ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ನಗರ ವ್ಯಾಪ್ತಿ ಇತ್ತೀಚೆಗೆ ಹಳ್ಳಿಗಳು, ಬಡಾವಣೆಗಳು ಮತ್ತು ಹೊಸ ವಸತಿ ಪ್ರದೇಶಗಳನ್ನು ಸೇರಿಸಿಕೊಂಡು ವಿಸ್ತಾರಗೊಂಡಿದೆ. ಇದರಿಂದ ಜನಸಂಖ್ಯೆ ಹಾಗೂ ಮತದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲೇ ವಾರ್ಡ್ಗಳ ಪುನರ್‌ವಿಂಗಡಣೆ ನಡೆಯುತ್ತಿರುವುದು ಮುಂದಿನ ಮಹಾನಗರ ಪಾಲಿಕೆ ಚುನಾವಣೆಗೆ ನಿರ್ದೇಶನವಾಗಲಿದೆ. ಆದ್ದರಿಂದ ಅಧಿಕಾರಿಗಳು ತುರ್ತಾಗಿ ನಿರ್ಧಾರ ಕೈಗೊಳ್ಳದೆ, ಪ್ರತಿ ವಾರ್ಡಿಗೂ ಭೇಟಿ ನೀಡಿ ಭೌಗೋಳಿಕ ಸ್ಥಿತಿ, ಜನಸಂಖ್ಯೆ, ಸಮುದಾಯಗಳ ವಾಸ್ತವ ಸ್ಥಿತಿ ಹಾಗೂ ಮೂಲಸೌಕರ್ಯಗಳ ಹಂಚಿಕೆ ಇತ್ಯಾದಿಗಳನ್ನು ಸಮಗ್ರವಾಗಿ ಪರಿಶೀಲಿಸಿ ವೈಜ್ಞಾನಿಕ ಆಧಾರದ ಮೇಲೆ ಗಡಿ ನಿಗದಿ ಮಾಡಬೇಕು ಎಂದು ಮನವಿ ಮಾಡಿದರು.
ವಾರ್ಡ್ ವಿಂಗಡಣೆ ಎಂಬುದು ಕೇವಲ ಭೌಗೋಳಿಕ ಗಡಿಗಳ ಬದಲಾವಣೆ ಅಲ್ಲ, ಅದು ಪ್ರತಿನಿಧಿತ್ವದ ಪ್ರಶ್ನೆ. ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶ ಸಿಗುವಂತೆ, ಸಮತೋಲನ ಕಾಪಾಡುವ ರೀತಿಯಲ್ಲಿ ವಾರ್ಡ್ಗಳನ್ನು ರಚಿಸಬೇಕು. ಇಲ್ಲವಾದಲ್ಲಿ ಕೆಲವೊಂದು ಸಮುದಾಯಗಳು ರಾಜಕೀಯವಾಗಿ ಹಿಂದುಳಿಯುವ ಪರಿಸ್ಥಿತಿ ಉಂಟಾಗಬಹುದು ಎಂದು ಸದಸ್ಯರು ಹೇಳಿದರು.ಈವರೆಗೆ ನಡೆದ ಚುನಾವಣೆಯಲ್ಲಿ ಮುಸ್ಲಿಂ, ಹಿಂದೂ ಹಾಗೂ ಇತರ ಜಾತಿ- ಜನಾಂಗಗಳ ಪ್ರತಿನಿಧಿಗಳು ಜನಮಂಡಲದಿಂದ ಆಯ್ಕೆಯಾಗಿದ್ದಾರೆ. ಇದು ಹಾಸನ ನಗರದ ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂಕೇತವಾಗಿದೆ. ಆದರೆ ಅವೈಜ್ಞಾನಿಕ ವಾರ್ಡ್ ವಿಂಗಡಣೆ ಒಂದೇ ಸಮುದಾಯಕ್ಕೆ ಪ್ರಾಧಾನ್ಯತೆ ನೀಡಿದಂತಾಗಬಾರದು. ಜನಸಂಖ್ಯಾ ಪ್ರಮಾಣ, ಮತದಾರರ ಅನುಪಾತ ಹಾಗೂ ಸಾಮಾಜಿಕ ಸಮತೋಲನವನ್ನು ಗಮನದಲ್ಲಿಟ್ಟುಕೊಂಡು ಗಡಿ ರಚನೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈ ವಿಷಯವನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ಶೀಘ್ರದಲ್ಲೇ ಮನವಿ ಸಲ್ಲಿಸುವುದಾಗಿ ತಿಳಿಸಿದ ಅವರು, ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಪಾರದರ್ಶಕತೆ ಕಾಪಾಡಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು ಎಂದು ಸೂಚಿಸಿದರು.
ಬೇಕಾದರೆ ಹೆಚ್ಚಿನ ವಾರ್ಡ್ ಮಾಡಲಿ, ಆದರೆ ಇರುವ ವಾರ್ಡನ್ನು ಇನ್ನೊಂದಕ್ಕೆ ಸೇರಿಸುವುದು ಬೇಡ. ಇದರಿಂದ ಅಲ್ಪಸಂಖ್ಯಾತರಿಗೆ ಸಮಸ್ಯೆ ಎದುರಾಗಬಹುದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಪೋರೇಟ್ ರಾದ ಇರ್ಪಾನ್, ಮಧನ್, ಅಮಿರ್ ಜಾನ್, ಇಮ್ರಾನ್, ರಫೀಕ್, ಅಕ್ಮಲ್ ಇತರರು ಉಪಸ್ಥಿತರಿದ್ದರು.