ಹೂವಿನಹಡಗಲಿ: ಪಟ್ಟಣದಲ್ಲಿ ಸೋಮವಾರ ಸುರಿದ ಭಾರಿ ಪ್ರಮಾಣದ ಮಳೆಗೆ ಇಲ್ಲಿನ ಸಿವಿಲ್ ನ್ಯಾಯಾಲಯದ ಆವರಣ ಜಲಾವೃತ್ತವಾಗಿತ್ತು. ಮಳೆ ನೀರು ಹರಿದು ಹೋಗಲು ದಾರಿ ಇಲ್ಲದಂತಾಗಿದ್ದು, ನ್ಯಾಯಾಲಯಕ್ಕೆ ಬರುವ ವಕೀಲರು ಮತ್ತು ಕಕ್ಷಿದಾರರು ನೀರಿನಲ್ಲೇ ನಡೆದು ಹೋದರು.
ಪುರಸಭೆ ಸಿಬ್ಬಂದಿ ಹರಸಾಹಸ ಪಟ್ಟರೂ ನೀರು ಮಾತ್ರ ಹೊರಗೆ ಹೋಗಲಿಲ್ಲ. ಕೊನೆಗೆ ಸಕ್ಕಿಂಗ್ ಮಷನ್ ಮೂಲಕ ಆವರಣದಲ್ಲಿರುವ ನೀರನ್ನು ಹೊರಗೆ ಹಾಕಲಾಯಿತು.ಸೋರುತಿದೆ ಹಳೆ ತಾಲೂಕು ಕಚೇರಿ
ಪಟ್ಟಣದಲ್ಲಿರುವ ಹಳೆ ತಾಲೂಕು ಕಚೇರಿಯಲ್ಲಿ, ಗ್ರಾಮ ಲೆಕ್ಕಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ನಿರಂತರ ಸುರಿದ ಮಳೆಗೆ ಇಡೀ ಕಟ್ಟಡ ಸಂಪೂರ್ಣ ಸೋರುತ್ತಿದೆ. ಕಡತಗಳನ್ನು ಸಂರಕ್ಷಣೆ ಮಾಡಲು ಗ್ರಾಮ ಲೆಕ್ಕಾಧಿಕಾರಿಗಳು ಪರದಾಡುತ್ತಿದ್ದಾರೆ. ಕಚೇರಿಯಲ್ಲಿ ಕುಳಿತುಕೊಳ್ಳಲು ಜಾಗವೇ ಇಲ್ಲದಂತಾಗಿತ್ತು. ಟೇಬಲ್, ಆಸನಗಳು ಮತ್ತು ಕಡತಗಳನ್ನು ಸಂಗ್ರಹಿಸಿಟ್ಟಿದ್ದ ಕಪಾಟುಗಳ ಮೇಲೆ ಮಳೆ ನೀರು ನಿಂತಿತ್ತು. ಕೊಡೆ ಹಿಡಿದುಕೊಂಡು ಕೆಲಸ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.ಹಡಗಲಿಯಲ್ಲಿ 43.8 ಮಿ.ಮೀ ಮಳೆ
ತಾಲೂಕಿನಲ್ಲಿ ಸೋಮವಾರ ಬೆಳಗ್ಗಿನಿಂದಲೇ ಮಳೆ ಶುರುವಾಗಿತ್ತು. ಹೂವಿನಹಡಗಲಿ ಹೋಬಳಿಯಲ್ಲಿ 43.8 ಮಿ.ಮೀ, ಹಿರೇಹಡಗಲಿ ಹೋಬಳಿಯಲ್ಲಿ 18 ಮಿ.ಮೀ ಸೇರಿದಂತೆ ಒಟ್ಟಾರೆ 30.7 ಮಿ.ಮೀ ಮಳೆ ದಾಖಲಾಗಿತ್ತು.ಹಾನಿ ಪ್ರದೇಶಕ್ಕೆ ತಹಸೀಲ್ದಾರ್ ಭೇಟಿ
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮೆಕ್ಕೆಜೋಳ, ಭತ್ತ ಮತ್ತು ಈರುಳ್ಳಿ ಬೆಳೆ ಹಾನಿ ಮುಂದುವರೆದಿದೆ. ತಾಲೂಕಿನ ಹರವಿ, ಕುರುವತ್ತಿ, ಮೈಲಾರ, ಬನ್ನಿಮಟ್ಟಿ, ಬ್ಯಾಲಹುಣ್ಸಿ, ಮಕರಬ್ಬಿ, ಹಕ್ಕಂಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಮಳೆಯಿಂದ ಹಾನಿಯಾಗಿರುವ ಪ್ರದೇಶಕ್ಕೆ ತಹಸೀಲ್ದಾರ್ ಜಿ.ಸಂತೋಷಕುಮಾರ, ಸಹಾಯಕ ಕೃಷಿ ನಿರ್ದೇಶಕ ಮಹಮದ್ ಅಶ್ರಫ್, ಕೃಷಿ ಅಧಿಕಾರಿ ಕಿರಣ್‌ಕುಮಾರ, ಕೊಟ್ರೇಶ ಮತ್ತು ಗ್ರಾಮ ಆಡಳಿತಾಧಿಕಾರಿಗಳು ಭೇಟಿ ನೀಡಿ, ರೈತರಿಂದ ಹಾನಿಯಾಗಿರುವ ಬೆಳೆ ಸಮೀಕ್ಷೆಗೆ ಮುಂದಾಗಿದ್ದಾರೆ.16 ಮನೆಗಳು ಹಾನಿ
ಮಳೆರಾಯನ ಅರ್ಭಟಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ನವಲಿ, ಮೊದಲಗಟ್ಟ, ಸೋವೇನಹಳ್ಳಿ, ಬ್ಯಾಲಹುಣ್ಸಿ ಸೇರಿದಂತೆ ಇತರೆ ಕಡೆಗಳಲ್ಲಿ ಒಟ್ಟು ಒಂದೇ ದಿನ 16 ಮನೆಗಳಿಗೆ ಹಾನಿ ಉಂಟಾಗಿದೆ. ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ತಹಸೀಲ್ದಾರ್ ಸಂತೋಷಕುಮಾರ್ ಮಾಹಿತಿ ನೀಡಿದ್ದಾರೆ.