ಬಳ್ಳಾರಿ: ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ ವ್ಯಕ್ತಿಯನ್ನು ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಮಾಡಿದೆ. ನೆಹರು ಕಾಲದಿಂದ ನಾಗೇಂದ್ರ ಕಾಲದ ವರೆಗೆ ಕಾಂಗ್ರೆಸ್‌ನಲ್ಲಿ ಭ್ರಷ್ಟಾಚಾರ ನದಿಯಂತೆ ಹರಿಯುತ್ತಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹಣ ದುರ್ಬಳಕೆ ಆರೋಪವಿದೆ. ಹೈಕಮಾಂಡ್ ನಾಯಕರಿಗೆ ಕಪ್ಪ-ಕಾಣಿಕೆ ಕೊಟ್ಟವರು. ನಾಗೇಂದ್ರ ವಿರುದ್ಧ ಇಡಿ ಹಾಗೂ ಸಿಬಿಐನವರು ಮೂರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ವಾಲ್ಮೀಕಿ ಜನಾಂಗದ ಹಣ ತಿಂದ ನಾಗೇಂದ್ರ ವಿರುದ್ಧ ಜನರು ಶಾಪ ಹಾಕುತ್ತಿದ್ದು, ನಾಗೇಂದ್ರ ರಾಜೀನಾಮೆ ನೀಡುವ ವರೆಗೂ ಸದನ ನಡೆಯಲು ಬಿಜೆಪಿ ನಾಯಕರು ಬಿಡಬಾರದು ಎಂದು ಮನವಿ ಮಾಡಿದರು.
ಭ್ರಷ್ಟಾಚಾರ ಜಾತಿಯಿಂದ ನೋಡಬಾರದು. ಜನಾರ್ದನ ರೆಡ್ಡಿ ಹೇಳಿಕೆ ಬಳಿಕ ದಲಿತರನ್ನು ತುಳಿದರು ಎಂದು ಶಾಸಕ ನಾಗೇಂದ್ರ ಹೇಳುತ್ತಾರೆ. ಜನಾರ್ದನ ರೆಡ್ಡಿ ಹೇಳಿಕೆಯಲ್ಲಿ ತಪ್ಪಿಲ್ಲ. ಬಡವರ ಹಣ, ದಲಿತರ ಹಣ ಲೂಟಿ ಮಾಡುವಾಗ ನಾಗೇಂದ್ರ ಅವರಿಗೆ ದಲಿತರ ಹಣ ತಿನ್ನುತ್ತಿದ್ದೇನೆ ಎಂದು ಅನಿಸಲಿಲ್ಲವೇ? ವಾಲ್ಮೀಕಿ ಮಕ್ಕಳ ಭವಿಷ್ಯ ನೀವು ಹಾಳು ಮಾಡಲಿಲ್ಲವೇ? ಮಕ್ಕಳ ಸ್ಕಾಲರ್‌ಶಿಪ್, ಯೂನಿಫಾರ್ಂ, ಬೂಟಿನ ಹಣವನ್ನು ತಿಂದಿಲ್ಲವೇ ಎಂದು ಪ್ರಶ್ನಿಸಿದ ಬಿ. ಶ್ರೀರಾಮುಲು, ಯಾವುದೇ ಹಗರಣ ಮಾಡದೇ ಇದ್ದರೆ ನಿಮ್ಮನ್ನು ದಲಿತ ನಾಯಕ ಎಂದು ಒಪ್ಪಿಕೊಳ್ಳುತ್ತಿದ್ದೆ. ಒಂದು ವೇಳೆ ನಾಗೇಂದ್ರ ಅವರಿಗೆ ಬಳ್ಳಾರಿಗೆ ಹೋಗುವಂತಿಲ್ಲ ಎಂದು ಸೂಚಿಸಿದರೆ ಏನು ಮಾಡುತ್ತಾರೆ ಎಂದು ಕೇಳಿದರು.ಡಿಕೆ ಮತ್ತು ಬಿಕೆ ಇಬ್ಬರು ಸೇರಿ ಹೊರಟ್ಟಿ ಅವರನ್ನು ಬೆದರಿಸಿ ರಾಜೀನಾಮೆ ಪಡೆದಿದ್ದಾರೆ. ಡಿಕೆ ಮತ್ತು ಬಿಕೆ ಹಿನ್ನೆಲೆ ನೋಡಿ ಹೊರಟ್ಟಿ ಬೆದರಿದ್ದಾರೆ. ಹೊರಟ್ಟಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರ ಬೆದರಿಕೆ ಬಗ್ಗೆ ನನಗೆ ಹೇಳಿದ್ದಾರೆ. ಡಿಕೆ, ಬಿಕೆ ಹಳೇಯ ಶೈಲಿಯಲ್ಲಿ ರೌಡಿ ಆಡಳಿತ ನಡೆಸಿದ್ದಾರೆ. ಜಯರಾಜ್ ಮತ್ತು ಕೊತ್ವಾಲ್ ಶಿಷ್ಯಂದ್ರು ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಶ್ರೀರಾಮುಲು ಆಪಾದಿಸಿದರು.