ಹಾವೇರಿ: ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಿಂದ ಆಗುತ್ತಿರುವ ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ವಿಬಿ-ಜಿ ರಾಮ್-ಜಿ ಯೋಜನೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಗ್ರಾಮಗಳನ್ನು ಸುರಾಜ್ಯ ಮಾಡಲು ಎಲ್ಲರೂ ಶ್ರಮಿಸೋಣ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಸ್ಥಳೀಯ ಹುಕ್ಕೇರಿಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿಬಿ-ಜಿ ರಾಮ್-ಜಿ ಜನ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮೊದಲು ಕೂಲಿಗಾಗಿ ಕಾಳು ಯೋಜನೆ ಇತ್ತು. ಆ ಯೋಜನೆಯಲ್ಲಿ ಕೂಲಿ ಮಾಡದೇ ಕೂಲಿ ಪಡೆಯಲಾಗುತ್ತಿತ್ತು. ಆ ಮೇಲೆ ರೋಜಗಾರ ಯೋಜನೆ, ಬಳಿಕ ಜವಾಹರ ರೋಜಗಾರ ಅಂದರು. 2004ರಲ್ಲಿ ಚುನಾವಣೆ ಸಂದರ್ಭದಲ್ಲಿ ಮಹಾತ್ಮಾ ಗಾಂಧಿ ಹೆಸರು ಇಟ್ಟರು. ಸುಮಾರು 25 ವರ್ಷ ಈಗಿನ ನರೇಗಾ ಇದ್ದರೂ ಸಹ ಗಾಮೀಣ ಪ್ರದೇಶದ ಅಭಿವೃದ್ಧಿ ಆಗಲಿಲ್ಲ. ನಿರುದ್ಯೋಗವೂ ಕಡಿಮೆಯಾಗಿಲ್ಲ. ಹೀಗಾಗಿ ಮೋದಿ ಅವರು ಈ ಯೋಜನೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ್ದಾರೆ ಎಂದರು.ಭ್ರಷ್ಟಾಚಾರ ನಿಯಂತ್ರಣ: ಈ ಯೋಜನೆ ಜಾರಿಗೆ ತಂದಾಗ 125 ರು. ಕೂಲಿ ಕೊಡುತ್ತಿದ್ದರು. ಆಗ ದೇಶದ ಬಜೆಟ್ 30 ಸಾವಿರ ಕೋಟಿ ಇತ್ತು. ಈಗ 1.30 ಲಕ್ಷ ಕೋಟಿ ಆಗಿದೆ. ಮೋದಿ ಅವರು ಬಂದ ಮೇಲೆ ಈ ಯೋಜನೆಗೆ ಸರಾಸರಿ ಪ್ರತಿ ವರ್ಷ 1 ಲಕ್ಷ ಕೋಟಿ ರು. ಕೊಡುತ್ತಿದ್ದಾರೆ. ಊರಿನ ಆಸ್ತಿ ನಿರ್ಮಾಣ ಆಗಬೇಕು. ಜನರಿಗೆ ಉದ್ಯೋಗ ಸಿಗಬೇಕು ಎನ್ನುವ ಗುರಿ ಇತ್ತು. ಆ ಗುರಿ ಮುಟ್ಟಲು ಆಗಲಿಲ್ಲ. ಹೀಗಾಗಿ ಇದರಲ್ಲಿ ಇರುವ ಭ್ರಷ್ಟಾಚಾರ ತಡೆಯಲು ಪ್ರಯತ್ನ ಮಾಡಿದ್ದಾರೆ ಎಂದರು.