು ನೀಡಲು ಕೇಳಿದಾಗ ಅವರು ಶಾಲೆ ಮತ್ತು ದೇವಸ್ಥಾನಕ್ಕೆ 18 ಗುಂಟೆ ಜಮೀನು ಬಿಟ್ಟುಕೊಟ್ಟಿದ್ದರು ಎಂದು ಪತ್ರಿಕೆಗೆ ನೊಂದ ಜಯಮ್ಮ ತಿಳಿಸಿದರು.ಆದರೆ ಇತ್ತೀಚೆಗೆ ಗ್ರಾಮದ ಮುಖಂಡರು ದೇವಿ ಜಾತ್ರೆ ಸಮಯದಲ್ಲಿ ರಥ ತಿರುಗಲು, ಪಾನಕದ ಬಂಡಿ ಓಡಿಸಲು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೇವಸ್ಥಾನಕ್ಕೆ ಜಾಗ ಸಾಲುತ್ತಿಲ್ಲ. ನಿಮ್ಮ ಒಂದು ಎಕರೆ ಕೃಷಿ ಭೂಮಿ ಬಿಡುವಂತೆ ಗ್ರಾಮದ ಮುಖಂಡರು ಪಂಚಾಯ್ತಿಯಲ್ಲಿ ಒತ್ತಾಯಿಸಿದ್ದರು. ಮೈಲಾರಪ್ಪ ಕುಟುಂಬ ಇದಕ್ಕೆ ಒಪ್ಪದ ಹಿನ್ನಲೆಯಲ್ಲಿ ಕೆಲವು ಮುಖಂಡರು ಇವರನ್ನು ಊರಿಂದ 1ತಿಂಗಳ ಕಾಲ ಬಹಿಷ್ಕಾರ ಹಾಕಿ ಯಾರು ಮಾತನಾಡಿಸಬಾರದು. ಇವರ ನೆರವಿಗೆ ನಿಲ್ಲಬಾರದು ಎಂದು ಆದೇಶಿಸಿ, ಹಾಗೇನಾದರೂ ಸಹಾಯ ಮಾಡಿದರೆ, ದಂಡ ಹಾಕಲಾಗುವುದು ಎಂದು ಎಚ್ಚರಿಸಿದ್ದರು.ಈ ಬಹಿಷ್ಕಾರದ ವಿರುದ್ಧ ಮೈಲಾರಪ್ಪ, ಜಯಮ್ಮ ದಂಪತಿ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡಿದ್ದರು. ಈ ವಿಷಯ ಗ್ರಾಮದ ಮುಖಂಡರಿಗೆ ತಿಳಿದು ಮತ್ತೆ ಪಂಚಾಯ್ತಿ ಕರೆದುಈ ವೇಳೆ ಗ್ರಾಮಸ್ಥರು ಹಲ್ಲೆ ನಡೆಸಿದ್ದರು. ಈ ಬಗ್ಗೆ ಕುಟುಂಬದವರು ಬೀರೂರು ಪೊಲೀಸರಿಗೆ ದೂರು ನೀಡಿದ್ದರು. ಇದನ್ನು ಸಹಿಸದೆ ಕಿಡಿ ಗೇಡಿಗಳು ನಿನ್ನೆ ರಾತ್ರಿ 11.45ರ ಸುಮಾರಿನಲ್ಲಿ ನಮ್ಮ ಜಾಗದಲ್ಲಿದ್ದ ಶೆಡ್ ನಲ್ಲಿ ನಿಲ್ಲಿಸಿದ್ದ ₹ 6 ಲಕ್ಷ ಮೌಲ್ಯದ ಮಿನಿಟ್ರಾಕ್ಟರ್, ಕೊಳವೆ ಬಾವಿಗೆ ಬಿಡಲು ತಂದಿದ್ದ 2 ಮೋಟಾರು ಹಾಗೂ ಪೈಪ್ ಗಳು, ಶೆಡ್ ನಲ್ಲಿದ್ದ ₹3ಸಾವಿರ ಒಣ ಕೊಪ್ಪರಿ ಹಾಗೂ ಪಕ್ಕದಲ್ಲೇ ಇದ್ದ ಹುಲ್ಲಿನ ಬವಣೆಗೆ ರಾತ್ರಿ ಡಿಸೇಲ್ ಸುರಿದು ಬೆಂಕಿ ಹಾಕಿದ್ದಾರೆ.ಇದರಿಂದ ಕುಟುಂಬಕ್ಕೆ 20ಲಕ್ಷಕ್ಕೂ ಅಧಿಕ ಹಣ ನಷ್ಟವಾಗಿದೆ.ಮಗ ಪ್ರದೀಪ್ ಮಾತನಾಡಿ, ಗ್ರಾಮದ ಗೌಡರು ನಮಗೆ ಬದುಕಲು ಬಿಡುತ್ತಿಲ್ಲ. ನೆಮ್ಮದಿ ಕೆಡಿಸುತ್ತಿರುವ ಕೆಲವು ಕಿಡಿಗೇಡಿಗಳು ಮತ್ತು ಅನ್ಯಾಯವೆಸಗಿದವರಿಂದ ನ್ಯಾಯ ಒದಗಿಸುವಂತೆ ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ತಿಳಿಸಿದರು.

