ವಿಜ್ಞಾನ-ತಂತ್ರಜ್ಞಾನದಿಂದ ಮರೆಯಾದ ಸೃಜನಶೀಲತೆ

KannadaprabhaNewsNetwork |  
Published : Sep 18, 2024, 01:54 AM IST
17ಡಿಡಬ್ಲೂಡಿ1ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತವು ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಲಾಯಿತು.   | Kannada Prabha

ಸಾರಾಂಶ

ವಿಶ್ವಕರ್ಮ ಸಮುದಾಯದ ಶ್ರಮದಿಂದ ಅನೇಕ ಐತಿಹಾಸಿಕ ಸ್ಮಾರಕ, ಮಂದಿರ, ದೇವತಾ ಶಿಲ್ಪಗಳು ರೂಪಗೊಂಡಿವೆ. ಸಮಯಪ್ರಜ್ಞೆ, ಸೂಕ್ಷ್ಮತೆ, ಕೌಶಲ್ಯ ಮತ್ತು ಅವರ ಕೆತ್ತನೆಯ ಭಕ್ತಿಯಿಂದ ಅನೇಕ ಅಪರೂಪದ ಕಲಾಕೃತಿಗಳು ಸೃಷ್ಟಿಯಾಗಿವೆ.

ಧಾರವಾಡ:

ವಿಶ್ವಕರ್ಮರು ವಿಶ್ವದ ಮೊದಲ ಶಿಲ್ಪಿಗಳು. ಅವರ ಕ್ರಿಯಾಶೀಲತೆ, ಸೃಜನಶೀಲತೆ ವಿಶೇಷ. ಆದರೆ, ಇಂದಿನ ವಿಜ್ಞಾನ-ತಂತ್ರಜ್ಞಾನಗಳ ಬೆಳವಣಿಗೆಯಿಂದಾಗಿ ಸಮುದಾಯದ ಸೃಜನಶೀಲತೆ, ಕ್ರಿಯಾಶೀಲತೆ ಮರೆಯಾಗುತ್ತಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ ಮಂಗಳವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ವಿಶ್ವಕರ್ಮ ಸಮುದಾಯದ ಶ್ರಮದಿಂದ ಅನೇಕ ಐತಿಹಾಸಿಕ ಸ್ಮಾರಕ, ಮಂದಿರ, ದೇವತಾ ಶಿಲ್ಪಗಳು ರೂಪಗೊಂಡಿವೆ. ಸಮಯಪ್ರಜ್ಞೆ, ಸೂಕ್ಷ್ಮತೆ, ಕೌಶಲ್ಯ ಮತ್ತು ಅವರ ಕೆತ್ತನೆಯ ಭಕ್ತಿಯಿಂದ ಅನೇಕ ಅಪರೂಪದ ಕಲಾಕೃತಿಗಳು ಸೃಷ್ಟಿಯಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಸಂಶೋಧನೆಗಳಿಂದಾಗಿ ಕ್ರಿಯಾಶೀಲತೆ, ಸೃಜನಶೀಲತೆ ಕಡಿಮೆ ಆಗುತ್ತಿದೆ. ಸ್ವತಃ ಚಿಂತನೆಯಲ್ಲಿ ತೊಡಗದೆ, ಎಲ್ಲದಕ್ಕೂ ಕಂಪ್ಯೂಟರ್ ಅವಲಂಬಿಸಿ, ತಮ್ಮ ವೃತ್ತಿ ಮಾಡಲು ಪ್ರಯತ್ನಿಸುತ್ತಾರೆ. ಇದು ವಿಶ್ವಕರ್ಮ ಸಮುದಾಯದವರ ವೃತ್ತಿಗೂ ಬಂದು ನಿಂತಿದೆ. ಹಳೆಯ ಕಟ್ಟಿಗೆ, ಕಲ್ಲು, ಆಭರಣಗಳ ಮೇಲಿನ ಆ ಸೂಕ್ಷ್ಮವಾದ, ಮನೋಜ್ಞವಾದ ಕೆತ್ತನೆ ಇಂದು ಕಣ್ಮರೆ ಆಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಮೇಯರ್‌ ರಾಮಣ್ಣ ಬಡಿಗೇರ ಮಾತನಾಡಿ, ವಿಶ್ವಕರ್ಮನ ಆರಾಧನೆಯು ವಿಶೇಷವಾಗಿ ಎಂಜಿನಿಯರ್‌ಗಳು, ಕಾರ್ಮಿಕರು, ಕಾರ್ಖಾನೆಯ ಕೆಲಸಗಾರರು, ವಾಸ್ತುಶಿಲ್ಪಿಗಳು, ಬಡಗಿಗಳು ಮತ್ತು ಶಿಲ್ಪಿಗಳಿಗೆ ಹೆಚ್ಚಿನ ಮಹತ್ವ ಹೊಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಡಿಸಿ ಗೀತಾ ಸಿ.ಡಿ., ಕುಶಲಕಲೆ ಅನುವಂಶಿಕವಾಗಿ ಬೆಳೆದು ಬಂದಿದೆ. ಕಲಾಕೃತಿಗಳಿಗೆ ಜೀವಕಳೆ ತುಂಬುವ, ಸೌಂದರ್ಯ, ಶೃಂಗಾರ ತೊಡಿಸುವ ಚಾಣಾಕ್ಷತೆ ವಿಶ್ವಕರ್ಮ ಸಮುದಾಯದವರಿಗೆ ರಕ್ತಗತವಾಗಿ ಬಂದಿರುತ್ತದೆ ಎಂದು ಹೇಳಿದರು.

ಗದಗ ಜಿಲ್ಲೆಯ ಕೋಟುಮಚಗಿ ಅರಿವು ಕೇಂದ್ರದ ಗ್ರಂಥಪಾಲಕ ಸೂರ್ಯನಾರಾಯಣ ಈಶಪ್ಪ ಪತ್ತಾರ ರಾಷ್ಟ್ರಕ್ಕೆ ವಿಶ್ವಕರ್ಮ ಸಮುದಾಯ ನೀಡಿದ ಕಲೆ, ಸ್ಮಾರಕ, ಸಾಂಸ್ಕೃತಿಕ ಕೊಡುಗೆಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು. ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕಾಳಪ್ಪ ಬಡಿಗೇರ, ವಿಶ್ವಕರ್ಮ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿಠ್ಠಲ ಕಮ್ಮಾರ, ಅಖಿಲ ಭಾರತ ವಿಶ್ವಕರ್ಮ ಛಾತ್ರಾ ಯುವ ಸಂಘದ ಅಧ್ಯಕ್ಷ ಸಂತೋಷ ಬಡಿಗೇರ, ಸಮಾಜದ ಮುಖಂಡರಾದ ವಸಂತ ಅರ್ಕಾಚಾರ ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