ಕೊಪ್ಪಳ: ದೇಶದಲ್ಲಿ ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಅಪಾಯಕಾರಿಯಾಗಿದ್ದು, ಅದನ್ನು ಮಟ್ಟ ಹಾಕಬೇಕು ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಕಳವಳ ವ್ಯಕ್ತಪಡಿಸಿದರು.
ಸಂವಿಧಾನದಡಿಯಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಸಂವಿಧಾನ ಎಲ್ಲರಿಗೂ ತಾಯಿ ಇದ್ದಂತೆ. ಸ್ವಾತಂತ್ರ್ಯಕ್ಕಾಗಿ ಕೋಟ್ಯಂತರ ಭಾರತೀಯರು ಹೋರಾಟ ಮಾಡಿದ್ದಾರೆ. ಈಗಲೂ ದೇಶದ ಗಡಿಯನ್ನು ಸೈನಿಕರು ಪ್ರಾಣದ ಹಂಗು ತೊರೆದು ಹೋರಾಟ ಮಾಡುತ್ತಾರೆ. ದೇಶದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೆಚ್ಚಾಗುತ್ತಿದೆ. ಅಧಿಕಾರ ಸಿಕ್ಕ ತಕ್ಷಣ ಎಲ್ಲ ಅಧಿಕಾರ ದುರುಪಯೋಗ ಮಾಡುತ್ತಾರೆ. ವಿದ್ಯೆ ಇಲ್ಲದವನು ತಪ್ಪು ಮಾಡುವುದು ಬೇರೆ, ವಿದ್ಯಾವಂತರು ಕಾನೂನು ಅರಿವು ಇದ್ದರೂ ಮೋಸ ವಂಚನೆ ಮಾಡುತ್ತಾರೆ ಎಂದರು.
ಲೋಕಾಯುಕ್ತ ಸ್ವಾಯತ್ತ ಸಂಸ್ಥೆ, ಇದಕ್ಕೆ ಯಾರ ಹಂಗೂ ಇಲ್ಲ. ಸಿಎಂ ಅವರನ್ನೇ ಜೈಲಿಗೆ ಕಳುಹಿಸುವಷ್ಟು ಕ್ರಮ ವಹಿಸುತ್ತೇವೆ. ಅಷ್ಟೊಂದು ಬಲಿಷ್ಠ ಸಂಸ್ಥೆ ನಮ್ಮದು. ದೇಶದಲ್ಲಿಯೇ ರಾಜ್ಯ ಲೋಕಾಯುಕ್ತ ಸಂಸ್ಥೆಗೆ ಒಳ್ಳೆಯ ಹೆಸರಿದೆ ಎಂದರು.ಕೊಪ್ಪಳದಲ್ಲಿ ಬಂದಾಗಿದ್ದ ಅಂಗನವಾಡಿ ಕೇಂದ್ರವನ್ನು 24 ಗಂಟೆಯಲ್ಲಿ ಓಪನ್ ಮಾಡಿದ್ದೇನೆ. ಲೋಕಾಯುಕ್ತ ಸಂಸ್ಥೆ ಮೊದಲಿನಿಂದಲೂ ಇದೆ. ಜೈಲಿಗೆ ಕಳುಹಿಸುವ ಅಧಿಕಾರವಿದೆ. ಸುಳ್ಳು ಕೇಸ್ ಜಾಸ್ತಿಯಾಗಿವೆ. ಸುಳ್ಳು ಕೇಸ್ ಹಾಕುವುದನ್ನು ಬಿಡಬೇಕು. ಈಚೆಗಿನ ದಿನಗಳಲ್ಲಿ ಇದು ಅತಿಯಾಗಿರುವುದು ನೋವಿನ ಸಂಗತಿ. ಸಮಾಜ ಬದಲಾಗಬೇಕು. ದುಡ್ಡು ತೆಗೆದುಕೊಂಡು ವೋಟು ಹಾಕುವುದನ್ನು ಬಿಡಬೇಕು. ಸಹಕಾರಿ ಕ್ಷೇತ್ರ ಸೇರಿದಂತೆ ಎಲ್ಲ ಕಡೆಯೂ ಚುನಾವಣೆಯಲ್ಲಿ ಹಣ ಪಡೆಯಲಾಗುತ್ತದೆ. ಇದು ನಿಲ್ಲಬೇಕು ಎಂದರು.
