ಕ್ರಿಯೇಟಿವ್ ಕಾಲೇಜ್‌: 28ರಂದು ಕಾರ್ಕಳ ತಾಲೂಕು 21ನೇ ಸಾಹಿತ್ಯ ಸಮ್ಮೇಳನ

KannadaprabhaNewsNetwork |  
Published : Dec 23, 2025, 03:00 AM IST
ಡಿ.28ರಂದು ಕ್ರಿಯೇಟಿವ್ ಕಾಲೇಜಿನಲ್ಲಿ ಕಾರ್ಕಳ 21ನೇ ಸಾಹಿತ್ಯ ಸಮ್ಮೇಳನ | Kannada Prabha

ಸಾರಾಂಶ

ಕಾರ್ಕಳ ತಾಲೂಕಿನ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 28ರಂದು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ

ಆಮಂತ್ರಣ ಪತ್ರಿಕೆ ಬಿಡುಗಡೆ । ಸಾಹಿತಿ, ಪತ್ರಕರ್ತ ವಾಸುದೇವ ಭಟ್‌ ಸಿದ್ದಾಪುರ ಸರ್ವಾಧ್ಯಕ್ಷತೆ

ಕಾರ್ಕಳ: ಕಾರ್ಕಳ ತಾಲೂಕಿನ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 28ರಂದು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ತಿಳಿಸಿದರು. ಕಾರ್ಕಳ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಮ್ಮೇಳನದ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಹಾಗೂ ಪತ್ರಕರ್ತ ವಾಸುದೇವ ಭಟ್ ಸಿದ್ದಾಪುರ ಆಯ್ಕೆಯಾಗಿದ್ದಾರೆ. ಸಮ್ಮೇಳನದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ರಾಷ್ಟ್ರಧ್ವಜಾರೋಹಣವನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ನೆರವೇರಿಸುವರು. ಬಳಿಕ ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣವನ್ನು ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ನಡೆಸುವರು. ಹಿರ್ಗಾನ ಗ್ರಾಪಂ ಅಧ್ಯಕ್ಷೆ ಸುನಿತಾ ಪೂಜಾರಿ ಉಪಸ್ಥಿತರಿರುವರು.

ಕಾಲೇಜು ಸಂಸ್ಥಾಪಕ ಅಶ್ವಥ್ ಎಸ್ ಎಲ್ ಮಾತನಾಡಿ, ಪೂರ್ವಾಹ್ನ ಕ್ರಿಯೇಟಿವ್ ಪುಸ್ತಕ ಮನೆಯಿಂದ ಜೋಡು ರಸ್ತೆ ಮೂಲಕ ಸಮ್ಮೇಳನಾಧ್ಯಕ್ಷರ ಗೌರವಪೂರ್ವಕ ಸ್ವಾಗತದೊಂದಿಗೆ ಭವ್ಯ ಪುರಮೆರವಣಿಗೆ ನಡೆಯಲಿದೆ. ಕನ್ನಡ ತಾಯಿ ಭುವನೇಶ್ವರಿ ದೇವಿಯ ಶೋಭಾಯಾತ್ರೆ, ಸ್ಥಳೀಯ ಸಾಂಸ್ಕೃತಿಕ ತಂಡಗಳು, ಸ್ಕೌಟ್ಸ್ ಮತ್ತು ಗೈಡ್ಸ್, ಭಾರತ ಸೇವಾದಳ, ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು, ಚೆಂಡೆ ಹಾಗೂ ಗೊಂಬೆ ತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ. ಮೆರವಣಿಗೆಯನ್ನು ಯಕ್ಷ ಕಲಾರಂಗ ಕಾರ್ಕಳದ ಅಧ್ಯಕ್ಷ ವಿಜಯ ಶೆಟ್ಟಿ ಉದ್ಘಾಟಿಸಲಿದ್ದಾರೆ ಎಂದರು.

