ಕನ್ನಡಪ್ರಭ ವಾರ್ತೆ ಚಾಮರಾಜನಗರ
ದೇಶದ ಆಹಾರ ಉತ್ಪಾದನೆಯಲ್ಲಿ ರೈತರು, ಇಲಾಖೆ ನಡುವೆ ರಸಗೊಬ್ಬರ ಉತ್ಪಾದಕರು, ಮಾರಾಟಗಾರರು, ಕಾರ್ಮಿಕರ ನಡುವೆ ಒಂದು ಸಂಬಂಧ ಇದೆ. ದೇಶದ ಆಹಾರ ಉತ್ಪಾದನೆಯಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಆಬಿದ್ ಹೇಳಿದರು.ತೂತುಕುಡಿಯಿಂದ ಚಾಮರಾಜನಗರಕ್ಕೆ ಪ್ರಥಮ ಬಾರಿಗೆ 21 ಬೋಗಿಗಳಲ್ಲಿ ರಸಗೊಬ್ಬರ ಸಾಗಣೆ ಮಾಡಿದ ಗೂಡ್ಸ್ ರೈಲಿಗೆ ಜಿಲ್ಲೆಯ ರಸಗೊಬ್ಬರ ಮಾರಾಟಗಾರರ ಜತೆ ಸ್ವಾಗತಿಸಿ ಪೂಜೆ ಸಲ್ಲಿಸಿ ಮಾತನಾಡಿದರು.
ಜಿಲ್ಲಾಧಿಕಾರಿಗಳು, ಕೇಂದ್ರ ಕಚೇರಿಯ ಉನ್ನತ ಮಟ್ಟದ ಅಧಿಕಾರಿಗಳ ಶ್ರಮದಿಂದ ತೂತುಕುಡಿಯಿಂದ ಚಾಮರಾಜನಗರಕ್ಕೆ ಗೂಡ್ಸ್ ರೈಲಿನ 21 ಬೋಗಿಗಳಲ್ಲಿ ಸ್ಪಿಕ್ ಕಂಪನಿಯ ರಸಗೊಬ್ಬರ ತುಂಬಿಕೊಂಡು ಬಂದಿದ್ದು, ರೈಲ್ವೆ ನಿಲ್ದಾಣದಿಂದ ನಗರದ ಮುಖ್ಯ ರಸ್ತೆವರೆಗೆ ಉತ್ತಮ ರಸ್ತೆ ಆಗಬೇಕಿದೆ. ಸ್ಟಿಕ್ ಕಂಪನಿಯು ಕೂಡ ನಮ್ಮ ಮನವಿಗೆ ಸ್ಪಂದಿಸಿ 21 ಬೋಗಿ ರಸಗೊಬ್ಬರ ಕಳುಹಿಸಿಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರಸಗೊಬ್ಬರ ಜಿಲ್ಲೆಗೆ ಬರುತ್ತದೆ. ಜಿಲ್ಲೆಯಲ್ಲಿ ಯಾವುದೇ ರಸಗೊಬ್ಬರ ಕೊರತೆ ಆಗುವುದಿಲ್ಲ ಎಂದು ಹೇಳಿದರು.ರೈಲ್ವೆ ಸಮಿತಿ ಸದಸ್ಯ ವಿ. ಪ್ರಭಾಕರ್ ಮಾತನಾಡಿ, ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕೆಂಬ ಒಳ್ಳೆಯ ಉದ್ದೇಶದಿಂದ ರೈಲ್ವೆ ವಿಭಾಗೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪಡಿತರ ಮಾತ್ರ ಸಾಗಣೆ ಮಾಡುತ್ತೀರಿ, ರಸಗೊಬ್ಬರ ಸಾಗಣೆ ಏಕೆ ಮಾಡುತ್ತಿಲ್ಲ ಎಂದು ಗಮನ ಸೆಳೆದ ಪರಿಣಾಮದಿಂದ ಈಗಾಗಲೇ ಮಂಗಳೂರಿನಿಂದ 10 ಬೋಗಿಯಲ್ಲಿ ರಸಗೊಬ್ಬರ ಸಾಗಣೆ ಆಗಿದ್ದು, ಇಂದು ಕೂಡ ತೂತುಕುಡಿಯಿಂದ 21 ಬೋಗಿಯಲ್ಲಿ ಸ್ಪಿಕ್ ಕಂಪನಿ ರಸಗೊಬ್ಬರ ಗೂಡ್ಸ್ ರೈಲು ಮೂಲಕ ತಂದಿರುವುದು ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ. ಮುಂದೆ ನಿರಂತರವಾಗಿ ರಸಗೊಬ್ಬರ ಸಾಗಣೆ ಮಾಡುತ್ತಾರೆ ಲಾరి ಮಾಲೀಕರು, ಕಾರ್ಮಿಕರು ಸಹಕಾರ ಅಗತ್ಯವಾಗಿದೆ. ಜನತೆಯ ಬೇಡಿಕೆಯಂತೆ ಲಾರಿ ಸಂಚಾರಕ್ಕೆ ಒಳ್ಳೆಯ ರಸ್ತೆ ಮಾಡಿಸಿಕೊಡಲು, ರಸಗೊಬ್ಬರವನ್ನು ಮಳೆಗಾಲದಲ್ಲಿ ಅನ್‌ಲೋಡ್ ಮಾಡಲು ಸೂಕ್ತ ವ್ಯವಸ್ಥೆ ಮಾಡಿಸಲು ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಪೂಜೆ ಸಲ್ಲಿಸಿದ ಕಣ್ಣನ್ ಏಜೆನ್ಸಿ ಮಾಲೀಕರು, ಸ್ಪಿಕ್ ಕಂಪನಿ ರಸಗೊಬ್ಬರ ಮಾರಾಟಗಾರರಾದ ರಘುಪತಿ ಮಾತನಾಡಿ, ಮೊಟ್ಟಮೊದಲ ಬಾರಿಗೆ ತೂತುಕುಡಿಯಿಂದ ಚಾಮರಾಜನಗರಕ್ಕೆ ಗೂಡ್ಸ್ ರೈಲು ಮೂಲಕ ರಸಗೊಬ್ಬರ ತಂದಿರುವುದು ತುಂಬಾ ಖುಷಿಯಾಗಿದೆ. ಇದು ಜಿಲ್ಲೆಯ ರೈತರಿಗೆ, ಮಾರಾಟಗಾರರು, ಕಾರ್ಮಿಕರಿಗೆ ಅನುಕೂಲವಾಗಿದೆ. ಹಿಂದೆ ಮೈಸೂರಿನಿಂದ ಲಾರಿಯಲ್ಲಿ ರಸಗೊಬ್ಬರ ತರಬೇಕಾಗಿತ್ತು. ಆದರಿಂದ ಸಾಗಣಿಕೆ ವೆಚ್ಚ, ಸಮಯ ವ್ಯಯವಾಗಿ ಮಾರಾಟಗಾರರಿಗೆ ಹೊರೆಯಾಗುತ್ತಿತ್ತು. ರಸಗೊಬ್ಬರ ಕೊರತೆ ಎದುರಾಗುತ್ತಿತ್ತು. ಆದರೆ ಈಗ ರಸಗೊಬ್ಬರ ಕೊರತೆ ಎದುರಾಗುವುದಿಲ್ಲ. ಗೂಡ್ಸ್ ರೈಲ್ವೆಯ ಮುಖಾಂತರ ರಸಗೊಬ್ಬರ ಸಾಗಣೆ ಮಾಡಿದ್ದರಿಂದ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಈ ಮೂಲಕ ಅಭಿನಂದಿಸಲಾಗುವುದು ಎಂದರು.ಸ್ಪಿಕ್ ಗ್ರೀನ್ ಸ್ಟಾರ್ ಫರ್ಟಿಲೈಸರ್ ಕಂಪನಿ ಸಹಾಯಕ ವ್ಯವಸ್ಥಾಪಕ ವಿಜಯ್ ಕುಮಾರ್ ನಾಯಕ ಮಾತನಾಡಿದರು.
ಮಾರಾಟಗಾರರಾದ ರವಿ, ಕುಮಾರ್, ಮಹಮದ್ ತಾಹಿರ್, ಹಸೀಫ್, ಜಿತೇಂದ್ರ, ಶಿವಕುಮಾರ್, ವೇಣುಗೋಪಾಲ್, ಮುತ್ತುರಾಜು, ಕಂಪನಿಯ ಮಾರುಕಟ್ಟೆ ಅಭಿವೃದ್ಧಿ ಅಧಿಕಾರಿ ಅಭಿಷೇಕ ಹಾಜರಿದ್ದರು.