ತಿಂಗಳೊಳಗಾಗಿ ಇತ್ಯರ್ಥ ಮಾಡಿ:ಉಪಲೋಕಾಯುಕ್ತ ಬಿ. ವೀರಪ್ಪ
ಉಪಲೋಕಾಯುಕ್ತ ಬಿ. ವೀರಪ್ಪ ಅವರು ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆಗಳ ವಿಚಾರಣೆಯಲ್ಲಿ ಎದುರಾದ ಸಮಸ್ಯೆಗಳು, ಇವುಗಳಲ್ಲಿ ಬಹುತೇಕ ತಿಂಗಳೊಳಗಾಗಿ ಸಮಸ್ಯೆ ಇತ್ಯರ್ಥ ಮಾಡಿ ಲೋಕಾಯುಕ್ತ ಕಚೇರಿಗೆ ವರದಿ ಮಾಡುವಂತೆ ಖಡಕ್ ಸೂಚನೆ ನೀಡಿದರು.
ಕುಣಿಕೇರಿ ಗ್ರಾಮದಲ್ಲಿ ರಮೇಶ ಡಂಬ್ರಳ್ಳಿ ಎನ್ನುವವರು ತಮ್ಮ ಹೊಲಕ್ಕೆ ಊರಿನ ಚರಂಡಿ ನೀರು ಬೀಡಲಾಗುತ್ತದೆ. ಇದರಿಂದ ನಾವು ಕೃಷಿ ಬೆಳೆ ಬೆಳೆಯುವುದಕ್ಕೆ ಆಗುತ್ತಿಲ್ಲ ಎಂದು ಪ್ರಶ್ನೆ ಮಾಡಿದರು. ಕುಣಿಕೇರಿ ಗ್ರಾಮದ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಆ ನೀರನ್ನು ಬೇರೆಡೆ ಕಳುಹಿಸಿ ಇಲ್ಲವೇ ಇಂಗುಗುಂಡಿ ಮಾಡಿಸಿ ಎಂದು ಉಪಲೋಕಾಯುಕ್ತರು ತಾಕೀತು ಮಾಡಿದರು. ಅದಕ್ಕೆ ಜಾಗವೇ ಇಲ್ಲ. ಹೀಗಾಗಿ ಊರಿನವರೆಲ್ಲ ತೀರ್ಮಾನ ಮಾಡಿ ಅಲ್ಲಿಯೇ ಕಳುಹಿಸುತ್ತಿದ್ದಾರೆ ಎಂದಾಗ ಉಪಲೋಕಾಯುಕ್ತರು ಊರಿನವರು ಹೇಳುತ್ತಾರೆ ಎಂದರೆ ಏನು ಬೇಕಾದರೂ ಮಾಡುತ್ತಿಯಾ ಎಂದು ಪ್ರಶ್ನೆ ಮಾಡಿದರು.
ಸುಳ್ಳು ದೂರು ಕೊಟ್ಟರೆ ಜೈಲಿಗೆ: ದೂರು ಕೊಡುವವರು ಸಾರ್ವಜನಿಕ ಹಿತಾಸಕ್ತಿಯಿಂದ ನೀಡಬೇಕು. ವೈಯಕ್ತಿಕ ಕಾರಣಕ್ಕಾಗಿ ಹೊಟ್ಟೆ ಉರಿಯಿಂದ ಸುಳ್ಳು ದೂರು ನೀಡಿದರೆ ಜೈಲಿಗೆ ಕಳುಹಿಸಲಾಗುತ್ತದೆ ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.