ಕನ್ನಡಪ್ರಭ ವಾರ್ತೆ ಮಂಡ್ಯ
ಮುಂಗಾರು ಆರಂಭವಾಗಿದ್ದು ಮಳೆಯಿಂದ ಸೊಳ್ಳೆಗಳು ನಿಂತ ನೀರಿನಲ್ಲಿ ಉತ್ಪತ್ತಿಯಾಗುತ್ತಿವೆ. ಪ್ರತಿಯೊಬ್ಬರು ಮನೆ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಡೆಂಘೀ ಹರಡುವಿಕೆ ತಡೆಗಟ್ಟಬೇಕು ಎಂದು ಜಿಲ್ಲಾಧಿಕಾರಿ ಡಾ ಕುಮಾರ ತಿಳಿಸಿದರು.ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ಡೆಂಘೀ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಡೆಂಘೀ ಜಾಗೃತಿ ಜಾಥಾ ಮತ್ತು ಮಾನವ ಸರಪಳಿ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಇಲಾಖೆಯಿಂದ ರಾಷ್ಟ್ರೀಯ ಡೆಂಘೀ ದಿನ ಆಚರಿಸಲಾಗುತ್ತಿದೆ. ಡೆಂಘೀ ನಿಯಂತ್ರಣದ ಜಾಗೃತಿ ಜಾಥಾ ಕಾರ್ಯಕ್ರಮ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುಲಾಗುತ್ತಿದೆ ಎಂದರು.ಸಾರ್ವಜನಿಕರು ಡೆಂಘೀ ಜ್ವರದ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮುನ್ನಚ್ಚರಿಕಾ ಕ್ರಮ ಅನುಸರಿಸಿ ರೋಗ ಹರಡದಂತೆ ನೋಡಿಕೊಳ್ಳಬೇಕು. ರೋಗ ಬರುವುದಕ್ಕೂ ಮುಂಚಿತವಾಗಿ ನಾವುಗಳು ನಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡರೆ ರೋಗ ಹರಡುವುದಿಲ್ಲ ಎಂದರು.
ಜಿಲ್ಲಾ ಆರೋಗ್ಯಧಿಕಾರಿ ಡಾ.ಕೆ.ಮೋಹನ್ ಮಾತನಾಡಿ, ಈ ಬಾರಿ ಸಮುದಾಯದೊಂದಿಗೆ ಸೇರಿ ಡೆಂಘೀ ನಿಯಂತ್ರಿಸೋಣ ಎಂಬ ಘೋಷ ವಾಕ್ಯದೊಂದಿಗೆ ಡೆಂಘೀ ದಿನ ಆಚರಿಸಲಾಗುತ್ತಿದೆ. ಡೆಂಘೀ ಜ್ವರವು ಸೊಳ್ಳೆಯಿಂದ ಹರಡುವಂತಹದ್ದು ಒಬ್ಬರಿಂದ ಮತ್ತೊಬ್ಬರಿಗೆ ಬರುವಂತಹ ಕಾಯಿಲೆ ಆಗಿದೆ. ಆದ್ದರಿಂದ ಪ್ರತಿಯೊಬ್ಬರು ತಮ್ಮ ತಮ್ಮ ಮನೆ ಸುತ್ತ-ಮುತ್ತ ಸ್ವಚ್ಛತಾ ಕಾಪಾಡಿಕೊಳ್ಳಿಬೇಕು ಎಂದರು.ತೀವ್ರ ಜ್ವರ, ಕಣ್ಣು ಹಿಂಭಾಗ ನೋವು, ತೀರ ಮೈ-ಕೈ ನೋವು ಡೆಂಘೀ ಲಕ್ಷಣಗಳು. ಈ ರೋಗ ಬರದಂತೆ ತಡೆಯುವುದು ಮೂಲ ಉದ್ದೇಶವಾಗಿದೆ. ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದು, ಮನೆ ಆವರಣದಲ್ಲಿ ನೀರು ನಿಲ್ಲದಂತೆ ಸ್ವಚ್ಛತಾ ಕಾಪಾಡಿಕೊಳ್ಳಬೇಕು. ರೋಗ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಎಂದರು.
ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು ವಿಶೇಷವಾಗಿ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆ ಬಳಸಬೇಕು, ಮಲಗುವಾಗ ತಪ್ಪದೆ ಸೊಳ್ಳೆ ಪರದೆ ಉಪಯೋಗಿಸಬೇಕು, ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆ ಧರಿಸಿ ಸೊಳ್ಳೆ ಪರದೆ ಮುಲಾಮು ದ್ರಾವಣವನ್ನು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.ಇದಕ್ಕೂಮುನ್ನ ಡೆಂಘೀ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಡೆಂಘೀ ನಿಯಂತ್ರಣದ ಘೋಷವಾಕ್ಯ ಕೂಗುತ್ತಾ ಜಯಚಾಮರಾಜ ಒಡೆಯರ್ ಮಾನವ ಸರಪಳಿ ಮಾಡಿ ಜನರಲ್ಲಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಂತರಾಜ, ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ.ಕೆ. ಸೋಮಶೇಖರ್, ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.