ಗೊಂದಲದ ಗೂಡಾದ ರಾಣಿಬೆನ್ನೂರು ನಗರಸಭೆ ಸಾಮಾನ್ಯ ಸಭೆ

KannadaprabhaNewsNetwork | Published : Apr 30, 2025 12:31 AM

ಸಾರಾಂಶ

ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ವಾಗ್ವಾದ ನಡೆಯುತ್ತಿರುವಾಗಲೇ ಆಡಳಿತ ಪಕ್ಷದ ಪುಟ್ಟಪ್ಪ ಮರಿಯಮ್ಮನವರ ಅವರು ರಾಮಪ್ಪ ಕರಡೆಣ್ಣನವರ ಸೇರಿದಂತೆ 11 ಸದಸ್ಯರ ಸ್ಥಾಯಿ ಸಮಿತಿ ರಚನೆ ಕುರಿತು ವಿಷಯವನ್ನು ಮಂಡಿಸಿದರು.

ರಾಣಿಬೆನ್ನೂರು: ಸಾಮಾನ್ಯ ಸಭೆ ನಡೆಸುವ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಲ್ಲದೆ ಒಂದು ಬಾರಿ ಮುಂದೂಡಿಕೆಯಾಗಿ ಕೊನೆಗೆ ಅದರ ಆದೇಶದಂತೆಯೇ ಮಂಗಳವಾರ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ಥಳೀಯ ನಗರಸಭೆಯ ಸಾಮಾನ್ಯ ಸಭೆ ವಿಪಕ್ಷ ಸದಸ್ಯರ ಗದ್ದಲದ ಕಾರಣ ಕೇವಲ ಅರ್ಧ ಗಂಟೆಯಲ್ಲಿ ಮುಕ್ತಾಯಗೊಂಡಿತು. ಅಜೆಂಡಾದಲ್ಲಿ ಕಳೆದ ಬಾರಿ ಮುಂದೂಡಿಕೆಯಾಗಿದ್ದ ಸಭೆಯಲ್ಲಿನ 13 ವಿಷಯಗಳಿಗೆ ಸೀಮಿತವಾಗಿ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯ ಪ್ರಾರಂಭದಲ್ಲಿಯೇ ವಿಪಕ್ಷ ಕೆಪಿಜೆಪಿ ಸದಸ್ಯ(ಕರ್ನಾಟಕ ಪ್ರಜಾವಂತರ ಜನತಾ ಪಕ್ಷ) ಪ್ರಕಾಶ ಬುರಡಿಕಟ್ಟಿ ಅಜೆಂಡಾದಲ್ಲಿನ ಮೊದಲ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಯುಕ್ತ ಎಫ್.ಐ. ಇಂಗಳಗಿ ಹಾಗೂ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅವರಿಗೆ ಅರ್ಜಿ ಸಲ್ಲಿಸಲು ಮುಂದಾದರು.