ಬೆಳಗ್ಗೆ 10 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ಉದ್ಘಾಟಿಸುವರು. ಈ ಸಂದರ್ಭದಲ್ಲಿ ‘ನನ್ನೊಳಗಿನ ನಾನು’ (ಡಾ. ಮಾಲತಿ ಜಿ. ಪ್ರಭು) ಹಾಗೂ ‘ಮನದಾಳದ ಮುತ್ತುಗಳು’ (ಆರ್. ರಮೇಶ್ ಪ್ರಭು) ಕೃತಿಗಳನ್ನು ಪ್ರೊ. ಬಿ. ಪದ್ಮನಾಭ ಗೌಡ ಬಿಡುಗಡೆಗೊಳಿಸಲಿದ್ದಾರೆ. ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಡಾ. ರವೀಂದ್ರ ಶೆಟ್ಟಿ ಬಜಗೋಳಿ ಉದ್ಘಾಟಿಸುವರು. ಆಶಯ ನುಡಿಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೀಡಲಿದ್ದಾರೆ. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಕೆ. ಗುಣಪಾಲ ಕಡಂಬ ಉಪಸ್ಥಿತರಿರಲಿದ್ದಾರೆ.ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ವಿದ್ಯಾರ್ಥಿ–ಪುಸ್ತಕ ಪ್ರೀತಿ ವಿಷಯದ ಗೋಷ್ಠಿಯಲ್ಲಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಪುಸ್ತಕಗಳನ್ನು ಪರಿಚಯಿಸಲಿದ್ದಾರೆ. ಪುಸ್ತಕ ಲೋಕ–ಸಾಹಿತ್ಯ ವಿಸ್ಮಯ ಗೋಷ್ಠಿಯಲ್ಲಿ ಖ್ಯಾತ ಸಾಹಿತಿಗಳು ಭಾಗವಹಿಸಲಿದ್ದಾರೆ. ಗೋಷ್ಠಿಗಳ ಸಮನ್ವಯಕಾರರಾಗಿ ಮಿತ್ರಪ್ರಭ ಹೆಗ್ಡೆ ಹಾಗೂ ಮುನಿರಾಜ್ ರೆಂಜಾಳ ಕಾರ್‍ಯನಿರ್ವಹಿಸಲಿದ್ದಾರೆ.

ಇಳಿಹಗಲು 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ನಡೆಯಲಿದೆ. ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ಸನ್ಮಾನ ನೆರವೇರಿಸಲಿದ್ದು, ನಿಟ್ಟೆ ಕ್ಯಾಂಪಸ್ ನಿರ್ದೇಶಕ ಯೋಗೀಶ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡುವರು. ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಅಶ್ವತ್ ಎಸ್.ಎಲ್. ಸಮಾರೋಪ ಭಾಷಣ ಮಾಡುವರು. ಅಧ್ಯಕ್ಷತೆಯನ್ನು ಕೊಂಡಳ್ಳಿ ಪ್ರಭಾಕರ ಶೆಟ್ಟಿ ವಹಿಸಲಿದ್ದಾರೆ.

ಸಾಹಿತ್ಯ, ಶಿಕ್ಷಣ, ಉದ್ಯಮ, ಸಮಾಜ ಸೇವೆ, ಕೃಷಿ, ದೈವಾರಾಧನೆ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಅಶ್ವಥ್ ಎಸ್.ಎಲ್. ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕಸಾಪ ಪಧಾಧಿಕಾರಿಗಳಾದ ದೇವದಾಸ್ ಕೆರೆಮನೆ, ಕ್ರಿಯೆಟಿವ್ ಕಾಲೇಜು ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೂಪಾ ಮೌದ್ಗಿಲ್‌ ಮಾನಹಾನಿ ಕೇಸ್‌: ರೋಹಿಣಿ ಅರ್ಜಿ ವಜಾ
ವಿರೋಧದ ನಡುವೆ ಮದುವೆ : ಸಿಟ್ಟಲ್ಲಿ ಅಳಿಯನ ಮನೆಗೆ ಮಾವನಿಂದ ಬೆಂಕಿ!