ಕಣ್ಣಿಗೆ ಮಣ್ಣೆರಚುವ ಆಯೋಗ ಬೇಡ, ಕಣ್ಣೀರೊರೆಸುವ ಒಳಮೀಸಲು ಬೇಕು: ಫರ್ನಾಂಡಿಸ್‌ ಆಗ್ರಹ

KannadaprabhaNewsNetwork | Published : Oct 30, 2024 12:41 AM

ಸಾರಾಂಶ

ಒಳ ಮೀಸಲಾತಿ ಜಾರಿ ಮಾಡಿ ಸುಪ್ರಿಂ ಕೋರ್ಟ್ ಆದೇಶ ನಂತರ ಪ್ರಕಟಿಸಿರುವ ನೇಮಕಾತಿಗಳಿಗೆ ಒಳಮಿಸಲಾತಿ ಕಲ್ಪಸಿ ನೇಮಕಾತಿಗಳು ಮಾಡಬೇಕು ಅಲ್ಲಿಯವರೆಗೆ ಸದರಿ ನೇಮಕಾತಿಗಳು ತಡೆಹಿಡಿಯಬೇಕೆಂದು ಫರ್ನಾಂಡಿಸ್‌ ಹಿಪ್ಪಳಗಾಂವ್‌ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ, ಬೀದರ್‌

ಮಾದಿಗ ಸಮಾಜವು ಒಳ ಮೀಸಲಾತಿಗಾಗಿ 3 ದಶಕಗಳಿಂದ ನಿರಂತರ ಹೋರಾಟ ಮಾಡುತ್ತಿದೆ, ಮೀಸಲಾತಿ ವಂಚಿತರ ಕಣ್ಣೀರು ಒರೆಸುವ ಬದಲು ಕರ್ನಾಟಕ ಸರ್ಕಾರ ಕಣ್ಣಿಗೆ ಮಣ್ಣೆರಚುವ ಹೊಸ ಆಯೋಗ ರಚನೆ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯಧ್ಯಕ್ಷರಾದ ಫರ್ನಾಂಡಿಸ್‌ ಹಿಪ್ಪಳಗಾಂವ್‌ ಆರೋಪಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆ.1ರಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ ನಂತರವೂ ಕರ್ನಾಟಕದಲ್ಲಿ ನಿರಂತರ ಹೋರಾಟ ನಡೆದಿದೆ. ಹೊಸದೊಂದು ಆಯೋಗ ರಚಿಸಿ ಎನ್ನುವ ಬೇಡಿಕೆ ಮಾದಿಗ ಸಮಾಜದಿಂದ ಬಂದಿರಲೇ ಇಲ್ಲ. ಹೊಸ ಆಯೋಗ ರಚಿಸಿ ಎಂದು ಮಾದಿಗ ಸಮಾಜದ ಯಾವ ಹೋರಾಟಗಾರರೂ ಬೇಡಿಕೆ ಸಲ್ಲಿಸಿರಲಿಲ್ಲ. ಆದರೆ ಇದೀಗ ಹೊಸ ಆಯೋಗ ರಚಿಸುವ ಹಿಂದೆ ದೊಡ್ಡ ಹುನ್ನಾರ ನಡೆದಿರುವದು ಸ್ಪಷ್ಟವಾಗುತ್ತಿದೆ ಎಂದರು.

ಕಾಲಹರಣ ಮಾಡಿ ಸಂತ್ರಸ್ತ ದಲಿತರನ್ನು ವಂಚಿಸುವ ಉದ್ದೇಶದಿಂದಲೇ ಆಯೋಗ ರಚಿಸುವ ನಾಟಕ ನಡೆಯುತ್ತಿದೆ. ಸುಪ್ರೀಂಕೋರ್ಟಿನ ತೀರ್ಪು ಬಂದು 2 ತಿಂಗಳು 27 ದಿನಗಳಾದರೂ ಕಾಂಗ್ರೆಸ್‌ ಸರ್ಕಾರ ಒಳಮೀಸಲಾತಿಯ ಬೇಡಿಕೆಯನ್ನು ನಿರ್ಲಕ್ಷಿಸುತ್ತಾ ಬಂದಿತ್ತು. ಈಗ ಉಪಚುನಾವಣೆಯ ಮತಗಳ ಆಸೆಗೆ ಬಿದ್ದು ಈ ಕಾಟಾಚಾರದ ನಿರ್ಣಯ ಘೋಷಿಸಿದೆ.

