ಮಾಗಡಿ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ: ಎ.ಮಂಜುನಾಥ್

KannadaprabhaNewsNetwork |  
Published : Jun 22, 2025, 01:18 AM IST
ಪಟ್ಟಣದ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಜನಗಳ ಸಮಸ್ಯೆ ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಎ.ಮಂಜುನಾಥ್  | Kannada Prabha

ಸಾರಾಂಶ

ನಾನು ಶಾಸಕನಾಗಿದ್ದ ಅವಧಿಯಲ್ಲಿ ಬಗುರ್ ಹುಕುಂ ಸಾಗುವಳಿ ಸಮಿತಿಯಲ್ಲಿ 169 ಫಲಾನುಭವಿಗಳನ್ನು ಗುರುತಿಸಿ ಇನ್ನೇನು ಹಕ್ಕು ಪತ್ರ ನೀಡುವ ಸಮಯದಲ್ಲಿ ಚುನಾವಣೆ ಬಂದಿತ್ತು, ನಾನು ಆಯ್ಕೆ ಮಾಡಿದ್ದ ಒಬ್ಬರಿಗೂ ಹಕ್ಕುಪತ್ರ ಭೂ ಮಂಜೂರಾತಿ ಕೊಟ್ಟಿಲ್ಲ. ಯಾವ ಕಾರಣಕ್ಕೆ ತಡೆ ಹಿಡಿದಿದ್ದಾರೆ ಎಂಬುದನ್ನು ಶಾಸಕ ಬಾಲಕೃಷ್ಣರವರು ಸ್ಪಷ್ಟಪಡಿಸಬೇಕು.

ಕನ್ನಡಪ್ರಭ ವಾರ್ತೆ ಮಾಗಡಿ

ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ, ಜನರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ಯಾವೊಬ್ಬ ಅಧಿಕಾರಿಯೂ ಸಾರ್ವಜನಿಕರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ಇದು ಹೀಗೆ ಮುಂದುವರಿದರೆ ತಾಲೂಕು ಕಚೇರಿಗೆ ಬೀಗ ಜಡಿದು ಕೃಷಿ ಸಚಿವ ಕೃಷ್ಣಭೈರೇಗೌಡ ಅವರೇ ಸ್ಥಳಕ್ಕೆ ಬಂದು ಉತ್ತರಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ಪಟ್ಟಣದ ತಾಲೂಕು ಕಚೇರಿಗೆ ಭೇಟಿ ನೀಡಿ, ಜನಗಳ ಸಮಸ್ಯೆ ಆಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕ ಎಚ್.ಸಿ.ಬಾಲಕೃಷ್ಣರವರು 5 ಬಾರಿ ಶಾಸಕರಾಗಿದ್ದು, ತಾಲೂಕು ಆಡಳಿತವನ್ನು ಸರಿಯಾಗಿ ನಡೆಸುತ್ತಿಲ್ಲ. ಇದು ಅವರ ಗೌರವಕ್ಕೆ ಸರಿಹೋಗಲ್ಲ, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಹಿಡಿತಕ್ಕೆ ಬರುತ್ತಿಲ್ಲವೇ? ಎಂದು ಪ್ರಶ್ನಿಸಿದ ಮಾಜಿ ಶಾಸಕರು, ತಾಲೂಕು ಕಚೇರಿ ಅವ್ಯವಸ್ಥೆಯ ಆಗರವಾಗಿದೆ. ಅದರಲ್ಲೂ ರೆಕಾರ್ಡ್ ರೂಂ, ಸರ್ವೇ ಇಲಾಖೆ ಕೊಠಡಿಗಳು ಭ್ರಷ್ಟರ ಸಂತೆಯಾಗಿವೆ. ಈ ಸಂಬಂಧ ಜನರೇ ನನ್ನ ಬಳಿ ಬಂದು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರಾದವರು ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಆ ಕೆಲಸವನ್ನು ನಿರ್ವಹಿಸಲು ಶಾಸಕರಿಂದ ಆಗುತ್ತಿಲ್ಲ. ಜನರ ಸಮಸ್ಯೆಗಳು ಜ್ವಲಂತ ಸಮಸ್ಯೆಗಳಾಗಿಯೇ ಜಟಿಲಗೊಳ್ಳುತ್ತಾ ಉಳಿಯುತ್ತಿವೆ. ಜನಸಾಮಾನ್ಯರ ಕೈಗೆ ಸಿಗದ ಅಧಿಕಾರಿಗಳ ನಡೆ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಮುಂದಿನ ಶುಕ್ರವಾರ ತಾಲೂಕು ಕಚೇರಿಗೆ ಭೇಟಿ ನೀಡುತ್ತೇನೆ. ಎಲ್ಲಾ ಅಧಿಕಾರಿಗಳು ಕಚೇರಿಯಲ್ಲಿದ್ದು, ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಮತ್ತೊಮ್ಮೆ ರಿಯಾಲಿಟಿ ಚೆಕ್ ಮಾಡಿ ಅಧಿಕಾರಿ ವರ್ಗದವರನ್ನು ತರಾಟೆಗೆ ತೆಗೆದುಕೊಳ್ಳುವುದಾಗಿ ಮಾಜಿ ಶಾಸಕರು ಎಚ್ಚರಿಕೆ ನೀಡಿದರು.

