ಕನ್ನಡಪ್ರಭ ವಾರ್ತೆ ಬೆಂಗಳೂರುರಾಜ್ಯದಲ್ಲಿ ಓಲಾ, ಉಬರ್ ಮತ್ತು ರ್‍ಯಾಪಿಡೋ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಕಾಲಾವಕಾಶವನ್ನು ಜೂ.15ರವರೆಗೆ ವಿಸ್ತರಿಸಿ ಹೈಕೋರ್ಟ್ ಆದೇಶಿಸಿದೆ.ಬೈಕ್ ಟ್ಯಾಕ್ಸಿ ಸೇವೆಯನ್ನು ರಾಜ್ಯದಲ್ಲಿ ಮುಂದುವರೆಸಲು ನಿರ್ದೇಶನ ಕೋರಿ ಉಬರ್, ಓಲಾ ಹಾಗೂ ರ್‍ಯಾಪಿಡೋ ಕಂಪನಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಂಪ್ರಸಾದ್ ಅವರ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಜ್ಯದಲ್ಲಿ ಸುಮಾರು ಆರು ಲಕ್ಷಕ್ಕೂ ಹೆಚ್ಚು ಮಂದಿ ಬೈಕ್ ಟ್ಯಾಕ್ಸಿಗಳ ಮೂಲಕ ಜೀವನ ರೂಪಿಸಿಕೊಂಡಿದ್ದಾರೆ. ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಸ್ಥಗಿತಗೊಳಿಸುವುದರಿಂದ ಅವರ ಜೀವನಾಧಾರಕ್ಕೆ ತೊಂದರೆಯಾಗಲಿದೆ. ದೇಶದ ಹಲವು ರಾಜ್ಯ ಸರ್ಕಾರಗಳು ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ನಿಯಮಗಳನ್ನು ರೂಪಿಸಿವೆ. ಆದರೆ, ರಾಜ್ಯದಲ್ಲಿ ಈವರೆಗೂ ಯಾವುದೇ ನಿಯಮ ರೂಪಿಸಿಲ್ಲ. ಹಾಗಾಗಿ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಗೊಳಿಸಲು ವಿಧಿಸಿರುವ ಆರು ವಾರಗಳ ಗಡುವು ವಿಸ್ತರಿಸಬೇಕು ಎಂದು ಕೋರಿದರು.ಈ ಮನವಿ ಪುರಸ್ಕರಿಸಿದ ನ್ಯಾಯಪೀಠ, ರಾಜ್ಯದಲ್ಲಿ ಓಲಾ, ಉಬರ್ ಮತ್ತು ರ್‍ಯಾಪಿಡೋ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಅವಧಿಯನ್ನು ಜೂ.15ರ ವರೆಗೆ ವಿಸ್ತರಿಸಿತು.ಮೋಟಾರು ವಾಹನ ಕಾಯ್ದೆಯ ನಿಯಮಗಳ ಪ್ರಕಾರ ಹಳದಿ ನೋಂದಣಿ ಫಲಕ (ಎಲ್ಲೋ ಬೋರ್ಡ್) ಹೊಂದಿರುವ ಸಾರಿಗೆ ವಾಹನಗಳಂತೆ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಉಬರ್, ಓಲಾ ಹಾಗೂ ರ್‍ಯಾಪಿಡೋ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಜತೆಗೆ, ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸಂಬಂಧ ಈವರೆಗೂ ಯಾವುದೇ ನಿಯಮಗಳನ್ನು ರೂಪಿಸದಿರುವುದನ್ನು ಪರಿಗಣಿಸಿದ್ದ ನ್ಯಾಯಾಲಯ, ಓಲಾ, ಉಬರ್ ಮತ್ತು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಸೇವೆಯನ್ನು ಸಂಬಂಧಿತ ಸಂಸ್ಥೆಗಳು ಆರು ವಾರಗಳಲ್ಲಿ ನಿರ್ಬಂಧಿಸಬೇಕು. ಮೂರು ತಿಂಗಳಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ನಿಯಮ ರೂಪಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ಏ.2ರಂದು ಆದೇಶಿಸಿತ್ತು. ಇದರಿಂದ ಮತ್ತೆ ಕೋರ್ಟ್ ಮೊರೆ ಹೋಗಿದ್ದ ಕಂಪನಿಗಳು, ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಲು ವಿಧಿಸಿರುವ ಗಡುವು ವಿಸ್ತರಣೆ ಮಾಡಲು ಕೋರಿದ್ದವು.