ಬೆಳೆ ವಿಮೆ ಮಾಡಿಸಲು ಜಾಗೃತಿ ಮೂಡಿಸಿ

KannadaprabhaNewsNetwork |  
Published : Nov 19, 2025, 01:15 AM IST
ಪೋಟೊ18.7: ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ (ಪಿ.ಎಂ.ಎಫ್.ಬಿ.ವೈ) ಹಿಂಗಾರು, ಬೇಸಿಗೆ ಹಂಗಾಮಿನ ನೋದಾವಣೆ ಕುರಿತಂತೆ ಕೃಷಿ ಇಲಾಖೆಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಬೆಳೆವಿಮಾ ಮಾಹಿತಿ ಪ್ರತಿಯನ್ನು ಬಿಡುಗಡೆ ಮಾಡಿದರು. | Kannada Prabha

ಸಾರಾಂಶ

ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು.

ಕೊಪ್ಪಳ: ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ಅರ್ಹ ಮತ್ತು ಆಸಕ್ತ ರೈತರು ಬೆಳೆ ವಿಮೆ ಮಾಡಿಸಲು ಅಗತ್ಯ ಪ್ರಚಾರ ಕೈಗೊಂಡು ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ (ಪಿ.ಎಂ.ಎಫ್.ಬಿ.ವೈ) ಹಿಂಗಾರು, ಬೇಸಿಗೆ ಹಂಗಾಮಿನ ನೋದಾವಣೆ ಕುರಿತಂತೆ ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

2025-26ರ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಅಧಿಸೂಚಿತ ಬೆಳೆಗಳಿಗೆ ವಿಮಾ ರಕ್ಷಣೆ ನೀಡುವುದು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಮುಖ್ಯ ಉದ್ದೇಶವಾಗಿದೆ. ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರಿಗೆ ಎಲ್ಲ ಅನುಸೂಚಿತ ಬೆಳೆ ಮತ್ತು ಘಟಕಗಳ ಬಗ್ಗೆ ಬ್ಯಾಂಕ್‌ , ರೈತ ಸಂಪರ್ಕ ಕೇಂದ್ರ ಮತ್ತು ಗ್ರಾಪಂ ಕಚೇರಿಗಳ ಸೂಚನಾ ಫಲಕಗಳ ಮೇಲೆ ಪ್ರಕಟಿಸಿ ವ್ಯಾಪಕ ಪ್ರಚಾರ ನಡೆಸಿ ರೈತರಿಗೆ ಯೋಜನೆಯ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಯೋಜನೆಯ ಮಾರ್ಗಸೂಚಿಯನ್ವಯ ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು. ನೀರಾವರಿ ಮತ್ತು ಒಣಬೇಸಾಯ ಪ್ರದೇಶದ ವಿವರ ಸರಿಯಾಗಿ ನಮೂದಿಸಬೇಕು. ಬೆಳೆವಿಮೆ ನೋಂದಾವಣೆ ವೇಳೆ ರೈತರ ಆಧಾರ್ ಮತ್ತು ಮೊಬೈಲ್ ಸಂಖ್ಯೆಯ ವಿವರ ಸರಿಯಾಗಿ ನಮೂದಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಪ್ರದರ್ಶಿಸಿ ಬೆಳೆವಿಮೆಯ ಪ್ರಚಾರ ಅಚ್ಚುಕಟ್ಟಾಗಿ ಮಾಡಬೇಕು ಎಂದು ಹೇಳಿದರು.

ಕೃಷಿ ಇಲಾಖೆ ಉಪನಿರ್ದೇಶಕ ಎಲ್.ಸಿದ್ದೇಶ್ವರ ಮಾತನಾಡಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ರೈತರಿಗೆ ನೋಂದಾಯಿಸಲು ಮುಖ್ಯ ಬೆಳೆಗಳಿಗೆ ಗ್ರಾಪಂ ಮತ್ತು ಇತರೆ ಬೆಳೆಗಳಿಗೆ ಹೋಬಳಿಯಲ್ಲಿ ವಿಮಾ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ. ಬೆಳೆ ವಿಮೆಗೆ ನೋಂದಾಯಿಸಲು ರೈತರು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು. ಬೇಸಿಗೆ ಹಂಗಾಮಿನ ನೀರಾವರಿ ಭತ್ತ ಬೆಳೆಗೆ`ಯಸ್ ಟಕ್'''' (YES-TECH) ತಂತ್ರಜ್ಞಾನ ಬಳಸಿ ಇಳುವರಿ ಅಂದಾಜು ಮಾಡಲಾಗುವುದು. ಬೆಳೆ ಸಾಲ ಪಡೆದ ರೈತರು ಬ್ಯಾಂಕುಗಳಿಂದ ಕಡ್ಡಾಯವಾಗಿ ನೋಂದಣಿಯಾಗುತ್ತಾರೆ. ಭಾಗವಹಿಸಲು ಇಚ್ಚೆ ಪಡದಿದ್ದಲ್ಲಿ ನೋಂದಣಿ ಕೊನೆಯ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಬ್ಯಾಂಕಿಗೆ ಲಿಖಿತ ಪತ್ರ ನೀಡಬೇಕು. ಬೆಳೆ ಸಾಲ ಪಡೆಯದ ರೈತರ ನೋಂದಣಿ ಸ್ವಯಂಪ್ರೇರಿತವಾಗಿದ್ದು, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬಹುದು ಎಂದರು.

ಹಿಂಗಾರು ಬೆಳೆಗಳಿಗೆ ರೈತರು ಪಾವತಿಸಬೇಕಾದ ಕಂತು (ಪ್ರೇಮಿಯಂ) ವಿಮಾ ಮೊತ್ತದ ಶೇ 1.5 ವಿಮಾ ಕಂತು ಆಗಿದ್ದು, ರೈತರ ವಂತಿಗೆಯ ನಂತರ, ಉಳಿದ ವಿಮಾ ಕಂತನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಭರಿಸುತ್ತವೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಪ್ರಕಾಶ ದೇಶಪಾಂಡೆ, ಸೇರಿದಂತೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು, ಸಹಕಾರ ಇಲಾಖೆಯ ಉಪನಿಬಂಧಕರು, ಲೀಡ್ ಬ್ಯಾಂಕ್ ಸಿಬ್ಬಂದಿ, ವಿಮಾ ಕಂಪನಿಯ ಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