ನೂರಾರು ರೈತರು ತಮ್ಮ ಅಹವಾಲುಗಳನ್ನು ಮಾಜಿ ಶಾಸಕ ಎ.ಮಂಜುನಾಥ್‌ಗೆ ನೀಡಿದರು. ಸುಮಾರು 124 ದೂರುಗಳು ಬಂದಿದ್ದು, ಮುಂದಿನ ವಾರ ಇದಕ್ಕೆ ಉತ್ತರ ನೀಡುವುದಾಗಿ ಮಾಜಿ ಶಾಸಕರು ರೈತರಿಗೆ ಸಮಜಾಯಿಷಿ ನೀಡಿದ್ದಾರೆ.

ಹಕ್ಕು ಪತ್ರ ಏಕೆ ನೀಡಿಲ್ಲ:

ನಾನು ಶಾಸಕನಾಗಿದ್ದ ಅವಧಿಯಲ್ಲಿ ಬಗುರ್ ಹುಕುಂ ಸಾಗುವಳಿ ಸಮಿತಿಯಲ್ಲಿ 169 ಫಲಾನುಭವಿಗಳನ್ನು ಗುರುತಿಸಿ ಇನ್ನೇನು ಹಕ್ಕು ಪತ್ರ ನೀಡುವ ಸಮಯದಲ್ಲಿ ಚುನಾವಣೆ ಬಂದಿತ್ತು, ನಾನು ಆಯ್ಕೆ ಮಾಡಿದ್ದ ಒಬ್ಬರಿಗೂ ಹಕ್ಕುಪತ್ರ ಭೂ ಮಂಜೂರಾತಿ ಕೊಟ್ಟಿಲ್ಲ. ಯಾವ ಕಾರಣಕ್ಕೆ ತಡೆ ಹಿಡಿದಿದ್ದಾರೆ ಎಂಬುದನ್ನು ಶಾಸಕ ಬಾಲಕೃಷ್ಣರವರು ಸ್ಪಷ್ಟಪಡಿಸಬೇಕು. ಎರಡು ವರ್ಷವಾದರೂ ಕೂಡ ನನ್ನ ಅವಧಿಯ ಒಂದು ಹಕ್ಕು ಪತ್ರ ವಿತರಣೆ ಮಾಡಿಲ್ಲ ಎಂದರೆ ಹೇಗೆ? ಎಲ್ಲಾ ರೀತಿಯ ದಾಖಲಾತಿಗಳು ಇದ್ದರೂ ಕೂಡ ಈ ರೀತಿ ಬಡವರಿಗೆ ವಂಚಿಸುವುದು ಸರಿಯಲ್ಲ, ಮುಂದಿನ ವಾರ ನಾನು ಕಚೇರಿಗೆ ಬಂದಾಗ ತಹಸೀಲ್ದಾರ್ ಮತ್ತು ಅಧಿಕಾರಿಗಳು ಸರಿಯಾದ ಉತ್ತರ ಕೊಡಬೇಕು, ಇಲ್ಲವಾದರೆ ತಾಲೂಕು ಕಚೇರಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮಾಜಿ ಶಾಸಕ ಎ. ಮಂಜುನಾಥ್ ಗರಂ ಆದರು.

ಇದೇ ವೇಳೆ ನೂರಾರು ರೈತರು, ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ
ಒಪಿಎಸ್‌ ಜಾರಿಗೆ ಸರ್ಕಾರಕ್ಕೆ ಒತ್ತಾಯಿಸುವೆ-ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಒತ್ತಾಯ