ಬಿರುಕು ಬಿಟ್ಟ ಹೊಳೆಹೊನ್ನೂರು ಬೈಪಾಸ್ ರಸ್ತೆ

KannadaprabhaNewsNetwork |  
Published : Jun 19, 2025, 12:35 AM IST
ಎಚ್ ಎಚ್ ಆರ್ ಪಿ 1. ಬಿರುಕು ಬಿಟ್ಟಿರುವ ಬೈಪಾಸ್ ರಸ್ತೆ. | Kannada Prabha

ಸಾರಾಂಶ

ಪಟ್ಟಣದ ಬೈಪಾಸ್ ರಸ್ತೆ ಹಾಗೂ ಭದ್ರಾನದಿ ನೂತನ ಸೇತುವೆ ಹೊಳೆಹೊನ್ನೂರು ಭಾಗದ ಜನರ ಹಲವು ವರ್ಷಗಳ ಕನಸು. ಈ ಕನಸು ನನಸಾಗಿ ರಸ್ತೆಯಲ್ಲಿ ಪ್ರಾಯೋಗಿಕವಾಗಿ ವಾಹನಗಳ ಸಂಚಾರ ಆರಂಭ ಆದ ನಾಲ್ಕೇ ದಿನದಲ್ಲಿ ಅಪಘಾತ ಸಂಭವಿಸಿ ಇಬ್ಬರು ಪ್ರಾಣ ಕಳೆದುಕೊಂಡರು. ಇದರಿಂದ ಕೋಪಗೊಂಡ ಸುತ್ತಮುತ್ತಲ ಗ್ರಾಮಸ್ಥರು ಪ್ರಬಲವಾಗಿ ಪ್ರತಿಭಟಿಸಿದರು. ರಸ್ತೆಯ ಎರಡೂ ಬದಿಗಳಲ್ಲಿ ಜೆಸಿಪಿಯಿಂದ ಆಳವಾದ ಕಾಲುವೆ ತೆಗಿಸಿ ಸಂಚಾರವನ್ನು ತಡೆದರು. ನಂತರ ಸಂಸದರು ಅಂಡರ್ ಪಾಸ್ ನಿರ್ಮಿಸಿಕೊಡುವ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು. ಇದೆಲ್ಲಾ ಕೊನೆಯಾಗಿ ಕಳೆದ ತಿಂಗಳು ಬೈಪಾಸ್ ರಸ್ತೆಯನ್ನು ಉದ್ಘಾಟನೆ ಮಾಡಲಾಯಿತು. ಹೊಳಹೊನ್ನೂರು ಭಾಗದ ಜನರ ಕನಸಿಗೆ ರೆಕ್ಕೆಪುಕ್ಕ ಬಂದು ಹಾರಾಡುವಷ್ಟರಲ್ಲಿ ಮತ್ತೊಂದು ಬಲವಾದ ಪೆಟ್ಟು ಬಿದ್ದಿದೆ.

