ಬೆಳೆ ಪರಿಹಾರ ರೈತರ ಸಾಲಕ್ಕೆ ಹೊಂದಾಣಿಕೆ ಮಾಡುವಂತಿಲ್ಲ

KannadaprabhaNewsNetwork |  
Published : May 17, 2024, 12:39 AM IST
ಫೋಟೋ- ಡಿಸಿ ಕಲಬುರಗಿ 2 | Kannada Prabha

ಸಾರಾಂಶ

ಸರ್ಕಾರದ ನಿರ್ದೇಶನದಂತೆ ಬೆಳೆ ಪರಿಹಾರ ಹಣ ಯಾವುದೇ ಸಾಲ, ಬಾಕಿಗೆ ಬಳಸುವಂತಿಲ್ಲ. ಅದು ರೈತರಿಗೆ ನೇರವಾಗಿ ತಲುಪಬೇಕೆಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಬ್ಯಾಂಕರ್ಸ್‌ಗಳಿಗೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಬರಗಾಲ ಘೋಷಣೆ ಪರಿಣಾಮ ರಾಜ್ಯ ಸರ್ಕಾರ ಎಸ್.ಡಿ.ಆರ್.ಎಫ್., ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ರೈತರಿಗೆ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಬೆಳೆ ಪರಿಹಾರ ಹಣವನ್ನು ಕೆಲ ಬ್ಯಾಂಕ್ ಅಧಿಕಾರಿಗಳು ಅದನ್ನು ಸಾಲ ವಾಪಸಾತಿಗೆ, ಹಿಂಬಾಕಿ ಪಾವತಿಗೆ ಬಳಕೆ ಮಾಡುತ್ತಿದ್ದಾರೆ ಎಂಬ ದೂರು ಬರುತ್ತಿದ್ದು, ಯಾವುದೇ ಕಾರಣಕ್ಕೂ ಬ್ಯಾಂಕ್ ಅಧಿಕಾರಿಗಳು ಈ ಹಣ ಸಾಲಕ್ಕೆ, ಬಾಕಿಗೆ ಹೊಂದಾಣಿಕೆ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬರಗಾಲ ನಿರ್ವಹಣೆ ಮತ್ತು ಪ್ರಸಕ್ತ ಸಾಲಿನ ಮುಂಗಾರು ಪೂರ್ವ ಸಿದ್ಧತೆ ಕುರಿತು ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಗ್ಗೆ ಹಲವಾರು ರೈತರು ನನಗೆ ಕರೆ ಮಾಡಿ ದೂರಿದ್ದಾರೆ. ಸರ್ಕಾರದ ನಿರ್ದೇಶನದಂತೆ ಬೆಳೆ ಪರಿಹಾರ ಹಣ ಯಾವುದೇ ಸಾಲ, ಬಾಕಿಗೆ ಬಳಸುವಂತಿಲ್ಲ. ಅದು ರೈತರಿಗೆ ನೇರವಾಗಿ ತಲುಪಬೇಕು ಎಂದರು.

ಈ ಸಂಬಂಧ ಈಗಾಗಲೆ ಲೀಡ್ ಬ್ಯಾಂಕ್ ಮ್ಯಾನೇಜರ್ ಅವರಿಗೆ ಲಿಖಿತ ನಿರ್ದೇಶನ ಸಹ ನೀಡಲಾಗಿದೆ. ಇದನ್ನು ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳು ತಪ್ಪದೆ ಪಾಲಿಸಬೇಕು. ಯಾವುದೇ ಬ್ಯಾಂಕ್ ಪರಿಹಾರದ ಹಣ ಸಾಲಕ್ಕೆ ಹೊಂದಿಸಿದಲ್ಲಿ ಕೂಡಲೆ ಅದನ್ನು ರೈತರಿಗೆ ವಾಪಸ್ ಹಿಂದಿರುಗಿಸಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿದ್ದ ಲೀಡ್ ಬ್ಯಾಂಕ್ ಮ್ಯಾನೇಜರ್ ಸದಾಶಿವ ರಾತ್ರಿಕರ್ ಅವರಿಗೆ ನಿರ್ದೇಶನ ನೀಡಿದರು.

