ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಜಾನಪದ ಲೋಕದಲ್ಲಿ ಬೆಂಗಳೂರಿನ ಕಾವೇರಿ ಬಿ.ಇಡಿ ಕಾಲೇಜು ವತಿಯಿಂದ ಪ್ರಶಿಕ್ಷಣಾರ್ಥಿಗಳಿಗೆ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಸಮುದಾಯ ಜೀವನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿ, ವೃತ್ತಿ ಪ್ರಾಮಾಣಿಕವಾಗಿ ಮಾಡುವ ಶಿಕ್ಷಕ ಸಾಧಕರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾನೆ. ಒಬ್ಬ ಉತ್ತಮ ಶಿಕ್ಷಕ ವಿದ್ಯಾರ್ಥಿಗಳ ದೇವರಾಗಬಹುದು. ಉತ್ತಮ ಪ್ರಜೆಗಳನ್ನು ರೂಪಿಸುವ ಶಿಕ್ಷಕರನ್ನು ಪ್ರತಿಯೊಬ್ಬರೂ ಗೌರವಿಸುತ್ತಾರೆ ಎಂದು ಹೇಳಿದರು.
ಸದಾ ಮಕ್ಕಳೊಂದಿಗೆ ಒಡನಾಟ ಮತ್ತು ಅವರ ಕಲಿಕೆಯಲ್ಲಿ ತಮ್ಮ ಜೀವಮಾನವನ್ನು ಕಳೆಯುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚು. ತಮ್ಮ ವೃತ್ತಿ ಜೀವನದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ಅವರ ಬಾಳಿಗೆ ಬೆಳಕು ನೀಡುವಲ್ಲಿ ಶಿಕ್ಷಕರು ಶ್ರಮಿಸುತ್ತಾರೆ ಎಂದು ಹೇಳಿದರು.ಪ್ರಶಿಕ್ಷಣಾರ್ಥಿಗಳು ಮುಂದೆ ಶಿಕ್ಷಕರಾಗುವವರು. ನೀವು ಸ್ವಾಭಿಮಾನದಿಂದ ಬದುಕುವುದನ್ನು ಕಲಿಯುವ ಜೊತೆಗೆ ಅಧ್ಯಯನಶೀಲತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾವೇರಿ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಇ.ಬಿ. ರಾಜೇಶ್ ಮಾತನಾಡಿ, ಶಿಕ್ಷಕರಾಗುವವರು ಸರ್ವಧರ್ಮ ಸಹಿಷ್ಣುಗಳಾಗಿರಬೇಕು. ಬೋಧನೆಯಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿರುವ ಕೀಳರಿಮೆ ಹೋಗಲಾಡಿಸಿ ಅವರಿಗೆ ಆತ್ಮವಿಶ್ವಾಸ ತುಂಬಬೇಕು ಎಂದು ತಿಳಿಸಿದರು.