ಅರಹತೊಳಲು ಕೆ.ರಂಗನಾಥ

ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು

ಪಟ್ಟಣದ ಬೈಪಾಸ್ ರಸ್ತೆ ಹಾಗೂ ಭದ್ರಾನದಿ ನೂತನ ಸೇತುವೆ ಹೊಳೆಹೊನ್ನೂರು ಭಾಗದ ಜನರ ಹಲವು ವರ್ಷಗಳ ಕನಸು. ಈ ಕನಸು ನನಸಾಗಿ ರಸ್ತೆಯಲ್ಲಿ ಪ್ರಾಯೋಗಿಕವಾಗಿ ವಾಹನಗಳ ಸಂಚಾರ ಆರಂಭ ಆದ ನಾಲ್ಕೇ ದಿನದಲ್ಲಿ ಅಪಘಾತ ಸಂಭವಿಸಿ ಇಬ್ಬರು ಪ್ರಾಣ ಕಳೆದುಕೊಂಡರು. ಇದರಿಂದ ಕೋಪಗೊಂಡ ಸುತ್ತಮುತ್ತಲ ಗ್ರಾಮಸ್ಥರು ಪ್ರಬಲವಾಗಿ ಪ್ರತಿಭಟಿಸಿದರು. ರಸ್ತೆಯ ಎರಡೂ ಬದಿಗಳಲ್ಲಿ ಜೆಸಿಪಿಯಿಂದ ಆಳವಾದ ಕಾಲುವೆ ತೆಗಿಸಿ ಸಂಚಾರವನ್ನು ತಡೆದರು. ನಂತರ ಸಂಸದರು ಅಂಡರ್ ಪಾಸ್ ನಿರ್ಮಿಸಿಕೊಡುವ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು. ಇದೆಲ್ಲಾ ಕೊನೆಯಾಗಿ ಕಳೆದ ತಿಂಗಳು ಬೈಪಾಸ್ ರಸ್ತೆಯನ್ನು ಉದ್ಘಾಟನೆ ಮಾಡಲಾಯಿತು. ಹೊಳಹೊನ್ನೂರು ಭಾಗದ ಜನರ ಕನಸಿಗೆ ರೆಕ್ಕೆಪುಕ್ಕ ಬಂದು ಹಾರಾಡುವಷ್ಟರಲ್ಲಿ ಮತ್ತೊಂದು ಬಲವಾದ ಪೆಟ್ಟು ಬಿದ್ದಿದೆ.ಸುಮಾರು ಆರು ವರ್ಷಗಳ ಹಿಂದೆ ಆರಂಭವಾದ ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ತಿಂಗಳು ಮುಕ್ತಾಯವಾಗಿದ್ದು, ಹೊಳೆಹೊನ್ನೂರು ಸಮೀಪ ಚಕ್ಕೂಡ್ಲಿಯಿಂದ ಹೊಸಕೊಪ್ಪದವರೆಗಿನ ಬೈಪಾಸ್ ರಸ್ತೆ ಹಾಗೂ ನೂತನ ಭದ್ರಾನದಿ ಸೇತುವೆಗೆ ಸುಮಾರು 87 ಕೋಟಿ ರು. ವೆಚ್ಚ ಮಾಡಿ ನಿರ್ಮಾಣ ಮಾಡಿದ್ದಾರೆ. ಇಷ್ಟೆಲ್ಲಾ ಖರ್ಚು ಮಾಡಿ ನಿರ್ಮಿಸಿರುವ ಬೈಪಾಸ್ ರಸ್ತೆ ಬಿರುಕು ಬಿಟ್ಟಿದ್ದು, ಈ ಭಾಗದ ಜನರಲ್ಲಿ ಆತಂಕ ಮೂಡಿಸಿದೆ. ಜೊತೆಗೆ ಅಧಿಕಾರಿಗಳು ಲಂಚ ಪಡೆದು ಅವೈಜ್ಞಾನಿಕ ಕಾಮಗಾರಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ.ಉದ್ಘಾಟನೆಯಾಗಿ ತಿಂಗಳೂ ಕಳೆದಿಲ್ಲ:ಪಟ್ಟಣದ ಸಮೀಪದ ಚಕ್ಕೂಡ್ಲಿಯಿಂದ ಹೊಸಕೊಪ್ಪದ ವರೆಗಿನ ಬೈಪಾಸ್ ರಸ್ತೆ ಉದ್ಘಾಟನೆಯಾಗಿ ತಿಂಗಳೂ ಕಳೆದಿಲ್ಲ. ಕಳೆದ ಮೇ 21 ರಂದು ಸಂಸದ ಬಿ.ವೈ.ರಾಘವೇದ್ರ ಮತ್ತು ಬಹಳಷ್ಟು ರಾಜಕೀಯ ನಾಯಕರು ಅದ್ಧೂರಿ ಸಮಾರಂಭ ಮಾಡಿ ಬೈಪಾಸ್ ರಸ್ತೆ ಹಾಗೂ ಭದ್ರಾನದಿ ನೂತನ ಸೇತುವೆಯನ್ನು ಉದ್ಘಾಟನೆ ಮಾಡಿದ್ದರು. ಆದರೆ ತಿಂಗಳು ಕಳೆಯುವುದರಲ್ಲಿ ಬೈಪಾಸ್ ರಸ್ತೆ ಬಿರುಕು ಬಿಟ್ಟಿದೆ.ಅವೈಜ್ಞಾನಿಕ ಕಾಮಗಾರಿ:ಪಟ್ಟಣದ ಸಮೀಪ ನಿರ್ಮಾಣವಾಗಿರುವ ಬೈಪಾಸ್ ರಸ್ತೆ ಕಾಮಗಾರಿಯು ಕಳಪೆ ಮಟ್ಟದ್ದಾಗಿದ್ದು, ಅವೈಜ್ಞಾನಿಕವಾಗಿದೆ ಎಂಬುದು ಜನರ ಅಭಿಪ್ರಾಯ. ಚಿಕ್ಕೂಡ್ಲಿಯಿಂದ ಹೊಸಕೊಪ್ಪದ ನಡುವೆ ಭದ್ರಾನದಿ ಹಾದು ಹೋಗಿದೆ. ಸೇತುವೆಯ ಹಿಂದೆ ಮತ್ತು ಮುಂದಿನ ರಸ್ತೆ ಮಾರ್ಗದಲ್ಲಿ ಬಹಳ ಆಳವಾದ ತಗ್ಗು ಪ್ರದೇಶ ಇತ್ತು. ಸೇತುವೆಗೆ ಸಮನಾಗಿ ರಸ್ತೆ ನಿರ್ಮಾಣ ಮಾಡಬೇಕಾದರೆ ಸುಮಾರು 50 ರಿಂದ 60 ಅಡಿಗಳಷ್ಟು ಆಳದ ಮಾರ್ಗಕ್ಕೆ ಮಣ್ಣು ತುಂಬಿಕೊಂಡು ರಸ್ತೆ ನಿರ್ಮಿಸಲಾಗಿದೆ. ಆದರೆ ಇಷ್ಟು ಆಳ ಮಣ್ಣು ತುಂಬಿದಾಗ ಅದು ಬಿಗಿಯಾಗುವುದಿಲ್ಲ. ಬದಲಾಗಿ ರಸ್ತೆಯ ಎರಡೂ ಬದಿಯಲ್ಲಿ ಕಾಂಕ್ರೀಟ್ ತಡೆಗೋಡೆಗಳನ್ನು ನಿರ್ಮಿಸಿಕೊಳ್ಳಬೇಕಿತ್ತು. ಹಾಗೆ ಮಾಡದೆ ಮಣ್ಣಿನಲ್ಲಿ ಸಮತಟ್ಟು ಮಾಡಿಕೊಂಡು ಎಂ ಸ್ಯಾಂಡ್, ಜಲ್ಲಿ ಮಿಶ್ರಣ ಹಾಕಿ ರಸ್ತೆಯ ಕೆಲಸ ಮಾಡಲಾಗಿದೆ. ಕಳೆದ 15 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆ ನಿರ್ಮಾಣಕ್ಕೆ ಬಳಸಿರುವ ಮಣ್ಣು ನೆನೆದು ಕುಸಿಯಲಾರಂಭಿಸಿದೆ. ಆ ಕಾರಣದಿಂದಲೇ ನೂತನ ರಸ್ತೆ 5 ರಿಂದ 6 ಅಡಿಗಳಷ್ಟು ಆಳದವರೆಗೆ ಬಿರುಕು ಬಿಟ್ಟಿದೆ.

