ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲಾ ವಸತಿ ಶಾಲೆಗಳು ಶೇ 99.41ರಷ್ಟು ಫಲಿತಾಂಶ ಪಡೆದಿದ್ದು, ಉತ್ತಮ ಸಾಧನೆ ತೋರಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ। ಎಚ್.ಸಿ.ಮಹದೇವಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರಲ್ಲಿ ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ರಾಜ್ಯದ ಎಲ್ಲಾ ವಸತಿ ಶಾಲೆಗಳು ಶೇ 99.41ರಷ್ಟು ಫಲಿತಾಂಶ ಪಡೆದಿದ್ದು, ಉತ್ತಮ ಸಾಧನೆ ತೋರಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ। ಎಚ್.ಸಿ.ಮಹದೇವಪ್ಪ ತಿಳಿಸಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಫಲಿತಾಂಶ ಕಳೆದ ಸಾಲಿಗೆ ಹೋಲಿಸಿದರೆ ಶೇಕಡ 8.37ರಷ್ಟು ಹೆಚ್ಚಳವಾಗಿದೆ. ರಾಜ್ಯದ ಇತರೆ ಶಾಲೆಗಳ ಫಲಿತಾಂಶಕ್ಕಿಂತ ಶೇ 5.31ರಷ್ಟು ಹೆಚ್ಚಿದೆ. ಇದಕ್ಕೆ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದು ಹಾಗೂ ವಸತಿ ಶಾಲೆಗಳ ವಿದ್ಯಾರ್ಥಿಗಳ ಅಭಿವೃದ್ಧಿಗೆ ಹೆಚ್ಚು ಗಮನ ವಹಿಸಿರುವುದು ಕಾರಣ. ಈ ಫಲಿತಾಂಶ ಬರಲು ಕಾರಣರಾದ ವಸತಿ ಶಾಲೆಗಳ ಶಿಕ್ಷಕ ವೃಂದ ಹಾಗೂ ಅಧಿಕಾರಿ ವರ್ಗಕ್ಕೆ ಅಭಿನಂದನೆ ತಿಳಿಸಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಡಾ। ಅಂಬೇಡ್ಕರ್ ವಸತಿ ಶಾಲೆಗಳಿವೆ ಎಂದರು.
ಕ್ರೈಸ್ (ಕರ್ನಾಟಕ ರೆಸಿಡೆನ್ಶಿಯಲ್ ಎಜ್ಯುಕೇಶನಲ್ ಇನ್‌ಸ್ಟಿಟ್ಯೂಷನ್ಸ್ ಸೊಸೈಟಿ)ಯ 788 ವಸತಿ ಶಾಲೆಗಳಲ್ಲಿ ಒಟ್ಟು 35,014 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 34,809 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯದಲ್ಲಿ 874 ವಸತಿ ಶಾಲೆಗಳಿದ್ದು, ಈ ಪೈಕಿ 539 ಪರಿಶಿಷ್ಟ ಜಾತಿ, 156 ಪರಿಶಿಷ್ಟ ವರ್ಗ ಮತ್ತು 179 ಹಿಂದುಳಿದ ವರ್ಗಕ್ಕೆ ಸೇರಿವೆ. ಕಾಲೇಜುಗಳೂ ಇದ್ದು ಆಂಗ್ಲ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯದ 655 ವಸತಿ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿವೆ.
625ಕ್ಕೆ 622 ಅಂಕಗಳನ್ನು 7 ವಿದ್ಯಾರ್ಥಿಗಳು, 625ಕ್ಕೆ 621 ಅಂಕಗಳನ್ನು 5 ವಿದ್ಯಾರ್ಥಿಗಳು, 625ಕ್ಕೆ 620 ಅಂಕಗಳನ್ನು 8 ವಿದ್ಯಾರ್ಥಿಗಳು, 14 ವಿದ್ಯಾರ್ಥಿಗಳು 619 ಅಂಕಗಳು, 15 ವಿದ್ಯಾರ್ಥಿಗಳು 618 ಅಂಕಗಳು, 22 ವಿದ್ಯಾರ್ಥಿಗಳು 617 ಅಂಕಗಳು, 32 ವಿದ್ಯಾರ್ಥಿಗಳು 616 ಅಂಕಗಳನ್ನು ಪಡೆದು 4ರಿಂದ 10 ನೇ ಸ್ಥಾನ ಪಡೆದಿದ್ದಾರೆ. ಒಟ್ಟಾರೆ 103 ವಿದ್ಯಾರ್ಥಿಗಳು ವಿವಿಧ ರ್‍ಯಾಂಕ್ ಪಡೆದಿದ್ದಾರೆ.
ವಿಷಯವಾರು ವಿಂಗಡಿಸಿದಾಗ 100ಕ್ಕೆ 100 ಅಂಕಗಳನ್ನು ಪಡೆದವರೆಂದರೆ, ಕನ್ನಡ ವಿಷಯದಲ್ಲಿ 1740 ವಿದ್ಯಾರ್ಥಿಗಳು, ಇಂಗ್ಲಿಷ್ 310 ವಿದ್ಯಾರ್ಥಿಗಳು, ಹಿಂದಿ 3695 ವಿದ್ಯಾರ್ಥಿಗಳು, ಗಣಿತ 83 ವಿದ್ಯಾರ್ಥಿಗಳು, ವಿಜ್ಞಾನದಲ್ಲಿ 38 ವಿದ್ಯಾರ್ಥಿಗಳು, ಸಮಾಜ ವಿಜ್ಞಾನದಲ್ಲಿ 937 ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ. ಖಾಲಿ ಹುದ್ದೆ ಶೀಘ್ರ ಭರ್ತಿ:
ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಸಚಿವ ಡಾ। ಎಚ್.ಸಿ.ಮಹದೇವಪ್ಪ ತಿಳಿಸಿದರು.
ಕ್ರೈಸ್‌ನಲ್ಲಿ ಒಟ್ಟು 12,636 ಶಿಕ್ಷಕರು ಪಾಠ ಮಾಡುತ್ತಿದ್ದು, ಇವರಲ್ಲಿ 5786 ಮಂದಿ ಕಾಯಂ ಶಿಕ್ಷಕರು, ಉಳಿದವರು ಹೊರಗುತ್ತಿಗೆ, ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅತಿ ಶೀಘ್ರ 1500 ಮಂದಿ ಶಿಕ್ಷಕರ ಹುದ್ದೆ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪತ್ರ ಬರೆಯಲಾಗಿದೆ. ಪ್ರಕ್ರಿಯೆ ಆರಂಭವಾಗಿವೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.