ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ: ಡಿಸಿಯಿಂದ ಪೂರ್ವಭಾವಿ ಸಭೆ

KannadaprabhaNewsNetwork | Published : Mar 15, 2024 1:17 AM

ಸಾರಾಂಶ

ಸಮಾವೇಶದಲ್ಲಿ 50 ಸಾವಿರಕ್ಕೂ ಜನರು ಭಾಗವಹಿಸುತ್ತಿದ್ದು, ಅವರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಬೇಕು.ವೇದಿಕೆ, ಶಿಷ್ಟಾಚಾರ, ಆಹಾರ, ಸ್ವಚ್ಛತೆ, ಭದ್ರತೆ, ಆರೋಗ್ಯ, ಪ್ರಚಾರ, ಬಸ್ ಗಳ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದ್ದು, ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು. ಗ್ರಾಮ ಪಂಚಾಯ್ತಿಗಳಿಂದ ನಗರ ಸಭೆ, ಪುರಸಭೆಗಳಿಂದ ಫಲಾನುಭವಿಗಳನ್ನು ಕರೆ ತರಲು ಬಸ್‌ ಗಳ ವ್ಯವಸ್ಥೆ ಮಾಡಲಾಗಿದ್ದು, ಫಲಾನುಭವಿಗಳ ಕರೆ ತರಲು ಅಗತ್ಯ ಕ್ರಮ ವಹಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದಲ್ಲಿ ಮಹಾರಾಜ ಕಾಲೇಜು ಮೈದಾನದಲ್ಲಿ ಮಾ.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ವಿಡೀಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸಮಾವೇಶಕ್ಕಾಗಿ ನಡೆಸಲಾಗಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಗ್ರಾಮ ಪಂಚಾಯಿತಿಗಳಿಂದ, ನಗರ ಸಭೆ, ಪುರಸಭೆಗಳಿಂದ ಫಲಾನುಭವಿಗಳನ್ನು ಕರೆ ತರಲು ಬಸ್‌ ಗಳ ವ್ಯವಸ್ಥೆ ಮಾಡಲಾಗಿದ್ದು, ಫಲಾನುಭವಿಗಳ ಕರೆ ತರಲು ಅಗತ್ಯ ಕ್ರಮ ವಹಿಸಬೇಕು. ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮೀಣ ಮಟ್ಟಕ್ಕೆ ತೆರಳಿ, ಸಮಾವೇಶ ಬಗ್ಗೆ ಅವರಿಗೆ ಮಾಹಿತಿ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನ ನೀಡುವಂತೆ ಅವರು ಹೇಳಿದರು.

ಸಮಾವೇಶದಲ್ಲಿ 50 ಸಾವಿರಕ್ಕೂ ಜನರು ಭಾಗವಹಿಸುತ್ತಿದ್ದು, ಅವರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಬೇಕು.

ವೇದಿಕೆ, ಶಿಷ್ಟಾಚಾರ, ಆಹಾರ, ಸ್ವಚ್ಛತೆ, ಭದ್ರತೆ, ಆರೋಗ್ಯ, ಪ್ರಚಾರ, ಬಸ್ ಗಳ ಸಮಿತಿಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದ್ದು, ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು ಎಂದು ಅವರು ಸೂಚಿಸಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಗಳನ್ನು ಗುರುತಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಪಂ ಸಿಇಒ ಕೆ.ಎಂ. ಗಾಯತ್ರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಗ್ಯಾರಂಟಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಲು ಎಂ.ಕೆ. ಸೋಮಶೇಖರ್ ಕರೆಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನುಡಿದಂತೆ ನಡೆದಿದೆ. ಹೀಗಾಗಿ, ಮಾ.15 ರಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸುವಂತೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಕರೆ ನೀಡಿದರು.ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಸಮಾವೇಶದ ಹಿನ್ನೆಲೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು 2013 ರಿಂದ 18ನೇ ವರ್ಷದಲ್ಲೂ ನುಡಿದಂತೆ ನಡೆದು ಜನಮನ್ನಣೆ ಗಳಿಸಿದ್ದರು. ಈಗಲೂ 5 ಗ್ಯಾರಂಟಿ ಭರವಸೆಗಳನ್ನು ಈಡೇರಿಸುವ ಮೂಲಕ ರಾಜ್ಯದ ಜನರ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ ಎಂದರು.ಕೆ.ಆರ್. ಕ್ಷೇತ್ರದಲ್ಲಿ 35 ಸಾವಿರಕ್ಕೂ ಹೆಚ್ಚು ಕುಟುಂಬಗಳು ಹಾಗೂ ಮನೆಗಳಿದ್ದು, ಇಷ್ಟು ಕುಟುಂಬಗಳು ಗ್ಯಾರಂಟಿ ಯೋಜನೆಗಳ ಒಂದಲ್ಲ ಒಂದು ಫಲಾನುಭವಿಗಳಾಗಿದ್ದಾರೆ. ಈ ಎಲ್ಲಾ ಫಲಾನುಭವಿಗಳನ್ನು ಸಮಾವೇಶಕ್ಕೆ ಕರೆ ತರುವ ಪ್ರಯತ್ನವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದು ಅವರು ಮನವಿ ಮಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ. ಸೋಮಶೇಖರ್, ಶ್ರೀಧರ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮಾಜಿ ಮೇಯರ್ ಗಳಾದ ಟಿ.ಬಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ರವಿಶಂಕರ್, ವಿಜಯಕುಮಾರ್, ಈಶ್ವರ್ ಚಕ್ಕಡಿ, ವೆಂಕಟೇಶ್, ಮೂರ್ತಿ, ಸುಂದರ್, ನಾಸೀರ್, ವಿದ್ಯಾ, ಭವ್ಯ, ಲತಾ ರಂಗನಾಥ್, ನಿರಾಲ್ ಶಾ, ರಾಕೇಶ್ ಮೊದಲಾದವರು ಇದ್ದರು.

Share this article