ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನಲ್ಲಿ ಮಾದರಿ ಅಂಗನವಾಡಿ ಕೇಂದ್ರಗಳನ್ನು ನಿರ್ಮಾಣ ಮಾಡುವ ಸಲುವಾಗಿ ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯವಿದ್ದು, ಬಾಲ ರಕ್ಷಾ ಭಾರತ್ ಹಾಗೂ ಜಿಎಸ್‌ಕೆ ಕಂಪನಿಗಳು ಮುಂದಾಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.ನಗರದ ಟಿಜಿ ಬಡಾವಣೆಯಲ್ಲಿ ಬಾಲ ರಕ್ಷಾ ಭಾರತ್ ಹಾಗೂ ಜಿಎಸ್‌ಕೆ ಕಂಪನಿ ಸಹಯೋಗದಲ್ಲಿ ನವೀಕರಣಗೊಂಡ ಅಂಗನವಾಡಿ ಸಂಪನ್ಮೂಲ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕೇಂದ್ರಗಳು ಎಂದರೆ ಕೇವಲ ಮಕ್ಕಳ ಅಪೌಷ್ಟಿಕತೆ ನಿವಾರಣೆ ಮಾಡುವ ಕೇಂದ್ರಗಳೆಲ್ಲ. ಬದಲಾಗಿ ಶಿಕ್ಷಣಕ್ಕೆ ಅಡಿಪಾಯ ಹಾಕುವ ಕೇಂದ್ರಗಳಾಗಿವೆ. ಹೊಸಕೋಟೆ ತಾಲೂಕಿನಲ್ಲಿ ೩೨೫ ಅಂಗನವಾಡಿ ಕೇಂದ್ರಗಳಿದ್ದು, ಯುನೈಟೆಡ್ ವೇ ಹಾಗೂ ನೆಕ್ಸ್ಟ್ ಜೆನ್ ಕಂಪೆನಿಗಳ ಸಹಯೋಗದಲ್ಲಿ ಸಹ ಅಭಿವೃದ್ಧಿ ಮಾಡಲಾಗುತ್ತಿದೆ. ಪ್ರಥಮವಾಗಿ ನಂದಗುಡಿಯಲ್ಲಿ ರಾಜ್ಯದಲ್ಲಿಯೇ ವಿನೂತನ ಅಂಗನವಾಡಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಹೊಸಕೋಟೆ ನಗರದಲ್ಲಿ ಜಾಗದ ಕೊರತೆ ಕಾರಣ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿವೆ. ನಗರಸಭೆ ಜಾಗ ಗುರುತಿಸಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತೇವೆ. ಆದ್ದರಿಂದ ಬಾಲ ರಕ್ಷಾ ಭಾರತ್ ಹಾಗೂ ಜಿಎಸ್‌ಕೆ ಕಂಪನಿಗಳು ತಾಲೂಕಿನ ಎಲ್ಲಾ ಅಂಗನವಾಡಿಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ ಎಂದರು.ಬಾಲ ರಕ್ಷಾ ಭಾರತ್ ಸಂಪನ್ಮೂಲ ಅಧಿಕಾರಿ ಚಂದ್ರಶೇಖರ್ ಮಾತನಾಡಿ, ಮಕ್ಕಳ ಸರ್ವತೋಮುಖ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯದಲ್ಲಿ 22 ಸಂಪನ್ಮೂಲ ಕೇಂದ್ರಗಳನ್ನು ತೆರೆಯಲಾಗಿದ್ದು, ಅಂಗನವಾಡಿ ಮಕ್ಕಳ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ರೂಪಿಸಿ ಸವಲತ್ತುಗಳನ್ನು ಒದಗಿಸುತ್ತಿದ್ದೇವೆ. ಮಕ್ಕಳನ್ನು ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರಿಗೂ ಅಗತ್ಯವಾದ ಸಂಪನ್ಮೂಲಗಳು ಬೇಕಾದ ಹಿನ್ನೆಲೆಯಲ್ಲಿ ಸಂಪನ್ಮೂಲ ಕೇಂದ್ರವನ್ನು ನವೀಕರಿಸಿ ಉದ್ಘಾಟನೆ ಮಾಡಿದ್ದೇವೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾ ಅಧಿಕಾರಿ ಅನಿತಾ ಲಕ್ಷ್ಮೀ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1277 ಅಂಗನವಾಡಿ ಕೇಂದ್ರಗಳಿದ್ದು, ಅಂಗನವಾಡಿ ಕೇಂದ್ರಗಳ ಅಬಿವೃದ್ಧಿಗೆ ಸರ್ಕಾರದ ಜೊತೆಗೆ ಖಾಸಗಿ ಕಂಪನಿಗಳ ಸಹಕಾರ ಕೂಡ ಅತ್ಯಗತ್ಯ ಎಂದರು.ಜಿಎಸ್‌ಕೆ ಕಂಪನಿ ಸಂವಹನ ಅಧಿಕಾರಿ ಸುಷ್ಮಾ, ಜಿಲ್ಲಾ ನಿರೂಪಣಾ ಅಧಿಕಾರಿ ಅನಿತಾ ಲಕ್ಷ್ಮೀ, ಸಿಡಿಪಿಓ ಶಿವಮ್ಮ, ನಗರಸಭೆ ನಾಮಿನಿ ನಿರ್ದೇಶಕ ಗಣೇಶ್, ನಾಗರಾಜ್, ಮುಖಂಡ ಗೋಪಾಲ್ ಹಾಜರಿದ್ದರು.