ಮೊದಲ ಬಾರಿಗೆ ಪ್ಯಾನ್ ಇಂಡಿಯಾ ನಿರ್ಮಿಸಿದ ಶ್ರೇಯ ದ್ವಾರಕೀಶ್‌ಗೆ ಸಲ್ಲಬೇಕು: ಎಚ್.ಆರ್‌.ಭಾರ್ಗವ

KannadaprabhaNewsNetwork | Published : Jun 9, 2024 1:36 AM

ಸಾರಾಂಶ

ದಾವಣಗೆರೆಯಲ್ಲಿ ಶನಿವಾರ ಸಿನಿಮಾ ಸಿರಿ ಸಂಸ್ಥೆ ಹಮ್ಮಿಕೊಂಡಿದ್ದ ದ್ವಾರಕೀಶ್‌ರ ನುಡಿನಮನ ‘ಕಾಲವನ್ನು ತಡೆಯೋರು ಯಾರೂ ಇಲ್ಲ...’ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ, ನಿರ್ಮಾಪಕ ಎಚ್.ಆರ್.ಭಾರ್ಗವ ಚಾಲನೆ ನೀಡಿ ಸ್ಮರಿಸಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಆಫ್ರಿಕಾದಲ್ಲಿ ಶೀಲಾ ಚಿತ್ರವನ್ನು ಮೂರು ಭಾಷೆಯಲ್ಲಿ ನಿರ್ಮಿಸುವ ಮೂಲಕ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ರಚಿಸಿದ ಶ್ರೇಯ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ ದ್ವಾರಕೀಶ್‌ರಿಗೆ ಸಲ್ಲುತ್ತದೆ ಎಂದು ಹಿರಿಯ ಚಿತ್ರ ನಿರ್ದೇಶಕ, ನಿರ್ಮಾಪಕ ಎಚ್.ಆರ್‌.ಭಾರ್ಗವ ತಿಳಿಸಿದರು.

ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಸಿನಿಮಾ ಸಿರಿ ಸಂಸ್ಥೆ ಹಮ್ಮಿಕೊಂಡಿದ್ದ ದ್ವಾರಕೀಶ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಏಕಕಾಲಕ್ಕೆ ಮೂರು ಭಾಷೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ರಚಿಸಿದ್ದು ದ್ವಾರಕೀಶ ಎಂಬ ಹೆಮ್ಮೆ ಇದೆ ಎಂದರು.

ದ್ವಾರಕೀಶ ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್‌ಗಿಂತಲೂ ಒಳ್ಳೆಯ ಕನಸು ಕಂಡಿದ್ದವರು. ಹಾಗಾಗಿಯೇ ಕನ್ನಡ ಚಿತ್ರರಂಗದಲ್ಲಿ ದ್ವಾರಕೀಶ ಇನ್ನೂ ಮುಂದೆ ಹೋಗಿದ್ದಂತಹ ಕನಸುಗಾರ. ವಿದೇಶದಲ್ಲಿ ಕನ್ನಡ ಸಿನಿಮಾಗಳನ್ನು ತೆಗೆಯುತ್ತಿದ್ದಂತಹ ಧೈರ್ಯವಂತ ನಿರ್ಮಾಪಕ ಸಹ ಆಗಿದ್ದರು. ಬೆಂಗಳೂರಿನಲ್ಲಿ ಯಾವ ಸಂಸ್ಥೆಯವರಿಗೂ ಕಾಣದಿರುವ ದ್ವಾರಕೀಶ ದಾವಣಗೆರೆ ಜನರಿಗೆ ಕಂಡಿದ್ದಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದು ಅವರು ಹೇಳಿದರು.