ಕಳೆದ ವರ್ಷ ಬರಗಾಲ ಹಿನ್ನೆಲೆಯಲ್ಲಿ ಇದೂವರೆಗೆ 2 ಕಂತುಗಳಲ್ಲಿ ಜಿಲ್ಲೆಯ 2,82,010 ರೈತರಿಗೆ 330.53 ಕೋಟಿ ರೂ. ಪರಿಹಾರ ಹಣ ಜಮೆ ಮಾಡಲಾಗಿದೆ. ಈ ಮಧ್ಯೆ ಇನ್ನೂ ಕೆಲ ರೈತರಿಗೆ ಆಧಾರ್ ಸೀಡಿಂಗ್, ಕೆ.ವೈ.ಸಿ., ಎಫ್.ಐ.ಡಿ. ನೊಂದಣಿ ಇಲ್ಲದ ಕಾರಣ ಬರಗಾಲ ಬೆಳೆ ಪರಿಹಾರ ಹಣ ಜಮೆಯಾಗಿಲ್ಲ. ಇಂತಹ ರೈತರ ಆಧಾರ್ ಸೀಡಿಂಗ್, ಎಫ್.ಐ.ಡಿ. ನೊಂದಣಿ ಕಾರ್ಯ ಬರುವ ಶನಿವಾರದೊಳಗೆ ಮುಗಿಸಬೇಕು. ತಹಶೀಲ್ದಾರರು, ಪಿ.ಡಿ.ಓ, ಕೃಷಿ-ತೋಟಗಾರಿಕೆ ಅಧಿಕಾರಿಗಳು ಇದನ್ನು ಪ್ರಥಮಾದ್ಯತೆ ಮೇರೆಗೆ ಮಾಡಬೇಕೆಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ನಿರ್ದೇಶನ ನೀಡಿದರು.

ಶಿಸ್ತು ಕ್ರಮದ ಎಚ್ಚರಿಕೆ: ಕಲಬುರಗಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ ಎಂಬ ದೂರು ದಿನನಿತ್ಯ ಕೇಳಿಬರುತ್ತಿದೆ. ಪಾಲಿಕೆ ಅಧಿಕಾರಿಗಳು ಇದರ ಹೆಚ್ಚು ಗಮನಹರಿಸಬೇಕು. ನಿಯಮಿತವಾಗಿ ನೀರು ಗುಣಮಟ್ಟದ ಬಗ್ಗೆ ತಪಾಸಣೆ ಮಾಡಿಸಬೇಕು. ಸಾರ್ವಜನಿಕರಿಗೆ ಮುಂಚಿತವಾಗಿ ಸಮಯ ತಿಳಿಸಿ ನೀರು ಬಿಡಬೇಕು. ನಗರದ 55 ವಾರ್ಡುಗಳ ಕೊನೆ ಮನೆಗೂ ನೀರು ಪೂರೈಕೆಯಾಗಬೇಕು. ಕಲುಷಿತ ನೀರು ಸೇವನೆಯಿಂದ ಯಾವುದೇ ಅವಘಡ ಸಂಭವಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅಧಿಕಾರಿಗಳಿಗೆ ಡಿ.ಸಿ. ಸೂಚನೆ ನೀಡಿದರು. ಆರ್.ಪಿ. ಜಾಧವ ಮಾತನಾಡಿ, 5 ದಿನಕ್ಕೊಮ್ಮೆ ನಗರದ ವಾಸಿಗಳಿಗೆ ಸರಡಗಿ ಬ್ಯಾರೇಜಿನಿಂದ ನೀರು ಪೂರೈಸಲಾಗುತ್ತಿದೆ. ಜೂನ್ 5ರ ವರೆಗೆ ನೀರು ಸರಬರಾಜಿಗೆ ಶೇಖರಣೆ ಇದೆ. ಶೆಡ್ಯೂಲ್ ಪ್ರಕಾರ ನಲ್ಲಿ ನೀರು ಬಿಡದಿದ್ದಾಗ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಒಟ್ಟಾರೆ 40 ಟ್ಯಾಂಕರ್‍ಗಳು ನೀರು ಪೂರೈಸುತ್ತಿವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತರಾದ ರೂಪಿಂದರ್ ಸಿಂಗ್ ಕೌರ್, ಆಶಪ್ಪ ಪೂಜಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾಲೂಕ ಪಂಚಾಯತ್ ಇ.ಓ ಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!