ನರೇಂದ್ರ ಮೋದಿಯಿಂದ ದೇಶ ಅಭಿವೃದ್ಧಿ ಹೊಂದಿಲ್ಲ: ಬಸವರಾಜ ರಾಯರಡ್ಡಿ

KannadaprabhaNewsNetwork | Published : Apr 13, 2024 1:07 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಲ್ಲಿಯವರೆಗೂ ಈ ಗ್ಯಾರಂಟಿ ಯಾವ ಯೋಜನೆಗಳು ಯಾವ ಕಾರಣಕ್ಕೂ ರದ್ದಾಗುವುದಿಲ್ಲ ಎಂದು ಶಾಸಕ ಬಸವರಾಜ ರಾಯರಡ್ಡಿ ಭರವಸೆ ನೀಡಿದ್ದಾರೆ.

ಯಲಬುರ್ಗಾ: ಪ್ರಧಾನಿ ನರೇಂದ್ರ ಮೋದಿ ಅವರ ೧೦ ವರ್ಷಗಳ ಆಡಳಿತದಲ್ಲಿ ದೇಶ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ತಾಲೂಕಿನ ಚಿಕ್ಕವಂಕಲಕುಂಟಾ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಿಜೆಪಿಯವರು ಜಾತಿ, ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ, ಅವರ ಸುಳ್ಳು ಮಾತಿಗೆ ದೇಶದ ಜನತೆ ಮರುಳಾಗುವುದಿಲ್ಲ. ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಿಯವರೆಗೆ ಮುಖ್ಯಮಂತ್ರಿಯಾಗಿ ಇರುತ್ತಾರೋ ಅಲ್ಲಿಯವರೆಗೂ ಈ ಗ್ಯಾರಂಟಿ ಯಾವ ಯೋಜನೆಗಳು ಯಾವ ಕಾರಣಕ್ಕೂ ರದ್ದಾಗುವುದಿಲ್ಲ. ಆದರೆ ಬಿಜೆಪಿಯವರು ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ, ಜತೆಗೆ ಗ್ಯಾರಂಟಿ ಯೋಜನೆಗಳನ್ನೂ ರದ್ದುಗೊಳಿಸುತ್ತಾರೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ. ರಾಜ್ಯದ ಜನತೆ ಅಪಪ್ರಚಾರಕ್ಕೆ ಕಿವಿಗೊಡದೆ ಕಾಂಗ್ರೆಸ್‌ಗೆ ಮತ ನೀಡಬೇಕು. ರಾಜ್ಯದಲ್ಲಿ ೨೦ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಇನ್ನು ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಹಾಗೂ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಯಂಕಣ್ಣ ಯರಾಶಿ ಮಾತನಾಡಿ, ಶಾಸಕ ಬಸವರಾಜ ರಾಯರಡ್ಡಿ ಅವರು ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯವನ್ನು ಪರಿಗಣಿಸಿ, ಕ್ಷೇತ್ರದ ಜನರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರಿಗೆ ಹೆಚ್ಚು ಮತಗಳನ್ನು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಹನುಮಂತಗೌಡ ಪಾಟೀಲ, ವೀರನಗೌಡ ಬಳೂಟಗಿ, ರಾಘವೇಂದ್ರ ಜೋಶಿ, ಬಿ.ಎಂ. ಶಿರೂರ, ಎ.ಜಿ. ಭಾವಿಮನಿ, ಅಪ್ಪಣ್ಣ ಜೋಶಿ, ಮಹೇಶ ಹಳ್ಳಿ, ಅಶೋಕ ತೋಟದ, ಗಂಗೂಬಾಯಿ, ಎಂ.ಎಫ್. ನದಾಫ್, ಶರಣಪ್ಪ ಉಪ್ಪಾರ, ರುದ್ರಪ್ಪ ಮರ್ಕಟ್, ಬಸವರಾಜ ಹಿರೇಮನಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಹುಲಗಪ್ಪ ಬಂಡಿವಡ್ಡರ್, ಮಲ್ಲು ಜಕ್ಕಲಿ, ಶರಣಗೌಡ ಪಾಟೀಲ, ಸುರೇಶ ದಾನಕೈ ಮತ್ತಿತರರು ಇದ್ದರು.

Share this article