ಹುಬ್ಬಳ್ಳಿ: ವಸತಿ ಇಲಾಖೆಯ ಮನೆ ಹಂಚಿಕೆಯಲ್ಲಿನ ಭ್ರಷ್ಟಾಚಾರ ಖಂಡಿಸಿ ಬಿಜೆಪಿಯ ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ವತಿಯಿಂದ ಗುರುವಾರ ಇಲ್ಲಿನ ತಹಸಿಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಜಿಲ್ಲಾ ವಕ್ತಾರ ರವಿ ನಾಯಕ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಮೂಡಾ, ವಾಲ್ಮೀಕಿ ಹಗರಣದ ನಂತರ ಈಗ ವಸತಿ ಹಗರಣ ಸದ್ದು ಮಾಡುತ್ತಿದೆ. ರಾಜ್ಯ ಸರ್ಕಾರದ ಧೋರಣೆಗಳಿಂದ ನಿರ್ದೋಷಿ ಅಧಿಕಾರಿಗಳು ಬಲಿಪಶುವಾಗುತ್ತಿದ್ದಾರೆ. ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಬಡವರಿಗೆ ಸಿಗಬೇಕಾದ ಮನೆಗಳಿಗೆ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಕೂಡಲೇ ವಸತಿ ಸಚಿನ ಜಮೀರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಕ್ಷೇತ್ರದ ಅಧ್ಯಕ್ಷ ರಾಜು ಕಾಳೆ ಮಾತನಾಡಿ, ಜಮೀರ್ ಅಹ್ಮದ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ವಸತಿ ಸಚಿವ ಜಮೀರ್ ಅಹ್ಮದ್ ಅವರ ವಿರುದ್ಧ ಕ್ರಮಕೈಗೊಂಡು ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ನಗರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ, ಉಮೇಶ್ ಕೌಜಗೇರಿ, ಬೀರಪ್ಪ ಖಂಡೇಕರ, ಚಂದ್ರಿಕಾ ಮೇಸ್ತ್ರಿ, ರಾಮನಗೌಡ ಶೆಟ್ಟನಗೌಡ್ರು, ಸಿದ್ದು ಮೊಗಲಿಶೆಟ್ಟರ್, ತೋಟಪ್ಪ ನಿಡಗುಂದಿ, ಅಶೋಕ್ ವಾಲ್ಮೀಕಿ, ಚೇತನ್ ಬರದ್ವಾಡ, ಮಂಜು ಊಟವಾಲೆ, ಮುತ್ತು ಹೆಬ್ಬಳ್ಳಿ, ಮಂಜುನಾಥ ಕೊಂಡಪಲ್ಲಿ ಎಸ್.ಕೆ. ಕೊಟ್ರೇಶ್, ನವೀನ ಮಡಿವಾಳರ, ಅಕ್ಕಮಹಾದೇವಿ ಹೆಗಡೆ, ಸುಮಾ ಶಿವನಗೌಡ್ರು, ಅರ್ಚನಾ ಕೆ. ಇಂದಿರಾ ಚವಾಣ್, ರೇಖಾ ಕಾಟ್ಕರ್, ಬಸವರಾಜ ಅಂಗಡಿ ಮೊದಲಾದವರು ಪಾಲ್ಗೊಂಡಿದ್ದರು.