ಸಂಚಾರ ನಿಯಮ ಪಾಲನೆ ತಿಳಿವಳಿಕೆ ಮೂಡಿಸಿ: ಡಿಸಿ ಭೂಬಾಲನ್‌

KannadaprabhaNewsNetwork | Published : Jul 17, 2024 12:46 AM

ಸಾರಾಂಶ

ಅಪಘಾತ ತಡೆಗೆ ಜಾಗೃತಿ ಮೂಡಿಸಿ, ಹೆದ್ದಾರಿಗಳಲ್ಲಿ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಅಪಘಾತ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಿಗ್ನಲ್, ರೋಡ್‌ ಬ್ಯಾರಿಕೇಡ್, ಮಾಹಿತಿ ಫಲಕ, ತಿರುವು ರಸ್ತೆಗಳ ಮಾಹಿತಿ, ವೃತ್ತಗಳ ಮಾಹಿತಿ ಅಳವಡಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿವಳಿಕೆ ನೀಡಬೇಕು. ರಸ್ತೆ ಸುಧಾರಣೆ ಕೈಗೊಂಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಒದಗಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಆ್ಯಂಬುಲೆನ್ಸ್ ವ್ಯವಸ್ಥೆ ಸೇರಿದಂತೆ ತುರ್ತು ವೈದ್ಯಕೀಯ ವ್ಯವಸ್ಥೆ ಒದಗಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಅಪಘಾತ ಪ್ರಕರಣಗಳು ಸಂಭವಿಸಿದಾಗ ಸಾವು ನೋವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಹೆದ್ದಾರಿಗಳಲ್ಲಿ ತುರ್ತು ದೂರವಾಣಿ 108, ಹೆದ್ದಾರಿ ಹೆಲ್ಪ್‌ಲೈನ್ 1033 ಟೋಲ್‌ ಫ್ರೀ ಫಲಕಗಳನ್ನು ಅಳವಡಿಸಬೇಕು. ಈ ದೂರವಾಣಿಗಳಿಗೆ ಬಂದಿರುವ ಕರೆಗಳಿಗೆ ತುರ್ತಾಗಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ತುರ್ತು ಸಂದರ್ಭಗಳಲ್ಲಿ ಯಾವ ನಿರ್ಲಕ್ಷ್ಯವನ್ನು ತೋರದೇ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಆದ್ಯತೆ ಮೇಲೆ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಮಾಸ್ತಿಹೊಳಿ ಮಾತನಾಡಿ, ಜಿಲ್ಲಾಸ್ಪತ್ರೆಯ ಟ್ರಾಮಾ ಸೆಂಟರ್‌ನಲ್ಲಿ ಅಪಘಾತ ಪ್ರಕರಣಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.

ನಗರದ ಗಾಂಧಿವೃತ್ತದಿಂದ ಆರಂಭವಾಗುವ ರಸ್ತಗಳಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಸಂಚಾರ ಮಾಡದಂತೆ ಕ್ರಮ ವಹಿಸಬೇಕು. ಪಾದಚಾರಿಗಳಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಂಡು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲು ಕ್ರಮ ವಹಿಸಬೇಕು. ನಗರದೊಳಗೆ ಅವಶ್ಯ ಇರುವ ಕಡೆ ಮಾತ್ರ ರೋಡ್ ಬ್ರೇಕ್ ಅಳವಡಿಕೆಗೆ ಕ್ರಮ ವಹಿಸಬೇಕು. ಹೆದ್ದಾರಿ ಪೆಟ್ರೋಲಿಂಗ್ ವಾಹನ ಹಗಲು-ರಾತ್ರಿ ಗಸ್ತು ನಡೆಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಶಾಲಾ ಮಕ್ಕಳು ದ್ವಿಚಕ್ರ ವಾಹನ ಬಳಕೆ ತಡೆಯಲು ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಸೂಕ್ತ ಜಾಗೃತಿ ಮೂಡಿಸಬೇಕು. ಶಾಲೆಗಳಲ್ಲಿ ರಸ್ತೆ ಸುರಕ್ಷತಾ ಅನುಸರಿಸುವ ಅರಿವು ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಶಾಲಾ ವಾಹನಗಳಿಗೆ ಅನುಮತಿ ನೀಡುವಾಗ ಸಮರ್ಪಕವಾಗಿ ದಾಖಲೆಗಳನ್ನು ಪರಿಶೀಲಿಸಿ ಅನುಮತಿ ನೀಡಬೇಕು. ಶಾಲಾ ವಾಹನಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಕುರಿತು ಪರಿಶೀಲನೆ ನಡೆಸಬೇಕು.

ಅಳಗಿನಾಳದ ಹತ್ತಿರ ರಸ್ತೆಯ ಪಕ್ಕದಲ್ಲಿ ಬಾವಿ ಇದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಯಾವುದೇ ಅವಘಡಗಳು ಸಂಭವಿಸಿದಂತೆ ಸೂಕ್ತ ಸುರಕ್ಷತಾ ಕ್ರಮ ವಹಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿನ ಅಪಘಾತ ಸ್ಥಳಗಳಲ್ಲಿ ಇಂದಿನ ಸಭೆಯಲ್ಲಿ ನೀಡಿದ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ ಮಾತನಾಡಿ, ಹಡಗಲಿ-ದೇವರಹಿಪ್ಪರಗಿ ಮಾರ್ಗ, ವಿಜಯಪುರ ನಗರದ ಪಾಟೀಲ್ ಪ್ಲಾನೆಟ್ ಲಿಂಗದಗುಡಿ ರಸ್ತೆ, ವಿಜಯಪುರ-ಸೋಲಾಪುರ ಮಾರ್ಗದಲ್ಲಿನ ಹಳಗುಣಕಿ ಕ್ರಾಸ್ ಹತ್ತಿರ ಅಗಸನಾಳ ಸೇರಿದಂತೆ ಮುಂತಾದ ಅಪಘಾತ ಸ್ಥಳಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಟಿ ಜಂಕ್ಷನ್ ಸ್ಥಳದಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ, ಸೈನೇಜ್ ವ್ಯವಸ್ಥೆ ಮಾಡಿ ಪರಿಹಾರ ಕ್ರಮ ಕೈಗೊಂಡು ಅಪಘಾತ ತಪ್ಪಿಸಲು ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಜು ಮುಜುಮದಾರ ಅವರು ಈ ಹಿಂದಿನ ಸಭೆಯ ನಿರ್ದೇಶನದಂತೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಒದಗಿಸಿದರು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಇಂಡಿ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Share this article