ಕನ್ನಡಪ್ರಭ ವಾರ್ತೆ ಹಾಸನ
ಕಳೆದ ಹಲವು ತಿಂಗಳಿಂದ ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಸಂಕುಚಿತವಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚಾರ ತೊಂದರೆ ಅನುಭವಿಸುತ್ತಿದ್ದರು. ಇನ್ನು ಯುಜಿಡಿ ಕಟ್ಟಿಕೊಂಡಿರುವುದು ಗೊತ್ತಾಗದ ರೀತಿ ಬಂದ್ ಮಾಡಲಾಗಿತ್ತು. ಪಾಲಿಕೆಯಿಂದ ನೀಡಿರುವ ಮಳಿಗೆಗಿಂತ ಮುಂದೆ
ರಸ್ತೆ ಬದಿಗೆ ಅಂಗಡಿ ಒತ್ತುವರಿ ಮಾಡಲಾಗಿತ್ತು. ಇನ್ನೂ ಪ್ಲಾಸ್ಟಿಕ್ ಟಾರ್ಪಲನ್ನು ರಸ್ತೆ ಮುಚ್ಚುವಂತೆ ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾನಗರಪಾಲಿಕೆ ಇಂಜಿನಿಯರ್ ಕವಿತಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಅಧಿಕಾರಿಗಳು ಕ್ರಮಕ್ಕೆ ಮುಂದಾದರು. ಇನ್ನು ಕೆಲವರು ತಾವೆ ಸ್ವಯಂ ಪ್ರೇರಿತವಾಗಿ ತೆರವು ಮಾಡುವ ಭರವಸೆ ನೀಡಿದಾಗ ಅವಕಾಶ ನೀಡಲಾಯಿತು. ಈ ವೇಳೆ ಕೆಲ ವ್ಯಾಪಾರಸ್ತರು ವಿರೋಧ ವ್ಯಕ್ತಪಡಿಸಿದರು.ಪಾಲಿಕೆ ಇಂಜಿನಿಯರ್ ಕವಿತಾ ಅವರು ಮಾಧ್ಯಮದೊಂದಿಗೆ ಮಾತನಾಡಿ, ರಸ್ತೆ ಒತ್ತುವರಿ ಮಾಡಿಕೊಂಡು ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದ ವ್ಯಾಪಾರಿಗಳಿಗೆ ಪೂರ್ವ ಸೂಚನೆ ನೀಡಲಾಗಿದ್ದು, ಸ್ವಯಂ ಪ್ರೇರಿತವಾಗಿ ತೆರವುಗೊಳಿಸಲು ಗಡುವು ಸಹ ನಿಗದಿ ಮಾಡಲಾಗಿತ್ತು. ಆದರೆ ಸೂಚಿಸಿದ ಅವಧಿಯೊಳಗೆ ಕೆಲ ಅಂಗಡಿಗಳನ್ನು ತೆರವು ಮಾಡಲಾಗಿದ್ದು, ಆದರೆ ಇನ್ನಷ್ಟು ಅಂಗಡಿಗಳ ಒತ್ತುವರಿ ತೆರವುಗೊಳಿಸದ ಹಿನ್ನೆಲೆ ಮಹಾನಗರ ಪಾಲಿಕೆಯಿಂದ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಮಾರುಕಟ್ಟೆಗೆ ದಿನನಿತ್ಯ ಸಾವಿರಾರು ಜನರು ಆಗಮಿಸುವ ಹಿನ್ನೆಲೆಯಲ್ಲಿ ರಸ್ತೆ ಒತ್ತುವರಿ ಕಾರಣದಿಂದಾಗಿ ತುರ್ತು ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿತ್ತು. ಪಾದಚಾರಿಗಳಿಗೆ ಸುರಕ್ಷಿತವಾಗಿ ನಡೆಯಲು ಅವಕಾಶ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಾರ್ವಜನಿಕರ ಅನೇಕ ದೂರುಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಒತ್ತುವರಿ ಕಾರ್ಯಾಚರಣೆ ಮಾಡುವಾಗ ರಾಜಕೀಯದಿಂದ ಕೆಲ ಕರೆಗಳ ಮೂಲಕ ಒತ್ತಡ ಬಂದು ನಮ್ಮ ಕಾರ್ಯಾಚರಣೆಗೆ ಅಡಚಣೆ ಮಾಡುತ್ತಿರುವುದಾಗಿ ಹೇಳಿದರು.