ಆರ್ಥಿಕ ಬೆಂಬಲ ಯೋಜನೆಗಳ ಜಾಗೃತಿ ಮೂಡಿಸಿ: ಪಲ್ಲವಿ

KannadaprabhaNewsNetwork |  
Published : Feb 16, 2025, 01:46 AM IST
15ಕೆಆರ್ ಎಂಎನ್ 4.ಜೆಪಿಜಿರಾಮನಗರ ತಾಲೂಕಿನ ಕಸಬಾ ಹೋಬಳಿಯ ರಾಜೀವ್‌ಗಾಂಧಿಪುರ ಗ್ರಾಮ ಹಾಗೂ ಕೂಟಗಲ್ ಹೋಬಳಿಯ ಯರೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಜಿ.ಪಲ್ಲವಿ ಕುಂದು-ಕೊರತೆಗಳನ್ನು ಆಲಿಸಿದರು. | Kannada Prabha

ಸಾರಾಂಶ

ರಾಮನಗರ: ಸಿಳ್ಳೇಕೇತಾ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಲೆಮಾರಿ ಸೇರಿದಂತೆ ಇತರೆ ಸಮುದಾಯಗಳಿಗೆ ಸರ್ಕಾರ ನೀಡುವ ಆರ್ಥಿಕ ಬೆಂಬಲದ ಯೋಜನೆಗಳ ಜಾಗೃತಿ ಮೂಡಿಸುವಂತೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಮನಗರ: ಸಿಳ್ಳೇಕೇತಾ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಲೆಮಾರಿ ಸೇರಿದಂತೆ ಇತರೆ ಸಮುದಾಯಗಳಿಗೆ ಸರ್ಕಾರ ನೀಡುವ ಆರ್ಥಿಕ ಬೆಂಬಲದ ಯೋಜನೆಗಳ ಜಾಗೃತಿ ಮೂಡಿಸುವಂತೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕಿನ ಕಸಬಾ ಹೋಬಳಿಯ ರಾಜೀವ್‌ಗಾಂಧಿಪುರ ಗ್ರಾಮ ಹಾಗೂ ಕೂಟಗಲ್ ಹೋಬಳಿಯ ಯರೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕುಂದು-ಕೊರತೆಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು, ಎಲ್ಲಾ ನಿಗಮಗಳ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಲು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಿದರು.

ಕಸಬಾ ಹೋಬಳಿಯ ರಾಜೀವ್ ಗಾಂಧಿಪುರ ಗ್ರಾಮದ ಸಿಳ್ಳೇಕೇತ ಸಮುದಾಯ ಕಾಲೋನಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ 30 ಕುಟುಂಬಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರಿಗೆ ಹಕ್ಕು ಪತ್ರ ವಿತರಿಸಿಲ್ಲ. ಕೆಲವರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಕೆಲವರಿಗೆ ನಿವೇಶವಿದೆ, ವಸತಿ ಇಲ್ಲ ಎಂಬ ಸಮಸ್ಯೆಗಳು ಕಂಡುಬಂದಿದೆ. ಸಮಾಜ ಕಲ್ಯಾಣ ಇಲಾಖೆ ಸಚಿವರು, ಕಳೆದ ವರ್ಷ ಅಲೆಮಾರಿ ಮಕ್ಕಳಿಗೆ ಶೇ.10ರಷ್ಟು ಪ್ರವೇಶ ಪರೀಕ್ಷೆ ಇಲ್ಲದೆ ನೇರ ಪ್ರವೇಶ ಕಲ್ಪಿಸುವಂತೆ ಆದೇಶ ಹೊರಡಿಸಿದ್ದಾರೆ. ಈ ಮಾಹಿತಿ ಸಮುದಾಯದ ಪೋಷಕರಿಗೆ ತಿಳಿಸಬೇಕು ಎಂದರು.

ಕೂಟಗಲ್ ಹೋಬಳಿಯ ಯರೇಹಳ್ಳಿ ಗ್ರಾಮದ ಇರುಳಿಗ ಸಮುದಾಯದ ಕಾಲೋನಿಗೆ ಭೇಟಿ ನೀಡಿದ ವೇಳೆ ಸುಮಾರು 28 ಕುಟುಂಬಗಳು ಗುಡ್ಡದ ಮೇಲೆ ಜೋಪಡಿ ಹಾಕಿಕೊಂಡು ವಾಸ ಮಾಡುತ್ತಿರುವುದು ಕಂಡುಬಂದಿದೆ. ಈ ಗುಡ್ಡದ ಕೆಳಗೆ ಲೇಔಟ್‌ಗಳನ್ನು ಮಾಡಲಾಗಿದ್ದು, 10 ಕುಟುಂಬಗಳನ್ನು ಗುರುತಿಸಿ ಹಕ್ಕು ಪತ್ರ ವಿತರಿಸಲು ಪಟ್ಟಿ ಮಾಡಿದ್ದಾರೆ. ಉಳಿದಂತೆ 13 ಕುಟುಂಬಗಳಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ ಸೇರಿದಂತೆ ಸಮರ್ಪಕ ದಾಖಲೆಗಳು ಇಲ್ಲ. ಈ ಹಿಂದೆ ಅವರು ವಾಸವಿದ್ದ ಗ್ರಾಮಗಳಲ್ಲಿ ಬೆಂಕಿ ಅನಾಹುತ ಸಂಭವಿಸಿದ ಕಾರಣ ಅವರನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಉಳಿದ ಕುಟುಂಬದವರಿಗೆ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಹೇಳಿದರು.