ಚಿತ್ರರಂಗಕ್ಕೂ ಅಭೂತ ಪೂರ್ವ ಕೊಡುಗೆ ನೀಡಿದ ದ್ವಾರಕೀಶರನ್ನು ಮರೆತಿರುವುದಕ್ಕೆ ಬೆಂಗಳೂರಿಗೆ ಅವಮಾನವಾಗಬೇಕು. ನುಡಿ ನಮನ ಕಾರ್ಯಕ್ರಮದ ಮೂಲಕ ದ್ವಾರಕೀಶ ಸ್ಮರಣೆ, ಚಿತ್ರರಂಗಕ್ಕೆ ನೀಡಿದ ಕೊಡುಗೆ ಸ್ಮರಿಸುತ್ತಿರುವ ಸಂಸ್ಥೆಯ ಕಾರ್ಯ ನಿಜಕ್ಕೂ ಖುಷಿ ತಂದಿದೆ. ಈ ಸಂಸ್ಥೆಯ ಮೂರನೇ ಕಾರ್ಯಕ್ರಮಕ್ಕೆ ಇಲ್ಲಿಗೆ ಬಂದಿದ್ದೇನೆ. ದ್ವಾರಕೀಶರನ್ನು ತೀರಾ ಸನಿಹದಿಂದ ನೋಡಿದ್ದೇನೆ ಎಂದು ಅವರು ತಿಳಿಸಿದರು.

ನಾನು, ದ್ವಾರಕೀಶ್‌ ಮತ್ತು ಸಹೋದರರು ಹುಟ್ಟಿದ್ದು ಒಂದೇ ಬಾಣಂತಿಯ ಕೋಣೆಯಲ್ಲೇ. ದ್ವಾರಕೀಶರ ತಂಗಿಯನ್ನೇ ನಾನು ಮದುವೆಯಾಗಿದ್ದು. ಹಾಗಾಗಿಯೇ ತೀರಾ ಹತ್ತಿರದಿಂದ ಕಂಡಿದ್ದೇನೆ. ಡಾ.ರಾಜಕುಮಾರ ಅಭಿನಯಿಸಿದ್ದ ಭಾಗ್ಯವಂತರು ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ದ್ವಾರಕೀಶ ನನಗೆ ನೀಡಿದ್ದರು. ಅಲ್ಲಿಂದ ಆರಂಭವಾಗಿ, ನನ್ನ ಸಿನಿಮಾ ಪಯಣದಲ್ಲಿ 50 ಸಿನಿಮಾಗಳಿಗೆ ಸ್ವತಂತ್ರ ನಿರ್ದೇಶನ, 22 ಸಿನಿಮಾಗೆ ಸಹ ನಿರ್ದೇಶನ ಮಾಡಿದ್ದೇನೆ. ಇದೆಲ್ಲದರ ಶ್ರೇಯ ದ್ವಾರಕೀಶರಿಗೆ ಸಲ್ಲುತ್ತದೆ ಎಂದು ಭಾರ್ಗವ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಿನಿಮಾ ಸಿರಿ ಸಂಸ್ಥೆಯ ಅಧ್ಯಕ್ಷ, ಹಿರಿಯ ಉದ್ಯಮಿ ಅಂದನೂರು ಮುಪ್ಪಣ್ಣ ಮಾತನಾಡಿ, ಸಿನಿಮಾ ಸಿರಿ ಸಂಸ್ಥೆಯ ಎಲ್ಲಾ ಸದಸ್ಯರ ಸಹಕಾರದಿಂದ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ದಾವಣಗೆರೆ ಜನತೆಗೆ ಮನರಂಜನೆ ನೀಡುವ ಜೊತೆಗೆ ಕನ್ನಡ ಚಿತ್ರರಂಗದ ಸಾಧಕರು, ಚಿತ್ರರಂಗದ ಬಗ್ಗೆ ತಿಳಿಸುವ, ಚಿತ್ರರಂಗಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸುವ ಕೆಲಸ ಮಾಡಲಾಗುವುದು ಎಂದರು.