ಸರ್ಕಾರದ ಈ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಜನಸಂಖ್ಯೆಯ ದತ್ತಾಂಶದ ಕ್ಯಾತೆ ತೆಗೆಯುವವರು ಸುಪ್ರೀಂಕೋರ್ಟಿನ ತೀರ್ಪು ಬರುವರೆಗೂ ಸುದ್ದಿಯಲ್ಲೇ ಇರಲಿಲ್ಲ. ಸದಾಶಿವ ಆಯೋಗಕ್ಕೆ, ಮಾಧುಸ್ವಾಮಿ ಸಮಿತಿಗೆ ಅಂದೇ ಮನವಿ ಸಲ್ಲಿಸಬಹುದಿತ್ತು. ಈ ಕ್ಯಾತೆ ತೆಗೆಯುವವರ ಹಿಂದೆ ರಾಜಕೀಯ ಹಿತಾಸಕ್ತಿ ಆಡಗಿದೆ ಎಂದರು.

ಸಚಿವರಾದ ಡಾ.ಮಹದೇವಪ್ಪ ಮತ್ತು ಪ್ರಿಯಾಂಕ ಖರ್ಗೆ ಅವರ ತಾಳಕ್ಕೆ ಕುಣಿಯುವ ಮುಖ್ಯಮಂತ್ರಿಗಳು ಮಾದಿಗ ಸಮಾಜಕ್ಕೆ ಮತ್ತೆ ಮೋಸ ಮಾಡಿದ್ದಾರೆ. ಇವರಿಗೆ ಬರಲಿರುವ ಮೂರೂ ಉಪಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಲಾಗುವುದು ಎಂದು ಹಿಪ್ಪಳಗಾಂವ್‌ ಎಚ್ಚರಿಸಿದರು.

ಯಾವದೇ ಸಮಿತಿ ರಚನೆ ಮಾಡದೇ ಹರಿಯಾಣ ಸರ್ಕಾರ ಒಳ ಮೀಸಲಾತಿ ಜಾರಿ ಮಾಡಿದೆ ಆದರೆ ರಾಜ್ಯ ಸರ್ಕಾರ ಉಚ್ಚ ನ್ಯಾಯಲಯದ ನಿವೃತ್ತ ನ್ಯಾಯಾಧೀಶರ ನೇಮಕ ಮಾಡುವ ಮಾತುಗಳನ್ನಾಡಿರುವದು ಯಾಕೆ ಇದರ ಹಿಂದೆ ಮಾದಿಗರನ್ನು ತುಳಿಯುವ ಹುನ್ನಾರ ಅಡಗಿದೆ ಎಂಬುವದಂತೂ ಸ್ಪಷ್ಟ ಎಂದು ಕಿಡಿಕಾರಿದರು.

ಒಳ ಮೀಸಲಾತಿ ಜಾರಿ ಮಾಡಿ ಸುಪ್ರಿಂ ಕೋರ್ಟ್ ಆದೇಶ ನಂತರ ಪ್ರಕಟಿಸಿರುವ ನೇಮಕಾತಿಗಳಿಗೆ ಒಳಮಿಸಲಾತಿ ಕಲ್ಪಸಿ ನೇಮಕಾತಿಗಳು ಮಾಡಬೇಕು ಅಲ್ಲಿಯವರೆಗೆ ಸದರಿ ನೇಮಕಾತಿಗಳು ತಡೆಹಿಡಿಯಬೇಕೆಂದು ಫರ್ನಾಂಡಿಸ್‌ ಹಿಪ್ಪಳಗಾಂವ್‌ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಜಯಕುಮಾರ ಹಿಪ್ಪಳಗಾಂವ್‌, ಜಿಲ್ಲಾ ಉಪಾಧ್ಯಕ್ಷ ಕಮಲಾಕರ ಎಲ್.ಹೆಗಡೆ, ಆದಿ ಜಾಂಬವ ಸಂಘದ ಜಾಫಟ ಕಡ್ಯಾಳ, ವೀರಶೆಟ್ಟಿ ಬಂಬುಳಗಿ, ಜೈಶಿಲ ಮೇತ್ರೆ, ಹರೀಶ ಗಾಯಕವಾಡ, ರವೀಂದ್ರ ಸೂರ್ಯವಂಶಿ, ರಾಹುಲ ನಂದಿ ಇತರರು ಉಪಸ್ಥಿತರಿದ್ದರು.

Share this article