ಗೋಕರ್ಣ: ದೇಶಕ್ಕೆ ಒಳ್ಳೆಯ ದಿನ ಬರಬೇಕಾದರೆ ದೇಶಕ್ಕೆ ಪುನರ್ಜನ್ಮದ ಅಗತ್ಯವಿದೆ. ಆಧುನಿಕ ಭಾರತದ ಜಾತಕದ ಪ್ರಕಾರ, ಸನಾತನ ಧರ್ಮದ ಪ್ರತೀಕವಾದ ಗುರು ಪ್ರತಿಕೂಲ ಅಥವಾ ಶತ್ರುಸ್ಥಾನದಲ್ಲಿದ್ದಾನೆ. ಇದರಿಂದ ಸನಾತನ ಧರ್ಮಕ್ಕೆ ಆಧುನಿಕ ಭಾರತದಲ್ಲಿ ಗೌರವ ಇಲ್ಲ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ವಿಶ್ಲೇಷಿಸಿದರು.
ಜ್ಯೋತಿಷದ ಮೂಲಕ ವ್ಯಕ್ತಿಗಳ ಜೀವನದಂತೆ ದೇಶದ ಅಥವಾ ವಿಶ್ವದ ವಿದ್ಯಮಾನಗಳನ್ನೂ ತಿಳಿದುಕೊಳ್ಳಲು ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ವಿವರಣೆ ನೀಡಿದ ಶ್ರೀಗಳು, ಜ್ಯೋತಿಷದ ಮೂಲಕ ಎಲ್ಲ ವ್ಯಕ್ತಿಗೆ, ವಿಷಯಗಳಿಗೆ ಮತ್ತು ಸಮಷ್ಟಿ ಮಾರ್ಗದರ್ಶನ ಸಾಧ್ಯ. ಇಡೀ ವಿಶ್ವದ ಆಗುಹೋಗುಗಳನ್ನು ಜ್ಯೋತಿಷದ ಮೂಲಕ ತಿಳಿದುಕೊಳ್ಳಲು ಅವಕಾಶವಿದೆ. ಆಧುನಿಕ ಭಾರತಕ್ಕೂ ಒಂದು ಜಾತಕವಿದೆ. ಆಧುನಿಕ ಭಾರತ ಆವಿರ್ಭಾವವಾದದ್ದು 1947ರ ಆ. 15ರಂದು. ಇದರ ಮೂಲಕ ದೇಶದ ಭವಿಷ್ಯವನ್ನು ತಿಳಿಯಲು ಸಾಧ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ವೃಷಭ ಲಗ್ನವಿದ್ದು, ದ್ವಿತೀಯದಲ್ಲಿ ಕುಜ ಮತ್ತು ಮಾಂದಿ, ತೃತೀಯದಲ್ಲಿ ರವಿ, ಚಂದ್ರ, ಬುಧ, ಶುಕ್ರ, ಶನಿ ಗ್ರಹಗಳಿವೆ. ಈ ಜಾತಕದ ಪ್ರಕಾರ ದೈವಾನುಕೂಲ ಇಲ್ಲ ಎಂದು ವಿಶ್ಲೇಷಿಸಿದರು.
ಯಾವ ಶುಭಗ್ರಹಗಳ ಅನುಕೂಲಗಳೂ ಇಲ್ಲ. ಲಗ್ನದಲ್ಲೂ ಯಾವುದೇ ಶುಭಗ್ರಹಗಳು ಉದಯವಿಲ್ಲ. ಲಗ್ನದಲ್ಲಿ ಇರುವುದು ರಾಹು. ಆದ್ದರಿಂದ ಪ್ರಧಾನ ವಿಷಯಗಳು ಅರ್ಧವಾಗುತ್ತವೆ. ರಾಹು ಅರ್ಧಸ್ವರೂಪದ ಪ್ರತೀಕ. ಆದ್ದರಿಂದ ದೇಶ ಕೂಡಾ ವಿಭಜನೆಯಾಯಿತು. ಪಾಪಗ್ರಹಗಳು ಮಾತ್ರ ಅನುಕೂಲ ಸ್ಥಾನದಲ್ಲಿವೆ. ಆದ್ದರಿಂದ ದೇಶಕ್ಕೆ ದುರವಸ್ಥೆ ಬಂತು ಎಂದರು.ಹವ್ಯಕರ ನಿಗೂಢ ಲಿಪಿ ತಿಗಳಾರಿಯ ಮಹತಿಯನ್ನು ಅರ್ಪಿತಾ ಹೆದ್ಲಿ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಆಡಳಿತ ಖಂಡದ ಸಂಯೋಜಕ ಹಾರಕೆರೆ ನಾರಾಯಣ ಭಟ್, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕಾರ್ಯದರ್ಶಿ ಜಿ.ಕೆ. ಮಧು, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ. ಪ್ರಸನ್ನ ಕುಮಾರ್ ಟಿ.ಜಿ., ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಮೋಹನ ಹರಿಹರ ಮತ್ತಿತರರು ಉಪಸ್ಥಿತರಿದ್ದರು.