ದೇವಸ್ಥಾನಕ್ಕೆ ಗ್ರಾಮದ ಹತ್ತಿರದಲ್ಲೇ ಸರ್ಕಾರ 3ಎಕರೆ ಹಾಗೂ 18ಗುಂಟೆ ಜಾಗವನ್ನು ನಮ್ಮ ಪೂರ್ವಿಕರು ಬಿಟ್ಟು ಕೊಟ್ಟಿದ್ದಾರೆ. ಇನ್ನು ಬೇಕು ಎಂದರೆ ನಮ್ಮ ಮಕ್ಕಳಿಗೆ ಏನು ನೀಡಲಿ, ಈ ಅನ್ಯಾಯವನ್ನು ಸರ್ಕಾರ ಮತ್ತು ಜಿಲ್ಲಾಧಿಕಾರಿ ಪರಿಶೀಲಿಸಿ ನಮಗೆ ನ್ಯಾಯ ದೊರತಕಿಸಿ ಕೊಡಬೇಕು ಎಂದು ಮೈಲಾರಪ್ಪ ಪತ್ರಿಕೆಯೊಂದಿಗೆ ಕಣ್ಣೀರಿಟ್ಟರು.

-- ಬಾಕ್ಸ್--

ಸಿಸಿ ಟಿವಿಯಿಂದ ಕಿಡಿಗೇಡಿಗಳ ಪತ್ತೆ:ಘಟನಾ ಸ್ಥಳಕ್ಕೆ ಆಗಮಿಸಿದ ಪಿಎಸೈ ಸಜಿತ್ ಕುಮಾರ್ ಮತ್ತು ತಂಡ ಸ್ಥಳ ಜಮೀನಿ ನಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿ ಕೃತ್ಯ ಎಸಗಿದ ಗ್ರಾಮದ ಕೆಲವರನ್ನು ಪತ್ತೆ ಹಚ್ಚಿ ತಕ್ಷಣವೇ ಬಂಧಿಸಿದ್ದಾರೆ. ನೊಂದ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಗ್ರಾಮದಲ್ಲಿ ಸಾಮರಸ್ಯ ಇಲ್ಲದೆ ಇಂತಹ ಅಹಿತಕರ ಘಟನೆಗಳು ಕಾರಣವಾಗುತ್ತಿದ್ದು, ಜಿಲ್ಲಾಧಿ ಕಾರಿ ಮತ್ತು ಜನಪ್ರತಿನಿಧಿಗಳು ಇಲ್ಲಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಹೇಳಿದರು.11 ಬೀರೂರು 1ಬೀರೂರು ಸಮೀಪದ ದೊಡ್ಡಘಟ್ಟ ಗ್ರಾಮದಲ್ಲಿ ಸೋಮವಾರ ರಾತ್ರಿ ಕಿಡಿಗೇಡಿಗಳು ಮೈಲಾರಪ್ಪ, ಜಯಮ್ಮ ದಂಪತಿಗೆ ಸೇರಿದ ಶೆಡ್ ಗೆ ಬೆಂಕಿ ಹಾಕಿ 20 ಲಕ್ಷರೂ ಮೌಲ್ಯದ ವಸ್ತುಗಳನ್ನು ಹಾಳು ಮಾಡಿರುವುದು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