ಕಾರವಾರ: ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉನ್ನತ ಸಾಧನೆಗಳನ್ನು ಮಾಡುವ ಗುರಿಗಳನ್ನು ಹೊಂದಬೇಕು. ಆ ಗುರಿ ಸಾಧನೆಯ ಹಾದಿಯಲ್ಲಿ ಯಾವುದೇ ಅಡೆ ತಡೆಗಳು ಬಂದರೂ ಎದೆಗುಂದದೇ ತಮ್ಮ ನಿರೀಕ್ಷಿತ ಗುರಿ ತಲುಪುವವರೆಗೂ ಪ್ರಯತ್ನ ಮುಂದುವರಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲೆಯಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸೇರಿದಂತೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಕೌಟುಂಬಿಕ ಆರ್ಥಿಕ ಸಮಸ್ಯೆಗಳಿದ್ದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಹಲವು ಯೋಜನೆಗಳ ಮೂಲಕ ಅಗತ್ಯ ನೆರವು ಒದಗಿಸಲು ಜಿಲ್ಲಾಡಳಿತದಿಂದ ಬದ್ಧವಾಗಿದೆ ಎಂದರು.
ಜಿಲ್ಲೆಯಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು. ದ್ವಿತೀಯ ಪಿಯುಸಿಯಲ್ಲಿ ಕಳೆದ ಬಾರಿಗಿಂತ ಶೇಕಡಾವಾರು ಉತ್ತೀರ್ಣ ಪ್ರಮಾಣ ಅಧಿಕವಾಗಿದೆ. ಜಿಲ್ಲೆಯ ಈ ಫಲಿತಾಂಶಕ್ಕೆ ಕಾರಣವಾದ ವಿದ್ಯಾರ್ಥಿಗಳು, ಪೋಷಕರು ಮತ್ತು ಅಧ್ಯಾಪಕ ವೃಂದಕ್ಕೆ ಆಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.ಎಲ್ಲ ವಿದ್ಯಾರ್ಥಿಗಳು ತಮ್ಮ ಈ ಸಾಧನೆಯನ್ನು ಮುಂದಿನ ಶೈಕ್ಷಣಿಕ ಜೀವನದಲ್ಲಿ ಮುಂದುವರಿಸುವಂತೆ ತಿಳಿಸಿದ ಅವರು, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುವ ಯಾವುದೇ ರೀತಿಯ ಸೋಷಿಯಲ್ ಮೀಡಿಯಾಗಳು ಮತ್ತು ಮೊಬೈಲ್ ವ್ಯಸನಕ್ಕೆ ಒಳಗಾಗದಂತೆ ಎಚ್ಚರ ವಹಿಸುವಂತೆ ತಿಳಿಸಿದರು.ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ₹10,000, ದ್ವಿತೀಯ ಸ್ಥಾನ ಪಡೆದವರಿಗೆ ₹ 5000 ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ₹2500 ನಗದು ಬಹುಮಾನ ವೈಯಕ್ತಿಕವಾಗಿ ನೀಡಿದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಎಲ್ಲ ವಿದ್ಯಾರ್ಥಿಗಳನ್ನು ಫಲ ತಾಂಬೂಲ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು.
ಕಲಾ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದ ಅಂಕಿತ ಹೆಗಡೆ, ದಿವ್ಯ ಗುಣೇಕರ, ಝೈಬಾ ಮಿರ್ಚಿವಾಲೆ, ಕಲಾ ವಿಭಾಗದ ಧ್ಯಾನ್ ರಾಮಚಂದ್ರ ಭಟ್, ಅಮಿತ್ ಹೆಗಡೆ, ರಮ್ಯಾ ಹೆಗಡೆ, ವಿಜ್ಞಾನ ವಿಭಾಗದ ಸಿಂಚನ ಗಣಪತಿ ಹೆಗಡೆ, ಶ್ರಾವ್ಯಾ ಭಟ್, ಯಶಸ್ವಿನಿ ಹೆಗಡೆ, ಸನ್ಮತಿ ಹೆಗಡೆ ಅವರನ್ನು ಸನ್ಮಾನಿಸಿದರು.ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸತೀಶ ನಾಯ್ಕ ಹಾಗೂ ವಿದ್ಯಾರ್ಥಿಗಳ ಪೋಷಕರು ಮತ್ತು ಕಾಲೇಜುಗಳ ಉಪನ್ಯಾಸಕರು ಇದ್ದರು.