ಆದರೆ ಅರ್ಜಿ ಸ್ವೀಕರಿಸಲು ನಿರಾಕರಿಸಿದ ಆಯುಕ್ತರು ಹಾಗೂ ಅಧ್ಯಕ್ಷರು, ಕಚೇರಿಯ ಆವಕ- ಜಾವಕದಲ್ಲಿ ಅರ್ಜಿ ಸಲ್ಲಿಸುವಂತೆ ಸದಸ್ಯರಿಗೆ ಸೂಚಿಸಿದರು. ಆದರೆ ಪ್ರಕಾಶ ಬುರಡಿಕಟ್ಟಿ ಸಭೆಯಲ್ಲಿಯೇ ಅರ್ಜಿ ಸ್ವೀಕರಿಸುವಂತೆ ಪಟ್ಟು ಹಿಡಿದರು. ಈ ವಿಚಾರವಾಗಿ ಆಡಳಿತ ಪಕ್ಷದ ಪುಟ್ಟಪ್ಪ ಮರಿಯಮ್ಮನವರ, ನಿಂಗಪ್ಪ ಕೋಡಿಹಳ್ಳಿ ಹಾಗೂ ಪ್ರಕಾಶ ಬುರಡಿಕಟ್ಟಿ ನಡುವೆ ಮಾತಿನ ಚಕಮಕಿ ನಡೆಯಿತು. ಹೀಗಾಗಿ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಗಿ ಯಾವ ವಿಷಯದ ಕುರಿತು ಚರ್ಚೆ ನಡೆಯುತ್ತಿದೆ ಎಂಬುದೇ ತಿಳಿಯದಂತಾಯಿತು. ತರಾತುರಿಯಲ್ಲಿ ಸ್ಥಾಯಿ ಸಮಿತಿ ರಚನೆ: ಸಭೆಯಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರ ವಾಗ್ವಾದ ನಡೆಯುತ್ತಿರುವಾಗಲೇ ಆಡಳಿತ ಪಕ್ಷದ ಪುಟ್ಟಪ್ಪ ಮರಿಯಮ್ಮನವರ ಅವರು ರಾಮಪ್ಪ ಕರಡೆಣ್ಣನವರ ಸೇರಿದಂತೆ 11 ಸದಸ್ಯರ ಸ್ಥಾಯಿ ಸಮಿತಿ ರಚನೆ ಕುರಿತು ವಿಷಯವನ್ನು ಮಂಡಿಸಿದರು. ವಿಪಕ್ಷದ ಪ್ರಕಾಶ ಬುರಡಿಕಟ್ಟಿ ಈ ವಿಷಯಕ್ಕೆ ನನ್ನ ಉಪ ಸೂಚನೆಯಿದೆ ಎಂದು ಜೋರಾಗಿ ಹೇಳುತ್ತಿದ್ದರು. ಪ್ರಕಾಶ ಬೆಂಬಲಿಸಿ ಬಿಜೆಪಿಯ ಪ್ರಭಾವತಿ ತಿಳವಳ್ಳಿ, ರೂಪಾ ಚಿನ್ನಿಕಟ್ಟಿ ಮಾತನಾಡಿದರು.

ಆದರೂ ಆಡಳಿತ ಪಕ್ಷದ ಸದಸ್ಯ ಶಶಿಧರ ಬಸೇನಾಯ್ಕರ ಅನುಮೋದನೆ ಸೂಚಿಸಿದ್ದರಿಂದ ಸ್ಥಾಯಿ ಸಮಿತಿ ರಚನೆಯನ್ನು ಪ್ರಕಟಿಸಲಾಯಿತು. ಇದರಿಂದ ಕೆರಳಿದ ಪ್ರಕಾಶ ಬುರಡಿಕಟ್ಟಿ, ನಿಮಗೆ ತಿಳಿದ ರೀತಿ ಸಭೆ ನಡೆಸಿದರೆ ದಬ್ಬಾಳಿಕೆ ಮಾಡಿದಂತಾಗುತ್ತದೆ ಎಂದು ಆರೋಪಿಸಿದರು. ಕೌನ್ಸಿಲ್ ಸೆಕ್ರೆಟರಿ ಆಗಿ ಸಭೆ ನಡೆಸುವ ತಿಳಿವಳಿಕೆ ಇಲ್ಲವೇ? ಎಂದು ನಗರಸಭೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಡಿಢೀರ್ ಮುಕ್ತಾಯಗೊಂಡ ಸಭೆ: ಸ್ಥಾಯಿ ಸಮಿತಿ ರಚನೆ ಪ್ರಕಟಣೆಯಾಗುತ್ತಿದ್ದಂತೆಯೇ ಸಭೆ ಮುಕ್ತಾಯಗೊಂಡಿತು ಎಂದು ಘೋಷಿಸಲಾಯಿತು. ಅಧ್ಯಕ್ಷರಾದ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ಆಯುಕ್ತ ಎಫ್.ಐ. ಇಂಗಳಗಿ ವೇದಿಕೆಯಲ್ಲಿದ್ದರು.

ಸಭೆ ಆರಂಭಿಸುವ ಪೂರ್ವದಲ್ಲಿ ಇತ್ತೀಚೆಗೆ ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರ ಕೃತ್ಯಕ್ಕೆ ಬಲಿಯಾದ ಪ್ರವಾಸಿಗರಿಗೆ ಹಾಗೂ ನಗರಸಭೆ ಮಾಜಿ ಸದಸ್ಯೆ ಸಾವಕ್ಕ ಎಂಟರೊಟ್ಟಿ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.

Share this article