ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಅದನ್ನು ಅವರು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಬಿಜೆಪಿ ಗ್ಯಾರಂಟಿ ವಿರುದ್ಧ ಮಾತಾನಾಡುತ್ತಿದ್ದು, ಜನರು ಅವರನ್ನು ಬೆಂಬಲಿಸಿದ್ದಾರೆ
ಕನ್ನಡಪ್ರಭ ವಾರ್ತೆ ಮೈಸೂರು
5 ಗ್ಯಾರಂಟಿಗಳನ್ನು ಟೀಕಿಸಿ ರದ್ದು ಮಾಡುವಂತೆ ಒತ್ತಾಯಿಸುತ್ತಿದ್ದ ಬಿಜೆಪಿ ಪರವಾಗಿ ಜನರು ಮತ ಚಲಾಯಿಸಿದ್ದಾರೆ. ಹೀಗಾಗಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದೇ ಒಳ್ಳೆಯದು ಎಂದು ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ತಿಳಿಸಿದರು.ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಇಷ್ಟ ಆಗಿಲ್ಲ. ಅದನ್ನು ಅವರು ಫಲಿತಾಂಶದ ಮೂಲಕ ತೋರಿಸಿದ್ದಾರೆ. ಬಿಜೆಪಿ ಗ್ಯಾರಂಟಿ ವಿರುದ್ಧ ಮಾತಾನಾಡುತ್ತಿದ್ದು, ಜನರು ಅವರನ್ನು ಬೆಂಬಲಿಸಿದ್ದಾರೆ. ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಎಂದರ್ಥ. ಹೀಗಾಗಿ, ಗ್ಯಾರಂಟಿ ನಿಲ್ಲಿಸೋದೆ ಒಳಿತು. ಗ್ಯಾರಂಟಿ ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಮರು ಪರಿಶೀಲನೆ ಮಾಡಬೇಕು ಎಂದು ಹೇಳಿದರು. ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ?ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಎಷ್ಟು ಬಾರಿ ಅವಮಾನ ಮಾಡುತ್ತೀರಿ? ಇಷ್ಟರ ಮಟ್ಟಿಗೆ ಸ್ಯಾಡಿಸ್ಟಿಕ್ ನೇಚರ್ ಇದ್ದರೆ ಹೇಗೆ? ನನ್ನನ್ನು ಸೋಲಿಸಿ, ಪರವಾಗಿಲ್ಲ. ಮೈಸೂರಿನ ಜನ ಸಿದ್ದರಾಮಯ್ಯ ಅವರಿಗೆ ಎಷ್ಟು ಬಾರಿ ನೋವು ಕೊಡ್ತೀರಿ? ಅವರು ಏನು ತಪ್ಪು ಮಾಡಿದ್ದಾರೆ ಎಂದು ಅವರು ಪ್ರಶ್ನಿಸಿದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಮೈಸೂರಿಗೆ ಏನು ಕೊಟ್ಟರು? ಆದರೆ, ಸಿದ್ದರಾಮಯ್ಯ ಎಷ್ಟು ಕೆಲಸ ಮಾಡಿದ್ದಾರೆ. ಜಯದೇವ ಆಸ್ಪತ್ರೆ ಸೇರಿದಂತೆ ಮೈಸೂರಿಗೆ ಎಷ್ಟು ಕೊಡುಗೆ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರಂಥ ಕ್ಲೀನ್ ಇಮೇಜ್ ಇರುವ ಸಿಎಂ ದೇಶದಲ್ಲಿ ಬೇರೆ ಯಾರಾದರೂ ಇದ್ದಾರಾ? ಅವರು ಮನಸ್ಸಿನಲ್ಲಿ ಬಹಳ ನೊಂದಿದ್ದಾರೆ. ಆದರೆ, ಯಾವುದನ್ನೂ ಹೇಳಿಕೊಳ್ಳೋದಿಲ್ಲ ಎಂದರು.