ನಿಗಮದಿಂದ ಪ್ರತಿ ಬಾರಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸುವ ಸಂದರ್ಭದಲ್ಲಿ ಪತ್ರಿಕಾ ಪ್ರಟಕಣೆ ನೀಡಲಾಗುತ್ತದೆ. ಸಮುದಾಯದವರು ಪತ್ರಿಕಾ ಪ್ರಕಟಣೆ ನೋಡಿ ಅರ್ಜಿ ಸಲ್ಲಿಸುವಷ್ಟು ಶಿಕ್ಷಣ ಪಡೆದಿಲ್ಲ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ತಿಳಿಸಬೇಕು. ಅರ್ಜಿ ಆಹ್ವಾನಿಸಿದರೂ ಸಹ ಯಾರೂ ಅರ್ಜಿ ಸಲ್ಲಿಸಿಲ್ಲ. ಮಾಹಿತಿ ಕೊರತೆಯಿಂದ ಯೋಜನೆ ವ್ಯರ್ಥವಾಗಿದೆ ಎಂದು ಪಲ್ಲವಿ ಹೇಳಿದರು.

ಜಿಲ್ಲೆಯಲ್ಲಿ ಸಾಕಷ್ಟು ಇರುಳಿಗರಿಗೆ ಸರ್ಕಾರದ ಗುರುತಿನ ಚೀಟಿಗಳು ಇಲ್ಲದೆ ಸರ್ಕಾರಿ ಯೋಜನೆಗಳನ್ನು ಪಡೆದುಕೊಳ್ಳಲು ಹಾಗೂ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಪ್ರತಿ ಕಾಲೋನಿಗಳಿಗೆ ಗುರುತಿನ ಚೀಟಿ ಮಾಡಿಕೊಡಲು ಮನವಿ ಸಲ್ಲಿಸಿದ್ದಾರೆ. ಆದ್ದರಿಂದ ಈ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡು ಸರ್ಕಾರದ ಯೋಜನೆಯನ್ನು ಇರುಳಿಗ ಸಮುದಾಯಕ್ಕೆ ಸಮರ್ಪಕವಾಗಿ ಒದಗಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ ಜಂಟಿ ಸಭೆಯನ್ನು ಮಾಡಿ, ಶಿಕ್ಷಣ ಕುರಿತು ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಜಾಗೃತಿ ಮೂಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್, ನಿಗಮದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಆನಂದ್ ಕುಮಾರ್ ಇತರರಿದ್ದರು.

ಕೋಟ್ ................

ಜಿಲ್ಲೆಯಲ್ಲಿ ಐಟಿಡಿಪಿ ಕೇಂದ್ರ ಸ್ಥಾಪಿಸಲು ಮನವಿ ಸಲ್ಲಿಸಿದ್ದೇವೆ. ಇರುಳಿಗರ ಮಕ್ಕಳು ಶಾಲೆಗೆ ಹೋಗಲು ಸಾರಿಗೆ, ರಸ್ತೆ ವ್ಯವಸ್ಥೆ ಇಲ್ಲದೆ ಹತ್ತಾರು ಕಿಲೋ ಮೀಟರ್ ನಡೆಯಬೇಕಿದೆ. ಅಲ್ಲದೆ, ಕಾಡು ಪ್ರಾಣಿಗಳ ಭಯದಿಂದ ಶಾಲೆ ಬಿಡುತ್ತಿರುವುದೂ ಮತ್ತೊಂದು ಕಾರಣ. ಕಾಲೋನಿಗಳಲ್ಲಿ ಪ್ರಾಥಮಿಕ ಶಾಲೆಗೆ ಶಿಕ್ಷಣ ಮುಗಿಯುತ್ತಿದೆ. ಮುಂದಿನ ಶಿಕ್ಷಣಕ್ಕೆ ತುಂಬಾ ದೂರ ಹೋಗಬೇಕಾದ ಕಾರಣ ಶಿಕ್ಷಣ ಪ್ರಾಥಮಿಕ ಹಂತಕ್ಕೆ ಮೊಟಕು ಮಾಡುತ್ತಿದ್ದಾರೆ. ಸಮುದಾಯದವರಿಗೆ ಸರ್ಕಾರಿ ಯೋಜನೆಗಳ ಮಾಹಿತಿ ತಿಳಿಸಿ ಮನವರಿಕೆ ಮಾಡಲಾಗಿದೆ.

- ಜಿ.ಪಲ್ಲವಿ, ಅಧ್ಯಕ್ಷರು, ಕರ್ನಾಟಕ ಎಸ್ಸಿ/ಎಸ್ಟಿ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ

15ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ತಾಲೂಕಿನ ಕಸಬಾ ಹೋಬಳಿಯ ರಾಜೀವ್‌ಗಾಂಧಿಪುರ ಹಾಗೂ ಕೂಟಗಲ್ ಹೋಬಳಿಯ ಯರೇಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಜಿ.ಪಲ್ಲವಿ ಕುಂದು-ಕೊರತೆಗಳನ್ನು ಆಲಿಸಿದರು.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