ದ್ವಾರಕೀಶರ ಸಹೋದರಿ ಪರಿಮಳಾ ಭಾರ್ಗವ, ಸಂಸ್ಥೆ ಗೌರವಾಧ್ಯಕ್ಷ ಟಿ.ಎಂ.ಪಂಚಾಕ್ಷರಯ್ಯ, ಪ್ರಧಾನ ಕಾರ್ಯದರ್ಶಿ ಆರ್.ಟಿ.ಮೃತ್ಯುಂಜಯ, ಖಜಾಂಚಿ ಎನ್.ವಿ.ಬಂಡಿವಾಡ, ಪರಿಕಲ್ಪನಾ ನಿರ್ದೇಶಕರಾದ ಸುರಭಿ ಶಿವಮೂರ್ತಿ, ಎಚ್.ವಿ.ಮಂಜುನಾಥ ಸ್ವಾಮಿ, ಸಾಲಿಗ್ರಾಮ ಗಣೇಶ ಶೆಣೈ ಇತರರು ಇದ್ದರು. ನಂತರ ರಸ ಮಂಜರಿ ಕಾರ್ಯಕ್ರಮದಲ್ಲಿ ಎಂ.ಜಿ.ಜಗದೀಶ, ಆರ್.ಟಿ.ಮೃತ್ಯುಂಜಯ, ವಿ.ಶಶಿ, ಹೇಮಂತ್, ಜಗದೀಶ ಬೇತೂರು, ಸಂಗೀತಾ ರಾಘವೇಂದ್ರ, ಟಿ.ಶೋಭಾ ಅವರು ದ್ವಾರಕೀಶ್ ನಿರ್ದೇಶನ ಮತ್ತು ಅಭಿನಯದ ಗೀತೆಗಳ ಗಾಯನ ಕಾರ್ಯಕ್ರಮದ ಮೂಲಕ ಜನ ಮನ ರಂಜಿಸಿದರು.

‘ಹಮಾರೆ ಬಾರಾಹ್‌’ ಸಿನಿಮಾ, ಟ್ರೈಲರ್‌ಗೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶದಾವಣಗೆರೆ: ವಿವಾದಾತ್ಮಕ ಹಮಾರೆ ಬಾರಾಹ್‌ ಸಿನಿಮಾ ಶುಕ್ರವಾರ ಬಿಡುಗಡೆ ಮಾಡುವುದನ್ನು ನಿಷೇಧಿಸಿರುವ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಸಹ ಎರಡು ವಾರಗಳ ಕಾಲ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ರಾಜ್ಯದ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ವಾಹಿನಿಗಳು, ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಿದಂತೆ ಜಿಲ್ಲೆಯಲ್ಲೂ ನಿಷೇಧಿಸಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ತಿಳಿಸಿದೆ.

ಜಿಲ್ಲೆಯ ನಗರ, ಗ್ರಾಮಾಂತರ ವ್ಯಾಪ್ತಿಯಲ್ಲಿ ಜೂ.7ರಂದು ಶನಿವಾರ ಬಿಡುಗಡೆಯಾಗಲಿದ್ದ ವಿವಾದಾತ್ಮಕ ಹಮಾರೆ ಬಾರಾಹ್ ಸಿನಿಮಾ ಹಾಗೂ ಟ್ರೈಲರ್‌ನ್ನು ಎರಡು ವಾರಗಳ ಅವದಿಗೆ ಅಥವಾ ಮುಂದಿನ ಸರ್ಕಾರದ ಆದೇಶದವರೆಗೆ ನಿಷೇಧಿಸಲಾಗಿದೆ. ಜಿಲ್ಲೆಯ ನಗರ, ಗ್ರಾಮಾಂತರ ವ್ಯಾಪ್ತಿಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ವಾಹಿನಿಗಳು, ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡದಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದ್ದಾರೆ.ದಾವಣಗೆರೆ ಜಿಲ್ಲೆಯ ಸಾರ್ವಜನಿಕರು ಹಮಾರೆ ಬಾರಾಹ್ ಎಂಬ ಟ್ರೈಲರ್ ಹಾಗೂ ವಿವಾದಾತ್ಮಕ ಸಿನಿಮಾವನ್ನು ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ವಾಹಿನಿಗಳು, ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡಬಾರದು. ಒಂದು ವೇಳೆ ಯಾರಾದರೂ ಅದನ್ನು ಪ್ರಸಾರ ಮಾಡಿದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Share this article