ಜಿಲ್ಲಾಡಳಿತದ ಸಹಾಯವಾಣಿಗೆ ಮಾಹಿತಿ ನೀಡಿ ವಿಪತ್ತು ನಿರ್ವಹಣೆಗೆ ಸಹಕರಿಸಿ: ಡಾ.ಎನ್.ವಿ.ಪ್ರಸಾದ್

KannadaprabhaNewsNetwork |  
Published : May 29, 2025, 12:08 AM IST
ಚಿತ್ರ : 28ಎಂಡಿಕೆ1 :  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್  ಮಾತನಾಡಿದರು.  | Kannada Prabha

ಸಾರಾಂಶ

ವಿಪತ್ತು ನಿರ್ವಹಣೆ ಸಂಬಂಧ ಜಿಲ್ಲಾ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ಮಾಡಿರುವಂತೆ ತಾಲೂಕು ಮಟ್ಟದಲ್ಲಿಯೂ ಸಹ ತಹಸೀಲ್ದಾರರ ನೇತೃತ್ವದಲ್ಲಿ ವಾಟ್ಸಾಪ್ ಗುಂಪು ರಚಿಸಿಕೊಂಡು ತಾ.ಪಂ.ಇಒ, ಪಿಡಿಒ, ಗ್ರಾ.ಪಂ.ಕಾರ್ಯದರ್ಶಿಗಳು, ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರ್‌ಗಳು, ಪೊಲೀಸ್, ಅಗ್ನಿಶಾಮಕ, ಗ್ರಾಮ ಸಹಾಯಕರು, ಗೃಹರಕ್ಷಕದಳ ಗುಂಪಿಗೆ ಸೇರಿಸಿಕೊಂಡು ವಿಪತ್ತು ನಿರ್ವಹಣೆಯನ್ನು ನಿರ್ವಹಿಸಬೇಕು.

ಮುಂಗಾರು ಹಿನ್ನೆಲೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಸಭೆ

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಆರಂಭವಾಗಿದ್ದು, ಜಿಲ್ಲಾಡಳಿತದಿಂದ ಸಹಾಯವಾಣಿ ಸಂಖ್ಯೆ 08272-221077 ಆರಂಭಿಸಲಾಗಿದೆ. ಜೊತೆಗೆ 8550001077 ವಾಟ್ಸಾಪ್ ಸಂಖ್ಯೆಯನ್ನು ಸಹ ಆರಂಭಿಸಿದ್ದು, ಅತಿವೃಷ್ಟಿಯಿಂದ ಉಂಟಾಗುವ ವಿಪತ್ತಿನ ಬಗ್ಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್ ತಿಳಿಸಿದ್ದಾರೆ.ಮುಂಗಾರು ಆರಂಭ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಂಗಳವಾರ ನಡೆದ ಸಭೆಯಲ್ಲಿ ಮಾಹಿತಿ ಪಡೆದು ಅವರು ಮಾತನಾಡಿದರು.ಮಡಿಕೇರಿ ತಾಲೂಕು ವಿಪತ್ತು ನಿರ್ವಹಣಾ ಕೇಂದ್ರ 08272-228396, ವಿರಾಜಪೇಟೆ ತಾಲೂಕು ವಿಪತ್ತು ನಿರ್ವಹಣಾ ಕೇಂದ್ರ-08274-257328, ಸೋಮವಾರಪೇಟೆ ತಾಲೂಕು ವಿಪತ್ತು ನಿರ್ವಹಣಾ ಕೇಂದ್ರ-08276-282045, ಕುಶಾಲನಗರ ತಾಲೂಕು ವಿಪತ್ತು ನಿರ್ವಹಣಾ ಕೇಂದ್ರ-08276-200198 ಹಾಗೂ ಪೊನ್ನಂಪೇಟೆ ತಾಲೂಕು ವಿಪತ್ತು ನಿರ್ವಹಣಾ ಕೇಂದ್ರ-08274-249700 ಸಹಾಯವಾಣಿ ಕೇಂದ್ರ ಆರಂಭಿಸಿಲಾಗಿದೆ ಎಂದರು. ಮಳೆಯಿಂದ ಉಂಟಾಗುವ ಹಾನಿ ಸಂಬಂಧ ಜಿಲ್ಲಾಡಳಿತದಿಂದ ಆರಂಭಿಸಿರುವ ವಾಟಸಾಪ್ ಗುಂಪಿಗೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಛಾಯಾಚಿತ್ರ ಹಾಗೂ ವಾಯ್ಸ್ ರೆಕಾರ್ಡ್ ಸಹಿತ ಮಾಹಿತಿ ನೀಡಬಹುದಾಗಿದೆ ಎಂದರು.

