ಮಂಜುನಾಥ ಕೆ.ಎಂ/ ವಿ.ಎಂ. ನಾಗಭೂಷಣ
ಬಳ್ಳಾರಿ/ಸಂಡೂರು: ಹೈವೋಲ್ಟೇಜ್ ಕ್ಷೇತ್ರವಾಗಿದ್ದ ಸಂಡೂರು ಉಪ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಗಣಿನಾಡು ಸಂಡೂರಿನ ರಾಜಕೀಯ ಸಾರಥ್ಯ ಯಾರ ಕೈಗೆ ಎಂಬುದು ಸ್ಪಷ್ಟವಾಗಲಿದೆ.ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಈ.ತುಕಾರಾಂ ಪತ್ನಿ ಅನ್ನಪೂರ್ಣ, ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಅಖಾಡದಲ್ಲಿದ್ದು ಚುನಾವಣೆ ಎದುರಿಸಿದರು.
ಭಾರೀ ಜಿದ್ದಾಜಿದ್ದಿ ಕಂಡು ಬಂದಿದ್ದ ಚುನಾವಣೆಯ ಮತದಾನದ ಬಳಿಕ ಇದೀಗ ಫಲಿತಾಂಶದ ಕಡೆ ಎಲ್ಲರ ದೃಷ್ಟಿ ನೆಟ್ಟಿದೆ. ಬೆಳಿಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಶುರುವಾಗಲಿದ್ದು, ಮಧ್ಯಾಹ್ನ 12 ಗಂಟೆ ವೇಳೆಗೆ ಸ್ಪಷ್ಟ ಫಲಿತಾಂಶ ಹೊರ ಬೀಳುವ ಸಾಧ್ಯತೆಯಿದೆ.ಕೈ ಪಕ್ಷಕ್ಕೆ ಗೆಲುವಿನ ಓಟದ ವಿಶ್ವಾಸ:
ಸಂಡೂರಿನ ಈವರೆಗೆ ನಡೆದ 16 ಚುನಾವಣೆಗಳ ಪೈಕಿ 14 ಬಾರಿ ಕಾಂಗ್ರೆಸ್ ಗೆಲುವು ದಕ್ಕಿಸಿಕೊಂಡಿದ್ದು, ಈ ಉಪ ಚುನಾವಣೆಯಲ್ಲೂ ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದೆ. ಸಂಡೂರು ಅಖಾಡ ಎದುರಿಸಲು ಖುದ್ದು ಸಿಎಂ, ಡಿಸಿಎಂ ಸೇರಿದಂತೆ ಸಚಿವ ಸಂಪುಟದ ಅನೇಕ ನಾಯಕರು ಸಂಡೂರಿನಲ್ಲಿಯೇ ವಾಸ್ತವ್ಯ ಹೂಡಿ, ಪ್ರಚಾರ ನಡೆಸಿದ್ದು ಹೆಚ್ಚು ಅನುಕೂಲ ಒದಗಿಸಿದೆ. ಬಿಜೆಪಿ ನಾಯಕರು ಅದೆಷ್ಟೇ ಆರೋಪ ಮಾಡಿದರೂ ಸಂಡೂರಿನ ಜನತೆ ಕಾಂಗ್ರೆಸ್‌ನ ಕೈ ಬಿಡುವುದಿಲ್ಲ. ಸಂಡೂರು ಯಾವತ್ತಿಗೂ ಕೈ ಪಕ್ಷದ ಗಟ್ಟಿನೆಲ ಎಂಬುದನ್ನು ಸಾಬೀತುಪಡಿಸಲಿದ್ದಾರೆ ಎಂಬ ಖಾತ್ರಿಯಿದೆ ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರು.ಕಾಂಗ್ರೆಸ್ ಆಡಳಿತ, ಅಭಿವೃದ್ಧಿಗೆ ಒತ್ತು ಕೊಡದ ತುಕಾರಾಂ ಅವರಿಂದ ರೋಸಿ ಹೋದ ಮತದಾರರು ಈ ಬಾರಿ ಕಮಲ ಪಕ್ಷದತ್ತ ವಾಲಿದ್ದಾರೆ. ಮುಡಾ ಪ್ರಕರಣ, ವಾಲ್ಮೀಕಿ ಹಗರಣ, ಒಳ ಮೀಸಲಾತಿ ವಿಚಾರಗಳು ಚುನಾವಣೆ ಮೇಲೆ ಗಾಢ ಪರಿಣಾಮ ಬೀರಿವೆ. ಕೈ ಪಕ್ಷಕ್ಕೆ ಸೋಲಿನ ರುಚಿ ತೋರಿಸುತ್ತೇವೆ ಎನ್ನುವ ಬಿಜೆಪಿ ಕಾರ್ಯಕರ್ತರು, ಇನ್ನು ಮುಂದೆ ಗಣಿನಾಡಿನಲ್ಲಿ ನಮ್ಮದೇ ಹವಾ ಎಂದು ಬೀಗುತ್ತಿದ್ದಾರೆ. ಶಾಸಕ ಜನಾರ್ದನ ರೆಡ್ಡಿ ಸಂಡೂರಿನಲ್ಲಿಯೇ ವಾಸ್ತವ್ಯ ಹೂಡಿ ಚುನಾವಣೆ ನಡೆಸಿದರು.
