ಹೊಸದುರ್ಗ : ಶಿಕ್ಷಣದ ಬಗ್ಗೆ ಕಾಳಜಿ ಇಲ್ಲದವರು ರಾಜ್ಯದ ಶಿಕ್ಷಣ ಮಂತ್ರಿಯಾಗಿರುವುದು ದುರಾದೃಷ್ಟಕರ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಗುರುವಾರ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದವರು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರಿಗೆ ಅವರದೇ ಆದ ಶಕ್ತಿಯಿದೆ. ಈ ಕ್ಷೇತ್ರದಲ್ಲಿ ನಾನು ಇಲ್ಲದೆ ಇದ್ದರೂ, ಬಿಜೆಪಿ ಪಕ್ಷಕ್ಕೆ ಹಾಕುವ 4 ಸಾವಿರ ಮತಗಳಿವೆ. 4ನೇ ಬಾರಿಯೂ ಕೂಡ ಚುನಾವಣೆ ಯಲ್ಲಿ ಗೆಲ್ಲುವ ವಿಶ್ವಾಸ ನನಗಿದೆ. ಇದರಲ್ಲಿ ಅನುಮಾನವೇ ಬೇಡ. ಬೇರೆ ಪಕ್ಷದ ಅಭ್ಯರ್ಥಿ ಸಮುದಾಯದವರನ್ನೇ ನಂಬಿಕೊಂಡು ಬಂದಿದ್ದಾರೆ. ನಾನು ಯಾವ ಸಮುದಾಯಕ್ಕೆ ಸೇರಿದವನು ಎಂದು ಇದುವರೆಗೂ ತೋರಿಸಿಕೊಂಡಿಲ್ಲ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಮತಗಳನ್ನು ತಾಲ್ಲೂಕು ಹೊಸದುರ್ಗವಾಗಿದೆ. ರಾಜ್ಯದ ಮುಖ್ಯಮಂತ್ರಿ ಒಬ್ಬರನ್ನು ಸೋಲಿಸಿದ ಜನರಿದ್ದಾರೆ. ಹೊಸದುರ್ಗ ದಲ್ಲಿ ಪ್ರಜ್ಞಾವಂತ ಮತದಾರರಿದ್ದರು. ಯೋಚಿಸಿ ಮತ ಚಲಾಯಿಸುತ್ತಾರೆ. ಪ್ರಚಾರ ಮಾಡದೆಯೇ ನಾನು ಚುನಾವಣೆಯಲ್ಲಿ ಗೆಲ್ಲುವ ಸಂಪೂರ್ಣ ವಿಶ್ವಾಸ ಇದೆ ಎಂದರು.
ಇಲಾಖೆಯ ಬಗ್ಗೆ ಜ್ಞಾನ ಇಲ್ಲದವರಿಂದ ಅಭಿವೃದ್ಧಿ ಹೇಗೆ ಸಾಧ್ಯ. ರಾಜನಿಗೆ ಬುದ್ಧಿ ಇಲ್ಲವೆಂದರೆ, ಮಂತ್ರಿಗಳು (ಅಧಿಕಾರಿಗಳು) ಹೇಗೆ ಇರುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಚುನಾವಣೆಯಲ್ಲಿ ಏನಾದರೂ ಅವರು ಗೆದ್ದರೆ, ನಿಮ್ಮನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ? ಅವರು ಅರ್ಥ ಮಾಡಿಕೊಳ್ಳುವುದು ಯಾವಾಗ? ನಿಮ್ಮನ್ನು ಗುರುತಿಸುವುದು ಯಾವಾಗ? ಗೌರವಿಸುವುದು ಯಾವಾಗ? ನೀವು ಇವುಗಳನ್ನು ಅರ್ಥ ಮಾಡಿಕೊಂಡು ಚುನಾವಣೆಯಲ್ಲಿ ಮತಚಲಾಯಿಸಿ ಎಂದು ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಮನವಿ ಮಾಡಿದರು. ಈ ವೇಳೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರಿದ್ದರು.