ಕೂಡಲೇ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಲಾಗುವುದು. ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಯಾವ ಕಾರಣಕ್ಕೆ ರಸ್ತೆ ಬಿರುಕು ಬಿಟ್ಟಿದೆ, ತಾಂತ್ರಿಕ ಕಾರಣಗಳು ಏನು ಎಂಬ ಮಾಹಿತಿ ಪಡೆದು ಸಮಸ್ಯೆಯನ್ನು ಬಗೆಹರಿಸಲಾಗುವುದು.

- ಬಿ.ವೈ.ರಾಘವೇಂದ್ರ. ಸಂಸದರು ಶಿವಮೊಗ್ಗ.

ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಉದ್ಘಾಟನೆಯಾಗಿ ತಿಂಗಳು ಕಳೆಯುವುದರಲ್ಲೇ ಬಿರುಕು ಬಂದಿದೆ ಎಂದರೆ ಮುಂದೆ ಗತಿ ಏನು. ಇದರಿಂದ ಪ್ರಾಣ ಕಳೆದುಕೊಳ್ಳುವುದು ಸಾಮಾನ್ಯ ಜನರು. ರಸ್ತೆ ಸುಮಾರು ಒಂದು ಕಿಲೋಮೀಟರ್‌ಗೂ ಹೆಚ್ಚು ಉದ್ದ ರಸ್ತೆ ಬಿರುಕು ಬಿಟ್ಟಿದೆ. 5 ರಿಂದ 6 ಅಡಿಗಳಷ್ಟು ಆಳದ ವರೆಗೆ ಬಿರುಕು ಬಿದ್ದಿದ್ದು ಅಪಾಯದ ಮುನ್ಸೂಚನೆ ನೀಡುತ್ತಿದೆ.

- ಎ.ನಾಗೇಶ್. ಸ್ಥಳೀಯ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