ಬೆಟ್ಟಿಂಗ್- ಗೆಲುವಿನ ಕಾತರ ಹೆಚ್ಚಳ:ಸಂಡೂರು ಉಪ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಬೆಟ್ಟಿಂಗ್ ಸದ್ದು ಕೇಳಿ ಬಂದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಪರ ಬೆಂಬಲಿಗರು, ಅಭಿಮಾನಿಗಳು ಬೆಟ್ಟಿಂಗ್ ಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಪರವಾಗಿಯೇ ಹೆಚ್ಚಿನ ಜನರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಬಿಜೆಪಿ ಗೆದ್ದರೆ ಮತ್ತೆ ಜನಾರ್ದನ ರೆಡ್ಡಿ ಪಕ್ಷದಲ್ಲಿ ಮುನ್ನೆಲೆಗೆ ಬರುತ್ತಾರೆ. ಬಿಜೆಪಿ ಸೋತರೆ ಸಂತೋಷ್ ಲಾಡ್ ಹಿಡಿತ ಮತ್ತೊಮ್ಮೆ ಸಾಬೀತಾಗುತ್ತದೆ ಎಂಬಿತ್ಯಾದಿ ಚರ್ಚೆಗಳು ನಡೆದಿವೆ.
ನ.13ರಂದು ನಡೆದ ಸಂಡೂರು ಉಪ ಚುನಾವಣೆಯಲ್ಲಿ ಶೇ.76.24 ಮತದಾನವಾಗಿದೆ. 2,36,402 ಮತದಾರರ ಪೈಕಿ 1,80,189 ಮತದಾರರು ಹಕ್ಕು ಚಲಾಯಿಸಿದ್ದಾರೆ.ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಗೆಲುವು ಖಚಿತ. ಬಿಜೆಪಿಯ ಸುಳ್ಳಿನ ಪ್ರಚಾರಕ್ಕೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ಇನ್ನು ಕೆಲವೇ ಗಂಟೆಗಳಲ್ಲಿ ತಕ್ಕ ಉತ್ತರದ ಸಂದೇಶ ರವಾನಿಸುತ್ತಾರೆ ಎನ್ನುತ್ತಾರೆ
ಕಾಂಗ್ರೆಸ್ ಜಿಲ್ಲಾಧ್ಯಕ್ಷಅಲ್ಲಂ ಪ್ರಶಾಂತ್.ಕಾಂಗ್ರೆಸ್ ಆಡಳಿತದಲ್ಲಿ ಸಂಡೂರು ಅಭಿವೃದ್ಧಿ ಕಂಡಿಲ್ಲ. ಇದು ಸ್ಥಳೀಯ ಮತದಾರರಿಗೂ ಮನವರಿಕೆಯಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಚುನಾಯಿಸಲು ಮತದಾರರು ನಿರ್ಧರಿಸಿದ್ದಾರೆ. ಬಿಜೆಪಿ ಗೆದ್ದು ಇತಿಹಾಸ ಸೃಷ್ಟಿಸುವುದು ಖಚಿತ ಎನ್ನುತ್ತಾರೆ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಮೋಕಾ.