ಗುರುಶಾಂತ ಜಡೆಹಿರೇಮಠ
ಕನ್ನಡಪ್ರಭ ವಾರ್ತೆ ದಾಂಡೇಲಿಇಲ್ಲಿಯ ಆರಾಧ್ಯ ದೈವ, ಗ್ರಾಮ ದೇವರಾದ ಪುರಮಾರ ದಾಂಡೇಲಪ್ಪನ ಜಾತ್ರೆ ಅ.2 ರಂದು ವಿಜಯ ದಶಮಿಯಂದು ವೈಭವದಿಂದ ನೆರವೇರಲಿದೆ. ಸಹಸ್ರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ರಾಮಲೀಲೋತ್ಸವವೂ ಅದೇ ದಿನ ನಡೆಯಲಿದ್ದು ಸಂಭ್ರಮವನ್ನು ಇಮ್ಮಡಿಗೊಳಿಸುತ್ತದೆ.ಪ್ರತಿ ವರ್ಷವು ದಸರಾದಂದು (ವಿಜಯದಶಮಿ) ನಡೆಯುವ ದಾಂಡೇಲಪ್ಪನ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಜನರು ಪಾಲ್ಗೊಂಡು ಭಗವಂತನ ದರ್ಶನ ಪಡೆಯುತ್ತಾರೆ. ಪುರಮಾರ ದಾಂಡೇಲಪ್ಪ ಜಾತ್ರೆಗೆ ರಾಜ್ಯದ ಜೊತೆ ಪಕ್ಕದ ಗೋವಾ, ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳ ಭಕ್ತಾಧಿಗಳು, ಜನರು ಪ್ರತಿ ವರ್ಷ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ
ಎಂತಹದೇ ಕಷ್ಟ ಕಾರ್ಪಣ್ಯಗಳಿದ್ದರೂ ಅದನ್ನು ದಾಂಡೇಲಪ್ಪನ ಸನ್ನಿಧಿಗಿಟ್ಟು ಮನಃಪೂರ್ವಕವಾಗಿ ಬೇಡಿಕೊಂಡವರಿಗೆ ಒಲಿದ ಬಂದ ಭಗವಂತನಾಗಿದ್ದಾನೆ. ಜಾತಿ, ಧರ್ಮಗಳನ್ನು ಮೀರಿ ನಿಂತ ದಾಂಡೇಲಪ್ಪನ ಪೂಜೆಯು ಬ್ರಾಹ್ಮಣೇತರ ಕುನಬಿ ಜನಾಂಗದ ಮಿರಾಶಿ ಕುಟುಂಬದಿಂದ ನಡೆಯುತ್ತಿದೆ. ದಾಂಡೇಲಿಗೆ ಬರುವ ಪ್ರತಿಯೊಬ್ಬರು ನಗರದ ಗ್ರಾಮ ದೇವರಾದ ದಾಂಡೇಲಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ.ಈ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವ ಜಾತ್ರೆಗೆ ಚಾಲನೆ ಸಿಗುವುದು ಒಂದು ವಿಶೇಷ. ದಾಂಡೇಲಪ್ಪನ ಚರಿತ್ರೆಯ ಪ್ರಕಾರ ದೇಹ ನಗರದ ಮಿರಾಶಿ ಗಲ್ಲಿಯಲ್ಲಿದ್ದು, ರುಂಡ ಸುಮಾರು ಎರಡು ಕಿಮೀ ದೂರದ ಹಾಳಮಡ್ಡಿ ಇಗೀನ ದಾಂಡೇಲಪ್ಪ ನಗರದಲ್ಲಿದೆ (ಎರಡು ಕಡೆಗೆ ದೇವಸ್ಥಾನಗಳಿವೆ). ಪ್ರತಿ ವರ್ಷ ಜಾತ್ರೆ ಆರಂಭಕ್ಕೆ ಮುಂಚೆ ಮಿರಾಶಿ ಗಲ್ಲಿಯಿಂದ ಪುರಮಾರ ದಾಂಡೇಲಪ್ಪನ ಉತ್ಸವ ಮೂರ್ತಿಯನ್ನು ಪಾಲಕಿಯಲ್ಲಿ ಹೊತ್ತು ಮೆರವಣಿಗೆ ಮೂಲಕ (ಹಾಳಮಡ್ಡಿ) ದಾಂಡೇಲಪ್ಪ ನಗರಕ್ಕೆ ಬಂದು ಮುಟ್ಟಿ ಅಲ್ಲಿ ಪೂಜಾ ಕೈಂಕರ್ಯಗಳ ನಂತರ ಜಾತ್ರೆಗೆ ಚಾಲನೆ ಸಿಗುತ್ತದೆ.