ವಿಪತ್ತು ನಿರ್ವಹಣೆ ಸಂಬಂಧ ಜಿಲ್ಲಾ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ಮಾಡಿರುವಂತೆ ತಾಲೂಕು ಮಟ್ಟದಲ್ಲಿಯೂ ಸಹ ತಹಸೀಲ್ದಾರರ ನೇತೃತ್ವದಲ್ಲಿ ವಾಟ್ಸಾಪ್ ಗುಂಪು ರಚಿಸಿಕೊಂಡು ತಾ.ಪಂ.ಇಒ, ಪಿಡಿಒ, ಗ್ರಾ.ಪಂ.ಕಾರ್ಯದರ್ಶಿಗಳು, ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರ್‌ಗಳು, ಪೊಲೀಸ್, ಅಗ್ನಿಶಾಮಕ, ಗ್ರಾಮ ಸಹಾಯಕರು, ಗೃಹರಕ್ಷಕದಳ ಗುಂಪಿಗೆ ಸೇರಿಸಿಕೊಂಡು ವಿಪತ್ತು ನಿರ್ವಹಣೆಯನ್ನು ನಿರ್ವಹಿಸಬೇಕು ಎಂದರು.

ಈಗಾಗಲೇ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರ ಜೊತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಹ ಸಮನ್ವಯ ಸಾಧಿಸಿ ವಿಪತ್ತು ನಿರ್ವಹಣೆ ಮಾಡಬೇಕು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಡಾ.ಎನ್.ವಿ.ಪ್ರಸಾದ್ ಅವರು ಸೂಚಿಸಿದರು. ಜಿಲ್ಲೆಯಲ್ಲಿ ಮುಂಗಾರು ಹಿನ್ನೆಲೆ ಬಿರುಗಾಳಿ ಹೆಚ್ಚಾಗಿದ್ದು, ಇದರಿಂದ ಮನೆ ಹಾಗೂ ವಿದ್ಯುತ್ ಕಂಬಕ್ಕೆ ಹೆಚ್ಚಿನ ಹಾನಿಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಗಮನ ಹರಿಸಬೇಕು ಎಂದರು. ಲೋಕೋಪಯೋಗಿ, ಪಂಚಾಯಿತಿ ಮತ್ತಿತರ ಎಂಜಿನಿಯರ್ ಇಲಾಖೆಗಳು ರಸ್ತೆ ಹಾನಿ, ರಸ್ತೆಗೆ ಮರ ಬಿದ್ದಲ್ಲಿ ಸುಗಮ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಡಾ.ಎನ್.ವಿ.ಪ್ರಸಾದ್ ಅವರು ಹೇಳಿದರು. ಅಗತ್ಯವಿರುವ ಕಡೆಗಳಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಈ ಬಾರಿ ಮುಂಗಾರು ಮುಂಚಿತವಾಗಿ ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಜಿಲ್ಲೆಯ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶದಲ್ಲಿನ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.ಕಾಳಜಿ ಕೇಂದ್ರದಲ್ಲಿ ಉತ್ತಮ ಆಹಾರ ನೀಡಬೇಕು. ಯಾವುದೇ ಕಾರಣಕ್ಕೂ ದೂರು ಬರದಂತೆ ಗಮನಹರಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಕಿವಿಮಾತು ಹೇಳಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಲ್ಲಾಡಳಿತ ಬಳಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ 40 ಕೋಟಿ ರು. ಹಣವಿದೆ. ಜೊತೆಗೆ ತಹಸೀಲ್ದಾರರ ಬಳಿಯು ಸಹ ಹಣವಿದೆ ಎಂದು ಮಾಹಿತಿ ನೀಡಿದರು.ಈ ಬಾರಿ ಮೇನಲ್ಲೇ ಮುಂಗಾರು ಆರಂಭವಾಗಿದ್ದು, ಹೆಚ್ಚಿನ ಬಿರುಗಾಳಿಯಿಂದ ಮನೆಗೆ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.ಈ ಬಾರಿ 23 ಮನೆಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ಪಾವತಿಸಲು ಕ್ರಮವಹಿಸಲಾಗುತ್ತಿದೆ ಎಂದರು. * ಪ್ರವಾಹ ಪೀಡಿತ ಪ್ರದೇಶ ಗುರುತಿಸುವಿಕೆ

