ಕನ್ನಡಪ್ರಭ ವಾರ್ತೆ ಮಡಿಕೇರಿ
ಇದೇ ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ಕೊಡಗು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ. ಆದ್ದರಿಂದ ಹೆಚ್ಚಿನ ಮಳೆಯಾದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹವಾಮಾನ ಇಲಾಖೆಯಿಂದ ಕಾಲ ಕಾಲಕ್ಕೆ ಮಳೆ ಮುನ್ಸೂಚನೆ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಾಗುತ್ತದೆ. ಆ ದಿಸೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಮಾಹಿತಿ ನೀಡುವಂತಾಗಬೇಕು ಎಂದರು.ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ತಹಸೀಲ್ದಾರರು, ತಾ.ಪಂ.ಇಒಗಳು ಇತರರು ಜಂಟಿಯಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಶಾಲಾ-ಕಾಲೇಜುಗಳು, ಅಂಗನವಾಡಿ ಕಟ್ಟಡಗಳು ಸುಸ್ಥಿತಿ ಬಗ್ಗೆ ಗಮನಹರಿಸಬೇಕು. ಅಗತ್ಯವಿದ್ದಲ್ಲಿ ಪರಿಹಾರ/ ಕಾಳಜಿ ಕೇಂದ್ರ ತೆರೆಯುವುದು ಮತ್ತಿತರ ಕೆಲಸ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹೇಳಿದರು.ಬೀಜ, ಗೊಬ್ಬರ ದಾಸ್ತಾನು:
ಕೃಷಿ ಸಂಬಂಧಿಸಿದಂತೆ ಜಿಲ್ಲೆಗೆ ಬೇಕಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಮಾಡಿಕೊಳ್ಳಬೇಕು. ಕೃಷಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ವೆಂಕಟ್ ರಾಜಾ ಸೂಚಿಸಿದರು.ಅಗ್ನಿಶಾಮಕ ದಳ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸನ್ನದ್ಧವಾಗಿರಬೇಕು. ಗೃಹರಕ್ಷಕ ದಳ ಸಿಬ್ಬಂದಿ ಸಹ ತುರ್ತು ಸೇವೆಗೆ ಲಭ್ಯವಿರುವಂತೆ ಕ್ರಮಕೈಗೊಳ್ಳಬೇಕು ಎಂದರು.
ವಿದ್ಯುತ್ ವ್ಯತ್ಯಯ ಉಂಟಾದಲ್ಲಿ ಸರಿಪಡಿಸಬೇಕು. ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕಂಡುಬಂದಲ್ಲಿ ಕೂಡಲೇ ಸರಿಪಡಿಸಿ, ವಿದ್ಯುತ್ ತಂತಿಯಿಂದ ಯಾವುದೇ ಜೀವಹಾನಿಯಾಗದಂತೆ ಎಚ್ಚರವಹಿಸಬೇಕು ಎಂದು ಸೆಸ್ಕ್ ಇಇ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.ಸೆಸ್ಕ್ ಎಇಇ ವಿನಯ್‌ಕುಮಾರ್ ಅವರು ಈಗಾಗಲೇ ಜಿಲ್ಲೆಯಲ್ಲಿ 75 ಮಂದಿ ಗ್ಯಾಂಗ್‌ಮನ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಅಗತ್ಯ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಂದಾಯ, ಸೆಸ್ಕ್, ಅರಣ್ಯ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳ ನಡುವೆ ಸಮನ್ವಯ ಮುಖ್ಯವಾಗಿದ್ದು, ಎಲ್ಲರೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು.ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯವುದು. ಹಾಗೂ ಸೂಕ್ಷ್ಮ ಪ್ರದೇಶದಲ್ಲಿನ ಜನರನ್ನು ಬೇರೇಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಗ್ರಾಮ ಪಂಚಾಯಿತಿ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಪಡೆ ಸಮಿತಿ ಸಭೆ ನಡೆಸುವುದು, ತಮ್ಮ ಇಲಾಖಾ ಹಂತದಲ್ಲಿಯೂ ಸಹ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.ಜಿ.ಪಂ.ಸಿಇಒ ವರ್ಣಿತ್ ನೇಗಿ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪ್ರವಾಹ ಹಾಗೂ ಭೂಕುಸಿತ ಉಂಟಾಗುವ ಪ್ರದೇಶಗಳಲ್ಲಿ ಹೆಚ್ಚಿನ ಮುನ್ನೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಸ್ಥಳೀಯ ಅಧಿಕಾರಿಗಳು ಸಾರ್ವಜನಿಕರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡುವಂತಾಗಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಸೋಮಸುಂದರ ಅವರು ಜಿಲ್ಲೆಗೆ ಬೇಕಿರುವ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಈಗಾಗಲೇ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಲೋಕೋಪಯೋಗಿ ಇಲಾಖೆಯ ಇಇ ಸಿದ್ದೇಗೌಡ ಅವರು ಅವರು ಮುಂಗಾರು ಸಂದರ್ಭದಲ್ಲಿ ರಸ್ತೆ ನಿರ್ವಹಣೆಗೆ ಹೆಚ್ಚಿನ ಗಮನಹರಿಸಲಾಗುವುದು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಪಶುಪಾಲನಾ ಇಲಾಖೆ ಉಪ ನಿರ್ದೇಶಕರಾದ ಲಿಂಗರಾಜು ದೊಡ್ಡಮನಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ್ ಹಲವು ಮಾಹಿತಿ ನೀಡಿದರು.ನಗರಾಭಿವೃದ್ಧಿ ಯೋಜನಾ ಶಾಖೆಯ ಯೋಜನಾ ನಿರ್ದೇಶಕ ಬಿ.ಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟರಾಜು, ಪಿಎಂಜಿಎಸ್‌ವೈ ಎಂಜಿನಿಯರ್ ಪ್ರಭು, ಪಂಚಾಯತ್ ರಾಜ್ ಎಂಜಿನಿಯರ್ ಸುರೇಶ್ ಕುಮಾರ್, ಮುತ್ತುರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜು, ತಾ.ಪಂ.ಇಒ ಎಂ.ನಾಗಮಣಿ, ತಹಸೀಲ್ದಾರ್ ರಮೇಶ್ ಬಾಬು, ರಾಮಚಂದ್ರ, ಕಿರಣ್ ಗೌರಯ್ಯ, ನವೀನ್ ಕುಮಾರ್, ಮೋಹನ್, ಪೌರಾಯುಕ್ತರಾದ ವಿಜಯ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಾದ ಕೃಷ್ಣಪ್ರಸಾದ್ ಮತ್ತಿತರರು ಇದ್ದರು.