ಧಾರವಾಡ:
ಶವ ಸಂಸ್ಕಾರಕ್ಕೆ ಜಾಗವಿಲ್ಲದ ಕಾರಣ ಶವವನ್ನು ನಡು ರಸ್ತೆಯಲ್ಲೇ ಅಂತ್ಯಸಂಸ್ಕಾರ ಮಾಡಿರುವ ಘಟನೆ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ಬುಧವಾರ ನಡೆದಿದೆ.ಗ್ರಾಮದ ಬಸಪ್ಪ ಅಂದಕಾರ ಎಂಬುವವರು ಬುಧವಾರ ನಿಧನರಾಗಿದ್ದರು. ಅವರ ಅಂತ್ಯ ಸಂಸ್ಕಾರಕ್ಕೆ ಜಮೀನಿನ ಮಾಲೀಕರು ಜಾಗ ನೀಡದ ಕಾರಣ ಗ್ರಾಮಸ್ಥರು ನವಲಗುಂದ ರಸ್ತೆಯಲ್ಲಿಯೇ ಚಿತೆಗೆ ಶವ ಏರಿಸಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಈ ಗ್ರಾಮದಲ್ಲಿ ಮೂಲತಃ ಅಂತ್ಯಂಸ್ಕಾರಕ್ಕೆ ಜಾಗವಿಲ್ಲ. ಯಾರೇ ನಿಧನರಾದರೂ ಅವರ ಅಂತ್ಯ ಸಂಸ್ಕಾರಕ್ಕೆಂದು ನಾಗರಾಜ ಹಳಕಟ್ಟಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಹೂಳಲಾಗುತ್ತಿತ್ತು. ಆದರೆ, ಆ ಜಮೀನನನ್ನು ನಾಗರಾಜ ಅವರು ಬೇರೆಯವರಿಗೆ ಮಾರಾಟ ಮಾಡಿದ್ದು, ಆ ಜಾಗದಲ್ಲಿ ಶವ ಸಂಸ್ಕಾರ ಮಾಡಲು ಸದ್ಯ ಇರುವ ಮಾಲೀಕರು ತಕರಾರು ತೆಗೆದಿದ್ದಾರೆ ಎಂಬ ಮಾಹಿತಿ ಇದೆ.ಕಳೆದ ಎರಡು ವರ್ಷಗಳಿಂದ ಶವ ಸಂಸ್ಕಾರಕ್ಕೆ ಜಾಗ ನೀಡದ ಕಾರಣ ಗೋವನಕೊಪ್ಪ ಗ್ರಾಮಸ್ಥರು ಶವ ಸಂಸ್ಕಾರ ಮಾಡಲು ಪರದಾಡುವಂತಾಗಿದೆ. ಬುಧವಾರವೂ ಇದೇ ರೀತಿ ಹೊಲದ ಮಾಲೀಕರಿಂದ ತಕರಾರು ಆಗಿದ್ದರಿಂದ ಗ್ರಾಮಸ್ಥರು ವಿಧಿ ಇಲ್ಲದೇ ರಸ್ತೆ ಮಧ್ಯೆದಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಈ ವಿಷಯ ತಿಳಿದು ಗುರುವಾರ ಸ್ಥಳಕ್ಕೆ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಭೇಟಿ ನೀಡಿದ್ದರು. ಈ ಹಿಂದೆ ಶವ ಸಂಸ್ಕಾರಕ್ಕೆ ನೀಡಿದ್ದ ಜಾಗದ ಸರ್ವೆ ಕಾರ್ಯ ಸಹ ನಡೆಸಿದ್ದಾರೆ ಎಂಬ ಮಾಹಿತಿ ಇದೆ. ಮೊದಲು ಸ್ಮಶಾನಕ್ಕಾಗಿ ಕೊಟ್ಟ ಜಾಗವನ್ನೇ ಮರಳಿ ನೀಡಬೇಕು. ಇಲ್ಲದೇ ಹೋದರೆ ರಸ್ತೆಯಲ್ಲೇ ನಾವು ಶವ ಸಂಸ್ಕಾರ ಮಾಡುವ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದು, ಈ ಕುರಿತು ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.