ಕನ್ನಡಪ್ರಭ ವಾರ್ತೆ ಶಿವಮೊಗ್ಗ
ದಿನೇದಿನೇ ಮಕ್ಕಳ ವಿರುದ್ದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಜಿಲ್ಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಒಟ್ಟು 102 ಬಾಲ್ಯವಿವಾಹ ಪ್ರಕರಣ, 156 ಪೋಕ್ಸೋ, 247 ಹದಿಹರೆಯದವರ ಗರ್ಭಧಾರಣೆ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳ ಹೇಳಿದರು.ಸೋಮವಾರ ಆಲ್ಕೊಳದ ಚೈತನ್ಯದಲ್ಲಿ ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಸಹಯೋಗದಲ್ಲಿ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳಿಗೆ ಏರ್ಪಡಿಸಿದ್ದ ಮಕ್ಕಳ ಹಕ್ಕುಗಳು- ಕಾಯ್ದೆಗಳ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಂಭೀರ ಚಿಂತನೆ ಅಗತ್ಯ:ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಜೆಜೆ ಕಾಯ್ದೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕಾಯ್ದೆ, ಆರ್‌ಟಿಇ ಕಾಯ್ದೆ ಸೇರಿದಂತೆ ಹಲವಾರು ಕಾಯ್ದೆ, ಕಾನೂನುಗಳಿವೆ. ಆದರೂ, ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಅನೇಕ ಪ್ರಕರಣಗಳು ದಾಖಲಾಗುತ್ತಿವೆ. ಹಾಗಾದರೆ, ಕಾಯ್ದೆ ಕಾನೂನು ಸಮರ್ಪಕ ಅನುಷ್ಠಾನ ಆಗುತ್ತಿಲ್ಲವಾ? ಪಾಲನೆಯಾಗುತ್ತಿಲ್ಲವಾ ಎಂಬ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.
ಮಕ್ಕಳ ಹಕ್ಕುಗಳನ್ನು ರಕ್ಷಿಸುವಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು. ಯಾವುದೇ ರೀತಿಯ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ದ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಕಾಯ್ದೆಗಳನ್ನು ತಿಳಿದುಕೊಳ್ಳಿ:
ಕೆಲವು ಜಿಲ್ಲೆಗಳಲ್ಲಿ ಮಕ್ಕಳ ಜೀವ ಮತ್ತು ಅವರ ಹಕ್ಕುಗಳಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ಘಟಿಸಿದ್ದು, ನೇರವಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆದ್ದರಿಂದ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಅತಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಮಕ್ಕಳನ್ನು ಅವರ ಹಕ್ಕುಗಳನ್ನು ರಕ್ಷಿಸಬೇಕು. ಬಹಳ ಮುಖ್ಯವಾಗಿ ಅಧಿಕಾರಿ/ ಸಿಬ್ಬಂದಿ ಕಾಯ್ದೆಗಳನ್ನು ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಾಗಾರಗಳು ತುಂಬಾ ಉಪಯುಕ್ತವಾಗಿದ್ದು ಇದರ ಸದುಪಯೋಗ ಪಡೆಯಬೇಕು ಎಂದು ಕರೆ ನೀಡಿದರು.ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ, ಎಸ್ಎಂಎಸ್ಎಸ್ ನಿರ್ದೇಶಕ ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ಮಾತನಾಡಿದರು.
ಕಾರ್ಯಾಗಾರದಲ್ಲಿ ಜೆ.ಜೆ. ಕಾಯ್ದೆ 2015, ಬಾಲವಿವಾಹ ನಿಷೇಧ ಕಾಯ್ದೆ 2006, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2012, ಆರ್‌ಟಿಇ ಕಾಯ್ದೆ- 2009, ಬಾಲಕಾರ್ಮಿಕತೆ, ಭಿಕ್ಷಾಟನೆ ನಿಷೇಧ, ಕೋರ್ಟ್ ವಿಚಾರಣೆ, ಸಾರ್ವಜನಿಕ ವಿಚಾರಣೆ ಕುರಿತು ಕಾರ್ಯಾಗಾರ ನಡೆಸಿ, ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಅಧಿಕಾರಿಗಳು ಪರಿಹಾರ ಸೂಚಿಸಿದರು.ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ತಾವು ದಿನ ನಿತ್ಯ ಎದುರಿಸುವ ಬಾಲಕಾರ್ಮಿಕತೆ, ಪ್ರೇಮ ಪ್ರಕರಣಗಳ ವಿಷಯ, ಕಳ್ಳತನ, ಮಾದಕ ವ್ಯಸನ, ಮಕ್ಕಳು ವಾಹನ ಚಲಾವಣೆ ಸೇರಿದಂತೆ ಅನೇಕ ವಿಷಯ ಕುರಿತಾಗಿ ನೇರವಾಗಿ ಆಯೋಗದ ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಕಾರ್ಯಾಗಾರದಲ್ಲಿ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಜಿಲ್ಲಾ ನಿರೂಪಣಾಧಿಕಾರಿ ಡಾ. ಸಂತೋಷಕುಮಾರ್, ಹಿರಿಯ ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿ ಬಾಬು ಅಂಜನಪ್ಪ, ಸೋಮಶೇಖರಪ್ಪ ಮತ್ತಿತರರು ಇದ್ದರು.- - - -4ಎಸ್‌ಎಂಜಿಕೆಪಿ02:
ಕಾರ್ಯಾಗಾರದಲ್ಲಿ ಆಯೋಗ ಸದಸ್ಯೆ ಅಪರ್ಣಾ ಎಂ. ಕೊಳ್ಳ ಮಾತನಾಡಿದರು.