ಬಿಜೆಪಿ ಅಭ್ಯರ್ಥಿ ಯದುವೀರ್ ಜನರನ್ನು ಎಷ್ಟರ ಮಟ್ಟಿಗೆ ಅರಮನೆಗೆ ಬಿಟ್ಟುಕೊಳ್ತಾರೋ ಇಲ್ಲವೋ ಗೊತ್ತಿಲ್ಲ. ಹಿಂದಿನ ಸಂಸದರ ರೀತಿ ನೀವು ಇರಬೇಡಿ. ಕಳೆದ 10 ವರ್ಷದಲ್ಲಿ ಕೇಂದ್ರ ಸರ್ಕಾರದ ಯಾವುದೇ ಹೊಸ ಯೋಜನೆ ಇಲ್ಲಿಗೆ ಬರಲಿಲ್ಲ. ಕೇಂದ್ರ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಗಮನಹರಿಸಿ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ. ರೈಲ್ವೆ ಟರ್ಮಿನಲ್ ಗಳ ನಿರ್ಮಾಣದ ಕಡೆ ಗಮನ ಕೊಡಲಿ ಎಂದು ಸಲಹೆ ನೀಡಿದರು.ನನಗೆ ಸಿದ್ದರಾಮಯ್ಯನವರೇ ದೇವರು. ಸಿದ್ದರಾಮಯ್ಯ ಅವರು ನನಗೆ ಟಿಕೆಟ್ ಕೊಟ್ಟರು. ಅದಕ್ಕೆ ಡಿ.ಕೆ. ಶಿವಕುಮಾರ್ ಕೂಡ ಸಹಕಾರ ನೀಡಿದ್ದರು. 8 ಕ್ಷೇತ್ರದ ಶಾಸಕರು, ಮಾಜಿ ಶಾಸಕರು ನನಗೆ ಸಹಕಾರ ನೀಡಿದ್ದಾರೆ. ನನಗೆ ಅದೃಷ್ಟ ಇರಲಿಲ್ಲ, ನನ್ನ ಹಣೆಬರಹ ಸರಿ ಇರಲಿಲ್ಲ, ಹೀಗಾಗಿ, ನಾನು ಸೋತಿದ್ದೇನೆ ಎಂದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಕೆ. ಮಹೇಶ್ ಮೊದಲಾದವರು ಇದ್ದರು.----ಬಾಕ್ಸ್... ವಿವಿಧ ರೀತಿಯ ನಮಸ್ಕಾರನನಗೆ 6.5 ಲಕ್ಷ ಜನ ಮತ ನೀಡಿದ್ದಾರೆ. 7.9 ಲಕ್ಷ ಜನ ಮತ ನೀಡಿಲ್ಲ. ನನಗೆ ಮತ ನೀಡಿರುವವರು, ನೀಡದೆ ಇರುವವರಿಗೂ ಧನ್ಯವಾದ ಹೇಳುತ್ತೇನೆ ಎಂದ ಎಂ. ಲಕ್ಷ್ಮಣ ಅವರು, ಮತ ಹಾಕಿದವರಿಗೆ ಸಾಷ್ಟಾಂಗ ನಮಸ್ಕಾರ. ಮತ ಹಾಕದವರಿಗೆ ಬರಿ ನಮಸ್ಕಾರ. ಸಿದ್ದರಾಮಯ್ಯಗೆ ಎದ್ದು ನಿಂತು ಸಾಷ್ಟಾಂಗ ನಮಸ್ಕಾರ ಮಾಡಿದರು.----ಕೋಟ್...ಒಕ್ಕಲಿಗರು ನನಗೆ ಮತ ಹಾಕಿಲ್ಲ. ಹಳೆ ಮೈಸೂರು ಭಾಗದ 8 ಜನ ಒಕ್ಕಲಿಗರನ್ನು ಸೋಲಿಸಿದ್ದೀರಾ. ನಾವು ಏನು ಅನ್ಯಾಯ ಮಾಡಿದ್ದೇವೆ ಹೇಳಿ? ಜೆಡಿಎಸ್, ಬಿಜೆಪಿಯಲ್ಲಿ ಇರುವವರು ಮಾತ್ರ ಒಕ್ಕಲಿಗರಾ? ನಾವು ಒಕ್ಕಲಿಗರು ಅಂತ ಪ್ರೂವ್ ಮಾಡಲಿಕ್ಕೆ ಏನು ಮಾಡಬೇಕು?- ಎಂ. ಲಕ್ಷ್ಮಣ, ಕೆಪಿಸಿಸಿ ವಕ್ತಾರ-----------------eom/mys/shekar/
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.