ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ನೊಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಜಿಲ್ಲಾಧಿಕಾರಿ ಕಚೇರಿ, ಎಲ್ಲಾ ತಾಲೂಕುಗಳ ತಹಸೀಲ್ದಾರ್ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ಇಲ್ಲವೇ ಎಂಬುದರ ಬಗ್ಗೆ ಎಲ್ಲಾ ಅರ್ಹ ಮತದಾರರು ಖಚಿತಪಡಿಸಿಕೊಳ್ಳಬೇಕು. ಈ ಸಂಬಂಧ ಹಕ್ಕು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕಾಗಿ ಮಾನ್ಯತೆ ಪಡೆದ ನೊಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಾವು ನಿಯೋಜಿಸಿರುವ ಬಿಎಲ್ಎ-2 ರವರ ಮೂಲಕ ವ್ಯಾಪಕ ಪ್ರಚಾರ ನೀಡುವಂತೆ ಕೋರಿದರು.
ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಕೈಬಿಟ್ಟು ಹೋಗಿದ್ದಲ್ಲಿ ಮತದಾರರು ನಮೂನೆ-6ನ್ನು ಘೋಷಣಾ ಪತ್ರ ಹಾಗೂ ಅಗತ್ಯ ದಾಖಲೆಗಳೊಂದಿಗೆ ನೀಡಿ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದೆ. ಅಕ್ಟೋಬರ್ 1ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ 18 ವರ್ಷ ತುಂಬಿದ ಹೊಸ ಮತದಾರರನ್ನು ಪಟ್ಟಿಗೆ ಸೇರಿಸಲು ಫಾರಂ-6 ಅನ್ನು ನೀಡುವ ಕಾರ್ಯ ಮುಂದುವರಿದಿದೆ. ಈ ನಿಟ್ಟಿನಲ್ಲಿ ಮಾನ್ಯತೆ ಪಡೆದ ನೊಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಂತಿಮ ಮತದಾರರ ಪಟ್ಟಿ ಪ್ರಕಟವಾಗುವವರೆಗೂ ಪರಿಷ್ಕರಣೆ ಮಹತ್ವದ ಕಾರ್ಯಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಮನವಿ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಚ್.ಎಸ್. ತೋಂಟಧಾರ್ಯಸ್ವಾಮಿ, ಬಿ.ಎಂ. ಕೃಷ್ಣಮೂರ್ತಿ, ಎಸ್. ಬಾಲಸುಬ್ರಮಣ್ಯ, ಸಯ್ಯದ್ ಅಕ್ರಂ, ಎ.ಎಚ್. ನಸ್ರುಲ್ಲಾ ಖಾನ್, ಭೈರಲಿಂಗಸ್ವಾಮಿ, ಇತರರು ಹಾಜರಿದ್ದರು.