ಭ್ರಷ್ಟಾಚಾರವು ನಿರಂತರ ಸೇವೆ, ಪ್ರಾಮಾಣಿಕತೆಯನ್ನು ತಿಂದು ಹಾಕುತ್ತದೆ. ಸಮಾಜ ಕಲುಷಿತಗೊಂಡರೆ, ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಧಾರವಾಡ:
ಪ್ರಸ್ತುತ ಎಲ್ಲೆಡೆ ಭ್ರಷ್ಟಾಚಾರದ ಮಾತು ಕೇಳಿ ಬರುತ್ತಿದೆ. ಇದು ಸಮಾಜಕ್ಕೆ ಅಂಟಿದ ಪಿಡುಗು. ಇದನ್ನು ತೊಡೆದು ಹಾಕಲು ನಿಸ್ವಾರ್ಥ ಸೇವೆ, ನಿಸ್ವಾರ್ಥ ಜೀವನ ನಮ್ಮದಾಗಬೇಕು ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶೆ ಬಿ.ಜಿ. ರಮಾ ಹೇಳಿದರು.
ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ಜಿಲ್ಲಾಡಳಿತವು ಕರ್ನಾಟಕ ಲೋಕಾಯುಕ್ತ ಇಲಾಖೆ ಜತೆಗೂಡಿ ಸೋಮವಾರ ಆಯೋಜಿಸಿದ್ದ ಜಾಗೃತಿ ಅರಿವು ಸಪ್ತಾಹ ಉದ್ಘಾಟಿಸಿದ ಅವರು, ಭ್ರಷ್ಟಾಚಾರವು ನಿರಂತರ ಸೇವೆ, ಪ್ರಾಮಾಣಿಕತೆಯನ್ನು ತಿಂದು ಹಾಕುತ್ತದೆ. ಸಮಾಜ ಕಲುಷಿತಗೊಂಡರೆ, ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬರು ಪಾರದರ್ಶಕವಾಗಿ ಮತ್ತು ಆತ್ಮಸಾಕ್ಷಿಯಿಂದ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದರು.
ನಿಯತ್ತಿನ ದುಡಿಮೆ ಆತ್ಮಬಲ ಹೆಚ್ಚಿಸುತ್ತದೆ. ಕಾಯಕ ಶುದ್ಧವಾಗಿದ್ದರೆ ಕಾಯಲು ಬೇರೆಯವರ ಅಗತ್ಯವಿಲ್ಲ. ಇತರರ ದುಡಿಮೆ ಗುರುತಿಸಿ, ಗೌರವಿಸೋಣ. ಸಮಾಜದ ಏಳಿಗೆ ಹಾಗೂ ಅಭಿವೃದ್ಧಿಗಾಗಿ ಎಲ್ಲರೂ ಸೇರಿ ಬದುಕೋಣ ಎಂದು ಕರೆ ನೀಡಿದರು.
ಎಸ್ಪಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಪ್ರತಿಯೊಬ್ಬರಿಗೆ ಕೆಲಸದಲ್ಲಿ ತೃಪ್ತಿ, ಉತ್ತಮ ಆರೋಗ್ಯ ಮುಖ್ಯ. ಸದ್ಭಾವನೆಯಿಂದ ಕರ್ತವ್ಯ ನಿರ್ವಹಿಸಿದರೆ ಬದುಕು ಸುಂದರವಾಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು, ಪ್ರತಿ ಸರ್ಕಾರಿ ನೌಕರರಲ್ಲಿ ಕರ್ತವ್ಯ ಪ್ರಜ್ಞೆ, ಪ್ರಾಮಾಣಿಕತೆ ಮತ್ತು ಮಾನವೀಯತೆ ಇದ್ದಾಗ ಯಾವ ಸಮಸ್ಯೆಗಳು ಬರುವುದಿಲ್ಲ. ಬೇರೆಯವರಿಗೆ ತೊಂದರೆಯೂ ಆಗುವುದಿಲ್ಲ ಎಂದು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ ಇದ್ದರು. ಲೋಕಾಯುಕ್ತ ಜಿಲ್ಲಾ ಪೊಲೀಸ್ ಅಧೀಕ್ಷಕ ಹುನಮಂತರಾಯ ಸ್ವಾಗತಿಸಿದರು. ಮಹಮ್ಮದ ತಹಶೀಲ್ದಾರ್ ನಿರೂಪಿಸಿದರು. ಸೋಮಶೇಖರ ಜಾಡರ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.