ಬಳ್ಳಾರಿ: ರಂಗಭೂಮಿ ಕ್ಷೇತ್ರದಲ್ಲಿ ಬಳ್ಳಾರಿ ಜಿಲ್ಲೆಗೆ ಬಹುದೊಡ್ಡ ಹಿನ್ನೆಲೆಯಿದೆ. ಮೈಸೂರಿನಂತೆ ಬಳ್ಳಾರಿಯೂ ಸಾಂಸ್ಕೃತಿಕ ನಗರಿಯಾಗಿದೆ ಎಂದು ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ಹೇಳಿದರು. ಇಲ್ಲಿನ ರಾಘವ ಕಲಾಮಂದಿರದಲ್ಲಿ ಜರುಗಿದ ಮಯೂರ ಕಲಾ ಸಂಘದ ಸಂಸ್ಥಾಪಕ ಅಧ್ಯಕ್ಷ ಕೆ. ಮಲ್ಲೇಶಪ್ಪ, ಉಪಾಧ್ಯಕ್ಷ ಕೆ.ಎಸ್. ಚಂದ್ರಶೇಖರ ಹಾಗೂ ಕಲಾವಿದ ವಿಶ್ವನಾಥ ಕಲ್ಮಠ ಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಲೇಖಕ ಸಿದ್ಧರಾಮ ಕಲ್ಮಠ ಅವರು ಕಲಾವಿದ ವಿಶ್ವನಾಥ ಕಲ್ಮಠ ಅವರ ಕಲಾ ಪಯಣ ಕುರಿತು ಉಪನ್ಯಾಸ ನೀಡಿದರು. ನಾಗಭೂಷಣ ನಾಗಳ್ಳಿ ಅವರು ಕೆ. ಮಲ್ಲೇಶಪ್ಪ ಹಾಗೂ ಕೆ.ಎಸ್. ಚಂದ್ರಶೇಖರ್ ಅವರ ರಂಗಭೂಮಿಯ ಕೊಡುಗೆ ಕುರಿತು ಉಪನ್ಯಾಸ ನೀಡಿದರು.
ರಾಘವ ಕಲಾಮಂದಿರದ ಗೌರವ ಅಧ್ಯಕ್ಷ ಕೆ. ಚನ್ನಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಆರ್ಯವೈಶ್ಯ ಸಂಘದ ಕಾರ್ಯದರ್ಶಿ ಸೋಂತ ಗಿರಿಧರ್, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಮಯೂರ ಕಲಾ ಸಂಘದ ಮದನ ಮೋಹನ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ದಿ. ಕೆ. ಮಲ್ಲೇಶಪ್ಪ, ದಿ. ಕೆ.ಎಸ್. ಚಂದ್ರಶೇಖರ ಹಾಗೂ ದಿ. ವಿಶ್ವನಾಥ ಕಲ್ಮಠ ಅವರ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು.ಜಡೆಪ್ಪ, ಸಂಗಡಿಗರು ವಿವಿಧ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ತಿಪ್ಪೇಸ್ವಾಮಿ ಮುದ್ದಟನೂರು ಕ್ಯಾಷಿಯೋ ಸಾಥ್ ನೀಡಿದರು. ರಂಗನಿರ್ದೇಶಕ ಶಿವೇಶ್ವರಗೌಡ ಕಲ್ಲುಕಂಬ ಅವರ ರಚನೆ ಹಾಗೂ ಕೆ.ಮದನಮೋಹನ ನಿರ್ದೇಶನದ ನಿರಂತರ ಜೀವನ ಪಯಣ ನಾಟಕ ಪ್ರದರ್ಶನಗೊಂಡಿತು.
ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಜರುಗಿದ ಕೆ.ಮಲ್ಲೇಶಪ್ಪ, ಕೆ.ಎಸ್.ಚಂದ್ರಶೇಖರ ಹಾಗೂ ಕಲಾವಿದ ವಿಶ್ವನಾಥ ಕಲ್ಮಠ ಸ್ಮರಣೆ ಕಾರ್ಯಕ್ರಮದಲ್ಲಿ ನಿರಂತರ ಜೀವನ ಪಯಣ ನಾಟಕ ಪ್ರದರ್ಶನಗೊಂಡಿತು.