ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಮನ್ವಯ ಅಗತ್ಯ

KannadaprabhaNewsNetwork |  
Published : Jun 13, 2026, 03:00 AM IST
ಬೆಳಗಾವಿ  | Kannada Prabha

ಸಾರಾಂಶ

ಬಾಲಕಾರ್ಮಿಕ ಪದ್ಧತಿ ಕಾಯ್ದೆಯು ಜಾರಿಗೆ ಬಂದು ಸುಮಾರು 40 ವರ್ಷಗಳಾದರೂ ಸಹ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದ್ದು, ಇಂತಹ ಅನಿಷ್ಟ ಪದ್ಧತಿಯ ನಿರ್ಮೂಲನೆಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಮನ್ವಯದ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಾಲಕಾರ್ಮಿಕ ಪದ್ಧತಿ ಕಾಯ್ದೆಯು ಜಾರಿಗೆ ಬಂದು ಸುಮಾರು 40 ವರ್ಷಗಳಾದರೂ ಸಹ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿದ್ದು, ಇಂತಹ ಅನಿಷ್ಟ ಪದ್ಧತಿಯ ನಿರ್ಮೂಲನೆಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳ ಸಮನ್ವಯದ ಅಗತ್ಯವಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಎನ್.ಶಿವಕುಮಾರ ಹೇಳಿದರು.

ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಲಕಾರ್ಮಿಕ ಪದ್ಧತಿಯಲ್ಲಿ ಸಿಲುಕುವ ಬಹುತೇಕರು ಬಡ ಕುಟುಂಬಗಳ ಮಕ್ಕಳಾಗಿದ್ದು, ಅಧಿಕಾರಿಗಳು ಕೇವಲ ಪ್ರಕರಣ ದಾಖಲಿಸದೇ, ಅಂತಹ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಕಾರ್ಯಕ್ಕೆ ಮುಂದಾಗಬೇಕು. ಯಾವುದೇ ಒಂದು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ವಿವಿಧ ಇಲಾಖೆಗಳ ಸಹಕಾರ ಅತ್ಯಗತ್ಯ ಎಂದರು.ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು. ಅಧಿಕಾರಿಗಳು ಕೇವಲ ಕಾನೂನು ಜಾರಿಗೆ ಸೀಮಿತವಾಗದೆ, ಬಾಲಕಾರ್ಮಿಕ ಪದ್ಧತಿಯನ್ನು ಬಲವಾಗಿ ವಿರೋಧಿಸಿ, ಆ ಜಾಲದಿಂದ ಮುಕ್ತರಾದ ಮಕ್ಕಳಿಗೆ ಸೂಕ್ತ ಪುನರ್ವಸತಿ ಕಲ್ಪಿಸಿ ಅವರು ಮತ್ತೆ ಶಿಕ್ಷಣದ ಮುಖ್ಯವಾಹಿನಿಗೆ ಬರುವಂತೆ ಸಹಕರಿಸಬೇಕು ಎಂದು ತಿಳಿಸಿದರು.ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ನಾಗೇಶ ಡಿ.ಜಿ.ಮಾತನಾಡಿ, ಪ್ರತಿವರ್ಷ ಜೂ.12 ರಂದು ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನವನ್ನು ಒಂದೊಂದು ವಿಶಿಷ್ಟ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಜಗತ್ತಿನಲ್ಲಿ ತಮ್ಮ ಮಕ್ಕಳು ಚೆನ್ನಾಗಿ ಓದಿ, ನೌಕರಿ ಹಿಡಿದು, ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಗಳಿಸಬೇಕು. ಇನ್ನೊಬ್ಬರ ಮನೆಯಲ್ಲೋ ಅಥವಾ ಅಪಾಯಕಾರಿ ಕೆಲಸಗಳಲ್ಲೋ ತೊಡಗಬಾರದೆಂಬ ಆಸೆ ಪ್ರತಿಯೊಬ್ಬ ತಂದೆ-ತಾಯಿಗೂ ಇರುತ್ತದೆ. ಆದರೆ, ಬಡತನದ ಬೇಗೆಯಿಂದಾಗಿ ಬಡ ಕುಟುಂಬಗಳಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ ಎಂದು ವಿಷಾದಿಸಿದರು.ಬಡತನದಲ್ಲಿರುವ ಮಕ್ಕಳು, ಅನಾಥರು, ಪೋಷಕರನ್ನು ಕಳೆದುಕೊಂಡು ಅಜ್ಜ-ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿರುವ ಮಕ್ಕಳೇ ಹೆಚ್ಚಾಗಿ ಬಾಲಕಾರ್ಮಿಕ ಪದ್ಧತಿಗೆ ಬಲಿಯಾಗುತ್ತಿದ್ದಾರೆ. ಈ ಪದ್ಧತಿಯು ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದರಲ್ಲೂ ಹೆಣ್ಣುಮಕ್ಕಳು ಈ ವ್ಯವಸ್ಥೆಗೆ ಸಿಲುಕಿದಾಗ ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಯಾವ ಕುಟುಂಬಗಳಲ್ಲಿ ಮಕ್ಕಳ ರಕ್ಷಣೆ ಸಾಧ್ಯವಿಲ್ಲವೋ ಅಥವಾ ಶಿಕ್ಷಣ ನೀಡಲು ಆರ್ಥಿಕವಾಗಿ ಅಸಹಾಯಕರಾಗಿದ್ದಾರೋ, ಅಂತಹ ಮಕ್ಕಳನ್ನು ಹಾಗೂ ಅನಾಥರನ್ನು ಮಕ್ಕಳ ಕಲ್ಯಾಣ ಸಮಿತಿ ಮೂಲಕ ರಕ್ಷಿಸುವ ಕಾರ್ಯ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಶಾಲಾ-ಕಾಲೇಜು ಮಟ್ಟದಲ್ಲೂ ಮಕ್ಕಳ ರಕ್ಷಣೆಯ ಕಾರ್ಯಗಳು ನಿರಂತರವಾಗಿ ನಡೆಯಬೇಕು ಮತ್ತು ಇದಕ್ಕೆ ಎಲ್ಲ ಇಲಾಖೆಗಳು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಸ್ಪಂದನ ಸಂಸ್ಥೆಯ ನಿರ್ದೇಶಕಿ ಸುಶೀಲಾ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿ ನಿಷೇಧದ ಕುರಿತು ಕೇವಲ ನಗರ ಪ್ರದೇಶಗಳಲ್ಲಷ್ಟೇ ಅಲ್ಲದೆ, ಪ್ರತಿಯೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಿಂದಲೂ ವ್ಯಾಪಕ ವಿರೋಧ ಹಾಗೂ ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದು ತಿಳಿಸಿದರು.ಕಾರ್ಮಿಕ ಅಧಿಕಾರಿ ಮಲ್ಲಿಕಾರ್ಜುನ ಎಸ್.ಜೋಗೂರ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ದೇಶದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಹಲವು ಕಠಿಣ ಕಾಯ್ದೆಗಳನ್ನು ತರಲಾಗಿದೆ. ಇದರ ಫಲವಾಗಿ, ಈ ಹಿಂದೆ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿದ್ದ ಬಾಲಕಾರ್ಮಿಕರ ಪ್ರಮಾಣವು ಪ್ರಸ್ತುತ ನೂರರ ಸಂಖ್ಯೆಗೆ ಬಂದು ತಲುಪಿದೆ ಎಂದು ಮಾಹಿತಿ ನೀಡಿದರು.ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕರಾದ ನಿರ್ಮಲ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಅಧಿಕಾರಿ ಈಶ್ವರ ಗಡಾದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಚೇತನ ಕುಮಾರ, ಸಹಾಯಕ ಕಾರ್ಮಿಕ ಆಯುಕ್ತ ಕೆ.ಪಿ.ನಾಗರಾಜ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ, ರಾಜೇಶ ಜಾದವ, ಸಂಜೀವ ಬೋಸ್ಲೆ, ರಾಜೇಶ ಅಸ್ನೋಟಿಕರ, ರಮೇಶ ಕೆಸರೂರು, ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಜ್ಯೋತಿ ಕಾಂತೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಂದ್ರ ಮೋದಿಯಂತ ಪ್ರಧಾನಿ ಪಡೆದ ನಾವೇ ಧನ್ಯರು
ಕ್ವಾರಿ ಮಾಲೀಕರ ಮೇಲೆ ದಂಡ ವಿಧಿಸಿದರೆ ಕಟ್ಟಡ ಕಾಮಗಾರಿಗಳಿಗೆ ಹಿನ್ನೆಡೆ