ಕನ್ನಡಪ್ರಭ ವಾರ್ತೆ ಯಳಂದೂರುಸಹಕಾರ ಸಂಘ ಇರುವುದು ರೈತರ, ಆರ್ಥಿಕವಾಗಿ ಹಿಂದುಳಿದವರ ಶ್ರೇಯೋಭಿವೃದ್ದಿ ಹಾಗೂ ಸೇವೆಯನ್ನು ಮಾಡುವುದಕ್ಕಾಗಿ ಇಲ್ಲಿಂದ ಹೊಸ ರಾಜಕೀಯ ಬದುಕು ಕಟ್ಟಿಕೊಳ್ಳಲು ಸಾಧ್ಯವಿದ್ದು, ಇದರಲ್ಲಿ ಲಾಭ ಮಾಡುವ ಉದ್ದೇಶ, ರಾಜಕೀಯ ಮಾಡುವ ಉದ್ದೇಶದಿಂದ ಇಲ್ಲಿಗೆ ಯಾರು ಬರಬಾರದು ಎಂದು ಮಾಜಿ ಶಾಸಕ ಎಸ್.ಬಾಲರಾಜು ಕರೆ ನೀಡಿದರು.ಗುರುವಾರ ತಾಲೂಕಿನ ಮದ್ದೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯಲ್ಲಿ ಹಾಗೂ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾನು ಟಿಎಪಿಸಿಎಂಎಸ್ ಮೂಲಕ 1992-93 ರಲ್ಲಿ ಪ್ರಥಮ ಬಾರಿಗೆ ಗೆದ್ದು ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದೆ. ನಂತರ ಶಾಸಕನಾಗಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದೇನೆ. ಆದರೂ ಕೂಡ ಸಹಕಾರ ಕ್ಷೇತ್ರದಲ್ಲಿ ನಿರಂತರವಾಗಿ ಇದ್ದೇನೆ. ಯಳಂದೂರು ಟಿಎಪಿಸಿಎಂಎಸ್‌ನ ಅಧ್ಯಕ್ಷನಾಗಿ ಕಳೆದ ಬಾರಿ ನಾನು ಆಯ್ಕೆಯಾಗಿದ್ದು 75 ವರ್ಷಗಳ ಇತಿಹಾಸ ಇರುವ ಈ ಸಂಘವನ್ನು ಕೆಲವರು ತಮ್ಮ ಸ್ವಹಿತಾಸಕ್ತಿಗೆ ದುರ್ಬಳಕೆ ಮಾಡಿಕೊಂಡು ತಿಂಗಳಿಗೆ 5ರಿಂದ 6 ಲಕ್ಷ ರು. ಲಾಭ ಬರುತ್ತಿದ್ದ ಸಂಘವನ್ನು ₹1.5 ಕೋಟಿ ರು. ಸಾಲದಲ್ಲಿ ಮುಳುಗಿಸಿದ್ದಾರೆ.ಇದನ್ನು ಮತ್ತೆ ಮೇಲೆತ್ತಲು ನಾನು ಇಲ್ಲಿಗೆ ಅಧ್ಯಕ್ಷನಾದೆ. ಆದರೆ ಇದರಲ್ಲೂ ಕೆಲವರು ರಾಜಕೀಯ ಬೆರೆಸಿದ್ದರಿಂದ, ಸಭೆಗೆ ಆಹ್ವಾನಿಸಿದರೂ ಬಾರದೆ ಇದ್ದರಿಂದ ನಾನು ಇದನ್ನು ಬಿಟ್ಟಿದ್ದೇನೆ. ನಮ್ಮ ಗ್ರಾಮದಲ್ಲೂ ೨೦ ವರ್ಷಗಳಿಂದಲೂ ನಾನು ಪ್ರತ್ಯೇಕವಾಗಿ ಸಹಕಾರ ಸಂಘವನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದೆ. ಅದು ಕಳೆದ ಅವಧಿಯಲ್ಲಿ ಪೂರ್ಣಗೊಂಡಿತು. ಆದರೆ ಇಲ್ಲೂ ಕೂಡ ಕೆಲವರು ರಾಜಕೀಯ ಮಾಡಿದರು. ಅವಿರೋಧವಾಗಿ ಆಯ್ಕೆಯಾಗಬೇಕಿದ್ದ ನಿರ್ದೇಶಕರಿಗೆ ಚುನಾವಣೆ ನಡೆಯಿತು. ವಿರೋಧಿಗಳು ಸೋತರು ಈಗ ಈ ಸೊಸೈಟಿ ಶುದ್ಧವಾಗಿದೆ. ಇಲ್ಲಿ ಯಾರೂ ಪಕ್ಷಬೇಧ ಮಾಡಬಾರದು ಸಾರ್ವಜನಿಕರ ಸೇವೆಗೇ ಇದನ್ನು ಮೀಸಲಿಡಬೇಕು. ಇಲ್ಲಿಗೆ ಮುಂದಿನ ದಿನಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವುದು, ಇಲ್ಲೇ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವುದು, ಹೆಚ್ಚು ಸಾಲವನ್ನು ನೀಡುವುದು. ನಮ್ಮ ಸಂಘದಿಂದಲೇ ಪಡಿತರವನ್ನು ವಿತರಿಸುವ ಮೂಲಕ ಇದನ್ನು ಲಾಭದತ್ತ ಕೊಂಡೊಯ್ಯಲು ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಶ್ರಮ ವಹಿಸಬೇಕು ಎಂದು ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪುಟ್ಟಮಾದಪ್ಪ ಉಪಾಧ್ಯಕ್ಷ ನಂಜುಂಡಸ್ವಾಮಿಯನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಸತೀಶ್, ಬಿ. ಪುಟ್ಟಸ್ವಾಮಿ, ಅಯ್ಯಪ್ಪಸ್ವಾಮಿ, ಪುಟ್ಟರಂಗಶೆಟ್ಟಿ, ಚಿಕ್ಕಬಸವಯ್ಯ, ಲಕ್ಷ್ಮಮ್ಮ, ಬಿ.ಎಸ್. ನಾಗರಾಜು ಡಿ.ಎಂ.ಬೋಜರಾಜು, ಹೊವಮ್ಮ, ಡಿ.ಪಿ.ಪುಟ್ಟಮಾದಪ್ಪ ನರೇಂದ್ರ, ಶಾಂತರಾಜು, ಮೂರ್ತಿ, ಮಹದೇವಸ್ವಾಮಿ, ಬೂದಿತಿಟ್ಟು ನಾಗೇಂದ್ರ, ಸಿದ್ದರಾಜು, ದೇವರಾಜು, ಭಾಗ್ಯನಂಜಯ್ಯ ಸೇರಿದಂತೆ ಅನೇಕರು ಹಾಜರಿದ್ದರು.