ಬೃಹತ್ ಪರದೆ ಮೇಲೆ ಪಂದ್ಯ ವೀಕ್ಷಿಸಿದ ಕ್ರಿಕೆಟ್ ಅಭಿಮಾನಿಗಳು

KannadaprabhaNewsNetwork |  
Published : Nov 20, 2023, 12:45 AM IST
ಹುಬ್ಬಳ್ಳಿಯ ಶ್ರೀ ಸಾಯಿಬಾಬಾ ಮಂದಿರದಲ್ಲಿ ನವಯುವ ಸಂಘಟನೆಯ ವತಿಯಿಂದ ಬಿದಿರಿನಿಂದ ತಯಾರಿಸಿದ 4 ಅಡಿ ಎತ್ತರದ ವಿಶ್ವಕಪ್‌ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಭಾನುವಾರ ನಗರದಲ್ಲಿ ಎಲ್ಲಿ ನೋಡಿದರಲ್ಲಿ ಕ್ರಿಕೆಟ್ನದ್ದೇ ಮಾತು. ಹಲವೆಡೆ ಬೃಹತ್ ಪ್ರಮಾಣದ ಎಲ್ಇಡಿ ಪರದೆಯ ವ್ಯವಸ್ಥೆ ಮಾಡಿರುವುದು ಕಂಡುಬಂತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಭಾನುವಾರ ನಗರದಲ್ಲಿ ಎಲ್ಲಿ ನೋಡಿದರಲ್ಲಿ ಕ್ರಿಕೆಟ್‌ನದ್ದೇ ಮಾತು. ಹಲವೆಡೆ ಬೃಹತ್‌ ಪ್ರಮಾಣದ ಎಲ್‌ಇಡಿ ಪರದೆಯ ವ್ಯವಸ್ಥೆ ಮಾಡಿರುವುದು ಕಂಡುಬಂತು.

ನಗರದ ತೋಳನಕೆರೆಯಲ್ಲಿ ಪ್ರಕೃತಿ ಫೌಂಡೇಶನ್ ಹಾಗೂ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಸಹಯೋಗದಲ್ಲಿ ಕ್ರಿಕೆಟ್ ವೀಕ್ಷಣೆಗೆ ಬೃಹತ್ ಪ್ರಮಾಣದ ಎಲ್ಇಡಿ ಪರದೆಯ ವ್ಯವಸ್ಥೆ ಮಾಡಲಾಗಿದ್ದು, ನೂರಾರು ಅಭಿಮಾನಿಗಳು ಪಾಲ್ಗೊಂಡು ವೀಕ್ಷಿಸಿದರು. ಕ್ರಿಕೆಟ್ ವೀಕ್ಷಣೆಗೆ ₹100 ಪ್ರವೇಶ ಶುಲ್ಕ ನಿಗದಿಗೊಳಿಸಲಾಗಿದ್ದು, ಕ್ರೀಡಾಪ್ರೇಮಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಫೌಂಡೇಶನ್‌ನ ಅಧ್ಯಕ್ಷ ಪರಶುರಾಮ ಪೂಜಾರ ತಿಳಿಸಿದರು.

ಹೊಸೂರು ವೃತ್ತದ ಬಳಿ ಇರುವ ಕ್ರೀಡಾ ಮೈದಾನ, ಲಿಂಗರಾಜ ನಗರದ ಉದ್ಯಾನ ಸೇರಿದಂತೆ ಹಲವೆಡೆ ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ಎಲ್ಇಡಿ ಪರದೆ ವ್ಯವಸ್ಥೆ ಮಾಡಿರುವುದು ಕಂಡುಬಂದಿತು. ದೇಶಪಾಂಡೆ ನಗರದಲ್ಲಿರುವ ರಮೇಶ ಪಾನ್‌ಶಾಪ್‌ನ ಮಾಲೀಕ ಅಂಗಡಿಯಲ್ಲಿಯೇ ರೇಡಿಯೋದಲ್ಲಿ ಕ್ರಿಕೆಟ್‌ ಪಂದ್ಯ ಆಲಿಸಿದರು.

ಎಲ್‌ಇಡಿ ಪರದೆ ಎದುರು ಖಾಲಿ ಖಾಲಿ:

ಭಾರತ-ಆಸ್ಟ್ರೇಲಿಯಾ ನಡುವೆ ನಡೆಯುತ್ತಿದ್ದ ಕ್ರಿಕೆಟ್‌ನ ಫೈನಲ್‌ ಪಂದ್ಯ ವೀಕ್ಷಣೆಗೆ ನಗರದ ಹಲವೆಡೆ ಇರಿಸಲಾಗಿದ್ದ ಬೃಹತ್‌ ಎಲ್‌ಇಡಿ ಪರದೆ ವೀಕ್ಷಣೆಗೆ ಕ್ರಿಕೆಟ್‌ ಪ್ರೇಮಿಗಳು ಬಾರದಿರುವುದು ಕಂಡುಬಂದಿತು. ಬಹುತೇಕ ಎಲ್ಲರೂ ತಮ್ಮ ಮನೆಯಲ್ಲಿ ಕ್ರಿಕೆಟ್‌ ಪಂದ್ಯ ವೀಕ್ಷಿಸುತ್ತಿರುವುದು ಕಂಡುಬಂದಿತು.