ಅಗ್ನಿಶಾಮಕ ದಳ, ಪೊಲೀಸ್ ರಕ್ಷಣಾ ತಂಡ, ಗೃಹರಕ್ಷಕ ದಳ, ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದ್ದು, ಭೂಕುಸಿತ ಹಾಗೂ ಪ್ರವಾಹ ಪೀಡಿತ ಪ್ರದೇಶಗಳನ್ನು ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಹಾಗೂ ಈ ಹಿಂದೆ ವಿಕೋಪವಾದ ಸ್ಥಳಗಳ ಆಧಾರದ ಮೇಲೆ ಗುರುತಿಸಲಾಗಿದೆ. ಒಟ್ಟು 43 ಪ್ರವಾಹ ಪೀಡಿತ ಮತ್ತು 44 ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭ ಮಾತನಾಡಿದ ಜಿ.ಪಂ. ಸಿಇಒ ಆನಂದ್ ಪ್ರಕಾಶ್ ಮೀನಾ, ಶಾಲಾ ಕೊಠಡಿ ದುರಸ್ತಿಗೆ ಪಂಚಾಯತ್ರಾಜ್ ಎಂಜಿನಿಯರ್‌ಗೆ ವಹಿಸಲಾಗಿದೆ ಎಂದರು.

ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಕ್ಷೀರಭಾಗ್ಯ ಯೋಜನೆಯನ್ನು ಸಮರ್ಪಕವಾಗಿ ತಲುಪಿಸಬೇಕು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರ್ಪಡೆ ಮಾಡುವಂತಾಗಬೇಕು. ಯಾವುದೇ ಕಾರಣಕ್ಕೂ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯಬಾರದು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಅಧಿಕಾರಿ ಕಾವೇರಿ ಅವರು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದ 7 ಮಕ್ಕಳನ್ನು ಪತ್ತೆಹಚ್ಚಿ ಶಾಲೆಗೆ ಸೇರ್ಪಡೆ ಮಾಡಲಾಗಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರಕೃತಿ ವಿಕೋಪ ಕಂಟ್ರೋಲ್ ರೂಮ್ ಸಹಾಯವಾಣಿ ಕೇಂದ್ರ 24*7 ಕಾರ್ಯ ನಿರ್ವಹಿಸಲಿವೆ. ಹಾಗೆಯೇ ಸೆಸ್ಕ್, ಅರಣ್ಯ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ಮಾಹಿತಿ ನೀಡಿ, ಈ ಬಾರಿ ಮೇನಲ್ಲಿ ಹೆಚ್ಚಿನ ಮಳೆಯಾಗಿದ್ದು, 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡುವ ಗುರಿ ಇದೆ. ಬಿತ್ತನೆ ಬೀಜ ಜೂನ್ ಮೊದಲ ವಾರದಿಂದ ವಿತರಿಸಲಾಗುತ್ತದೆ ಎಂದರು. 88 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದ್ದು, ಸೆಪ್ಟೆಂಬರ್‌ವರೆಗೂ ರಸಗೊಬ್ಬರ ಪೂರೈಕೆಯಾಗಿದೆ. ಉಳಿದಂತೆ ರಸಗೊಬ್ಬರ ಪೂರೈಕೆಯಾಗಲಿದ್ದು,. ಡಿಎಪಿ ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಮಾಹಿತಿ ನೀಡಿದರು.ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ನಗರಾಭಿವೃದ್ಧಿ ಇಲಾಖೆಗಳು ಮುಂತಾದ ಸಂಬಂಧಪಟ್ಟ ಎಂಜಿನಿಯರಿಂಗ್ ಇಲಾಖೆಗಳು ಪ್ರವಾಹದ ಪರಿಸ್ಥಿತಿ ತಲೆದೋರದಂತೆ ತಮ್ಮ ವ್ಯಾಪ್ತಿಯ ಚರಂಡಿ, ನಾಲೆಗಳಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು. ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ ಕಂದಾಯ ಇಲಾಖೆಗೆ ಸಂಬಂದಿದಂತೆ ಮಾಹಿತಿ ನೀಡಿದರು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ತಾ.ಪಂ. ಇಒಗಳು, ಎಂಜಿನಿಯರ್‌ಗಳು ಹಲವು ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