ದಸರಾ ದಿನ ರಾಮಲೀಲೋತ್ಸವ:ದಸರಾ ದಿನದಂದು ನಡೆಯುವ ಜಾತ್ರೆಯಲ್ಲಿ ಪುರಮಾರ ದಾಂಡೇಲಪ್ಪನ ದರ್ಶನ ಪಡೆದು ಪುನಿತರಾಗುವ ಭಕ್ತಾದಿಗಳು ಸಂಜೆ ೬ ಗಂಟೆಯಿಂದ ೮ ಗಂಟೆಗಳ ವರೆಗೆ ನಡೆಯುವ ರಾಮಲೀಲೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ದಾಂಡೇಲಿ ರಾಮಲೀಲೋತ್ಸವ ಆಚರಣೆಯನ್ನು ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯವರು ನಡೆಸಿಕೊಡುತ್ತಾರೆ. ರಾಮಲೀಲೋತ್ಸವದಲ್ಲಿ ಸಹಸ್ರಾರು ಜನ ಪಾಲ್ಗೊಂಡು ರಾವಣ ಸುಡು ಮದ್ದು ಕಾರ್ಯಕ್ರಮದ ಆನಂದ ಅನುಭವಿಸಿ, ರಾವಣ ದಹನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.ಪ್ರತಿವರ್ಷದಂತೆ ೬೫ ಅಡಿ ಎತ್ತರದ ರಾವಣ, ೪೫ ಅಡಿಯ ಕುಂಬಕರ್ಣ ಮತ್ತು ಮೇಘನಾಥರ ಪುತ್ಥಳಿಗಳನ್ನು ಡಿಲಕ್ಸ ಮೈದಾನದಲ್ಲಿ ನಿಲ್ಲಿಸಿ ದಸರಾದಂದು ಸಂಜೆ ೬.೩೦ರಿಂದ ಸುಮಾರು ೧ ತಾಸು ಸಿಡಿ ಮದ್ದು ಸುಡುವ ಪ್ರದರ್ಶನ ನಡೆದ ನಂತರ ರಾವಣ, ಕುಂಬಕರ್ಣ ಮತ್ತು ಮೇಘನಾಥರ ಮೂರ್ತಿಗಳ ದಹನ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದಿನಿಂದ ರಾಜ್ಯದಲ್ಲಿಯೇ ಸಿಡಿಮದ್ದು ಸುಡುವ ಎರಡನೇ ಅತಿ ದೊಡ್ಡ ಕಾರ್ಯಕ್ರಮವನ್ನು ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯವರು ನಡೆಸುತ್ತಾ ಬಂದಿದ್ದಾರೆ.ಪ್ರವಾಸೋದ್ಯಮ ನಗರವಾದ ದಾಂಡೇಲಿಯ ಈ ಎರಡು ಕಾರ್ಯಕ್ರಮಗಳು ಹೊರ ಊರುಗಳಿಂದ ಬಂದ ಪ್ರವಾಸಿಗರು ಪಾಲ್ಗೊಂಡು ಆನಂದಿಸುತ್ತಾರೆ. ಪ್ರತಿವರ್ಷ ಈ ಸಂದರ್ಭದಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.