ನವ ದಂಪತಿಯಿಂದ ಪಂದ್ಯ ವೀಕ್ಷಣೆ:

ಇಲ್ಲಿನ ಲಿಂಗರಾಜ ನಗರದ ಸಮುದಾಯ ಭವನದಲ್ಲಿ ರಾಮ್‌-ಜೂಹಿ ನವ ದಂಪತಿ ಮದುವೆ ಸಮಾರಂಭದೊಳಗೆ ಕ್ರಿಕೆಟ್‌ ಪಂದ್ಯ ವೀಕ್ಷಿಸಿದರು. ಇವರೊಂದಿಗೆ ಮದುವೆಗೆ ಬಂದಿದ್ದ ಬಂಧು-ಬಳಗದವರು ಕುಳಿತು ಪಂದ್ಯ ವೀಕ್ಷಿಸಿ ಸಂಭ್ರಮಿಸಿದರು.

ಧಾರವಾಡದಲ್ಲೂ ಪಂದ್ಯ ವೀಕ್ಷಣೆ:

ಧಾರವಾಡದಲ್ಲೂ ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ಹಲವು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿರುವ ಕ್ರೀಡಾಶಾಲೆಯಲ್ಲಿ ಎಲ್‌ಇಡಿ ಪರದೆ ಹಾಕಿ ಸಾರ್ವಜನಿಕರಿಗೆ ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು. ಇಲ್ಲಿನ ಕ್ರೀಡಾ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಕ್ರಿಕೆಟ್‌ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು.

ಬಿದಿರಿನಲ್ಲಿ ಅರಳಿದ ವಿಶ್ವಕಪ್‌:

ಇಲ್ಲಿನ ಸಾಯಿಬಾಬಾ ಮಂದಿರದಲ್ಲಿ ನವಯುವ ಸಂಘಟನೆಯ ಅಧ್ಯಕ್ಷ ಕೃಷ್ಣ ಗಂಡಗಾಳೇಕರ್‌ ನೇತೃತ್ವದಲ್ಲಿ ಬಿದಿರಿನಿಂದ ತಯಾರಿಸಿದ 4 ಅಡಿ ಎತ್ತರದ ವಿಶ್ವಕಪ್‌ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಅಘೋಷಿತ ಬಂದ್‌ ವಾತಾವರಣ

ಭಾರತ-ಆಸ್ಟ್ರೇಲಿಯಾ ಫೈನಲ್‌ ಪಂದ್ಯಾವಳಿ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನದ ವೇಳೆ ನಗರದ ಹಲವು ಪ್ರಮುಖ ಮುಖ್ಯರಸ್ತೆಗಳಲ್ಲಿ ವಾಹನ, ಜನಸಂಚಾರವಿಲ್ಲದೇ ಬಿಕೋ ಎನ್ನುತ್ತಿರುವುದು ಕಂಡುಬಂದಿತು.

ಹುಬ್ಬಳ್ಳಿ-ಧಾರವಾಡ ಮುಖ್ಯ ರಸ್ತೆ, ನಗರದ ಕೊಪ್ಪಿಕರ ರಸ್ತೆ, ದಾಜಿಬನ್‌ ಪೇಟೆ, ರಾಣಿಚೆನ್ನಮ್ಮ ವೃತ್ತ, ಕೇಶ್ವಾಪುರ ರಸ್ತೆ, ಕಾರವಾರ ರಸ್ತೆ, ಪಾಲಾ ಬಾದಾಮಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ತೀರಾ ವಿರಳವಾಗಿರುವುದು ಕಂಡುಬಂದಿತು. ಮಧ್ಯಾಹ್ನ 2 ಗಂಟೆಗೆ ಆರಂಭವಾದ ಕ್ರಿಕೆಟ್‌ ಪಂದ್ಯವನ್ನು ಬಹುತೇಕ ಜನರು ತಮ್ಮ ಮನೆಗಳಲ್ಲಿ ವೀಕ್ಷಿಸಿದರು. ಇನ್ನು ಮುಖ್ಯರಸ್ತೆಯ ಅಂಗಡಿಗಳಲ್ಲೂ ಕ್ರೀಡಾಪ್ರೇಮಿಗಳು ಗುಂಪುಗುಂಪಾಗಿ ನಿಂತು ಕ್ರಿಕೆಟ್‌ ವೀಕ್ಷಿಸುತ್ತಿರುವುದು ಕಂಡುಬಂದಿತು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