ಬಿಜೆಪಿಯ ಪ್ರತಿ ಕಾರ್ಯಕರ್ತ ಈ ಯೋಜನೆಯ ವಿಚಾರಗಳನ್ನು ಜನರಿಗೆ ಮನವರಿಕೆ ಮಾಡುವ ಕೆಲಸ ಮಾಡಬೇಕು. ಆಗ ಮಾತ್ರ ಗ್ರಾಮ ಸ್ವರಾಜ್ಯ ಮಾಡಲು ಸಾಧ್ಯ. ಗಾಂಧೀಜಿ ಬೇರೆಯಲ್ಲ, ಶ್ರೀರಾಮ ಬೇರೆಯಲ್ಲ. ಗಾಂಧೀಜಿಯ ಆತ್ಮದಲ್ಲಿ ರಾಮ ಇದ್ದಾರೆ. ಗ್ರಾಮ ರಾಜ್ಯ ರಾಮ ರಾಜ್ಯ ಎರಡೂ ಒಂದೇ. ಭಾರತದಲ್ಲಿ ರಾಮ ರಾಜ್ಯವನ್ನು ಮಾಡುವ ಸಂಕಲ್ಪವನ್ನು ಮೋದಿಯವರು ಮಾಡಿದ್ದಾರೆ ಎಂದರು.ಚೆಸ್ ಬೋರ್ಡ್ ಆಟ: ಕಾಂಗ್ರೆಸ್‌ನವರು ಅಧಿಕಾರದ ರಾಜಕಾರಣ ಮಾಡುತಿದ್ದಾರೆ. ಅವರು ಚೆಸ್ ಬೋರ್ಡ್ ಆಟ ಆಡುತ್ತಿದ್ದಾರೆ. ಅವರು ಅಧಿಕಾರದ ಆಟ ಆಡಲಿ ನಾವು ಮೈದಾನಕ್ಕೆ ಇಳಿದು ಜನರ ರಾಜಕಾರಣ ಮಾಡೋಣ. ಕೇಂದ್ರ ಸರ್ಕಾರ ರೈತರಿಗೆ, ಬಡವರಿಗೆ ಮಹಿಳೆಯರಿಗೆ ಮಾಡಿರುವ ಯೋಜನೆಗಳನ್ನು ಮನವರಿಕೆ ಮಾಡೋಣ. ಎಲ್ಲ ವಿದ್ಯಾರ್ಥಿಗಳಿಗೆ ಪದವಿವರೆಗೂ ಉಚಿತ ಶಿಕ್ಷಣ ನೀಡುವ ಯೋಜನೆ ನಾವು ಮಾಡಿದ್ದೇವು. ನಾವು ಜನರ ಸಲುವಾಗಿ ಮುಂಬರುವ ಗ್ರಾಮ, ತಾಲೂಕು, ಜಿಪಂ ಚುನಾವಣೆಗಳನ್ನು ಗೆಲ್ಲುವ ಮೂಲಕ ಜನರ ಸೇವೆ ಮಾಡೋಣ ಎಂದರು.ರಾಜ್ಯ ಸಾಲದ ಸುಳಿಗೆ: ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಸಿಎಂ ಆಗಿ ಅಧಿಕಾರ ಬಿಟ್ಟು ಹೋದಾಗ 25 ಸಾವಿರ ಕೋಟಿ ಸಾಲ ಮಾಡಿದ್ದರು. ಅವರು ಮಾಡಿದ ಸಾಲವನ್ನು ನಾನು ತೀರಿಸಿದ್ದೇನೆ. ಪ್ರತಿ ವರ್ಷ ನಾಲ್ಕು ಲಕ್ಷ ಕೋಟಿ ಬಜೆಟ್ ಮಂಡನೆ ಮಾಡುತ್ತೀರಿ, ಅದರಲ್ಲಿ 30 ಸಾವಿರ ಕೋಟಿ ಸಾಲ ತೀರಿಸಲು ಆಗುವುದಿಲ್ಲವೇ, ಮುಂದೆ ಬರುವವರಿಗೆ ಸಾಲದ ಹೊರೆ ಹೊರಿಸಿ ಈ ರಾಜ್ಯವನ್ನು ಸಾಲದ ಸುಳಿಯಲ್ಲಿ ಸಿಲುಕಿಸಿ ಹೋಗುತ್ತಾರೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.