
ಕನ್ನಡಪ್ರಭ ವಾರ್ತೆ, ತುಮಕೂರು
ಅವರು ಜನಚಳವಳಿ ಕೇಂದ್ರದಲ್ಲಿ ಕೆಂಪು ಪುಸ್ತಕ ಆಚರಣೆ ಸಮಿತಿ ಹಾಗೂ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಸಮಿತಿಯಿಂದ ಕೆಂಪು ಪುಸ್ತಕ ದಿನಾಚರಣೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವದಾದ್ಯಂತ ಎಐ ವ್ಯಾಪಕವಾಗುತ್ತಿರುವ ಈ ಸಂದರ್ಭದಲ್ಲಿ ಇಂದಿನ ಪೀಳಿಗೆ ಏನು ಕಲಿಯಬೇಕು, ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಗೊಂದಲ ಉಂಟಾಗಿದೆ. ತಂತ್ರಜ್ಞಾನ ವೇಗವಾಗಿ ಬದಲಾಗುತ್ತಿದ್ದು, ಇಂದಿನ ನವೀನತೆ ನಾಳೆ ಹಳೆಯದಾಗುತ್ತಿದೆ. ಇದರ ನಡುವೆ ಕೃಷಿ ಚಟುವಟಿಕೆಗಳಲ್ಲಿ ಉಂಟಾಗುತ್ತಿರುವ ಅವ್ಯವಸ್ಥೆ, ಜನಸಾಮಾನ್ಯರ ಆರೋಗ್ಯದ ಮೇಲೆ ಬೀಳುತ್ತಿರುವ ದುಷ್ಪರಿಣಾಮಗಳು, ಇಂಧನ ಹಾಗೂ ವಿದ್ಯುತ್ ಬಳಕೆಯ ಏರಿಕೆ, ವಾಯುಗುಣದ ಹದಗೆಟ್ಟು ಹೋಗುತ್ತಿರುವ ಪರಿಸ್ಥಿತಿ—ದುಡಿಯುವ ವರ್ಗ, ರೈತರು ಮತ್ತು ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡುತ್ತಿದೆ. ಸಾಮ್ರಾಜ್ಯಶಾಹಿ ನೀತಿಗಳ ವಿರುದ್ಧ ಸಂಘಟಿತ ಹೋರಾಟವೇ ಮುಖ್ಯ ದಾರಿ ಎಂದು ಕರೆ ನೀಡಿದರು.ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ಕೆ. ಸುಬ್ರಮಣ್ಯ ಮಾತನಾಡಿ, 1848ರ ಫೆಬ್ರವರಿ 21ರಂದು ಕಾರ್ಲ್ ಮಾರ್ಕ್ಸ್ ಹಾಗೂ ಫ್ರೆಡರಿಕ್ ಎಂಗೆಲ್ಸ್ ಅವರು ರಚಿಸಿದ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ ವಿಶ್ವದ ಕ್ರಾಂತಿಕಾರಿ ಚಿಂತನೆಗೆ ದಿಕ್ಕು ತೋರಿದ ಮಹತ್ವದ ಗ್ರಂಥವಾಗಿದೆ. ಇದೇ ದಿನ ವಿಶ್ವ ಮಾತೃಭಾಷಾ ದಿನವೂ ಆಗಿರುವುದು ವಿಶೇಷ ಎಂದು ತಿಳಿಸಿದರು. ಈ ವರ್ಷ ಕೆಂಪು ಪುಸ್ತಕ ದಿನವನ್ನು ಸಾಮ್ರಾಜ್ಯಶಾಹಿ ವಿರೋಧದ ವಿಷಯದ ಸುತ್ತ ಆಚರಿಸಲಾಗುತ್ತಿದೆ. ಇದು ದೃಢ ಸಾಮ್ರಾಜ್ಯಶಾಹಿ ವಿರೋಧಿ ನಾಯಕನಾಗಿದ್ದ ಫಿಡೆಲ್ ಕ್ಯಾಸ್ಟ್ರೋ ಅವರ ಶತಮಾನೋತ್ಸವ ವರ್ಷವೂ ಆಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಬ್ಬಯ್ಯ ಮಾತನಾಡಿ, ಸಾಮ್ರಾಜ್ಯಶಾಹಿ ಹಾಗೂ ಕೋಮುವಾದ ಶಕ್ತಿಗಳು ಒಟ್ಟಾಗಿ ದೇಶದ ದುಡಿಯುವ ಜನರ ಸಮಸ್ಯೆಗಳನ್ನು ಗಂಭೀರಗೊಳಿಸುತ್ತಿವೆ. ಬಂಡವಾಳಶಾಹಿಗಳ ಲಾಭಕೋರ ನೀತಿಗಳನ್ನು ಸೋಲಿಸಲು ಜನತೆ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಈ ಪುಸ್ತಕವು ಸಾಮ್ರಾಜ್ಯಶಾಹಿಯ ಮೂರು ಹಂತಗಳು, ಜನಜೀವನದ ಮೇಲೆ ಅದರ ಪರಿಣಾಮಗಳು ಹಾಗೂ ಯು.ಎಸ್. ಸಾಮ್ರಾಜ್ಯಶಾಹಿ ಭಾರತದಷ್ಟೇ ಅಲ್ಲ ಇಡೀ ಜಗತ್ತಿನ ಜನತೆಗೆ ಶತ್ರುವೆಂಬ ವಿಚಾರವನ್ನು ಸ್ಪಷ್ಟಪಡಿಸುತ್ತದೆ. ಸಾಮ್ರಾಜ್ಯಶಾಹಿಗೆ ಮಿಲಿಟರಿ ಹಾಗೂ ಆರ್ಥಿಕ ಶಕ್ತಿ ಇದ್ದರೂ ಅದು ಶಾಶ್ವತ ಅಭಿವೃದ್ಧಿಯ ಮಾರ್ಗವಲ್ಲ. ಜಗತ್ತಿನಲ್ಲಿ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಳ ದೀರ್ಘ ಪರಂಪರೆಯನ್ನು ಈ ಕೃತಿ ನೆನಪಿಸುತ್ತದೆ. ಜನತೆಗೆ ಸರಳವಾಗಿ ಅರ್ಥವಾಗುವ ಭಾಷೆಯಲ್ಲಿ ಪುಸ್ತಕವನ್ನು ಓದುವಂತೆ ಪ್ರೇರೇಪಿಸುವ ಕಾರ್ಯವೇ ಪ್ರಮುಖ ಉದ್ದೇಶ ಎಂದು ಹೇಳಿದರು. ಷಣ್ಮುಗಪ್ಪ ಸ್ವಾಗತಿಸಿದರು. ಲೋಕೇಶ್ ನಿರೂಪಿಸಿದರು.