ನವಲಗುಂದ:
ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗಳಿಗೆ ಸರ್ಕಾರ ಈ ವರೆಗೂ ಸಮರ್ಪಕವಾಗಿ ಪರಿಹಾರ ನೀಡದೆ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರಿಂದ ತಕ್ಷಣ ಪರಿಹಾರ ವಿತರಿಸಬೇಕೆಂದು ಮಲಪ್ರಭಾ, ಮಹದಾಯಿ, ಕಳಸಾ-ಬಂಡೂರಿ ರೈತ ಒಕ್ಕೂಟ ಹಾಗೂ ಪಕ್ಷಾತೀತ ರೈತ ಹೋರಾಟ ನೇತೃತ್ವದಲ್ಲಿ ರೈತರು ಮಂಗಳವಾರ ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ರೈತ ಮುಖಂಡ ಸುಭಾಸಚಂದ್ರಗೌಡ ಪಾಟೀಲ್, ಮುಂಗಾರು ಬೆಳೆಗಳಿಗೆ ಪರಿಹಾರ ನೀಡುವಂತೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕೆಲವು ಬೆಳೆಗೆ ಮಾತ್ರ ಪರಿಹಾರ ಒದಗಿಸಿದೆ. ಆದ್ದರಿಂದ ಗೋವಿನಜೋಳ, ಶೇಂಗಾ, ಹತ್ತಿ ಹಾಗೂ ಸೋಯಾಬಿನ್ ಬೆಳೆಗಳಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕ್ಷೇತ್ರದಲ್ಲಿ ಕೇವಲ ಹೆಸರು ಬೆಳೆಯನ್ನು ಮಾತ್ರ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿದೆ. ಇದರೊಂದಿಗೆ ಗೋವಿನಜೋಳ ಹಾಗೂ ಸೋಯಾಬಿನ್ ಬೆಳೆಗಳಿಗೂ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸಬೇಕು. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿ ಕಟ್ ಬಾಕಿದಾರರಾದ ರೈತರಿಗೂ ಮರಳಿ ಸಾಲ ನೀಡಬೇಕು. ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನಿರ್ಮಾಣಕ್ಕೆ ₹ 21000 ಕೋಟಿ ಅನುದಾನ ಬಿಡುಗಡೆಯಾಗಿದ್ದರೂ ಗುತ್ತಿಗೆದಾರರು ಸಿಡಿ ನಿರ್ಮಿಸಿಲ್ಲ. ಕೂಡಲೇ ರೈತರಿಗೆ ನೀರಾವರಿ ಉದ್ದೇಶಕ್ಕಾಗಿ ಸಿಡಿ ನಿರ್ಮಿಸಬೇಕೆಂದು ಆಗ್ರಹಿಸಿದರು.10 ವರ್ಷಗಳಿಂದ ನಿರಂತರವಾಗಿ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ಹೋರಾಟ ನಡೆಸುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಾಮಾಣಿಕವಾಗಿ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಬಾವಿ, ದ್ಯಾಮಣ್ಣ ಹೊನಕುದರಿ, ಶಿವಪ್ಪ ಸಂಗಳದ, ಗುರಪ್ಪ ಗಡ್ಡಿ, ಗಂಗಪ್ಪ ಸಂಗಟಿ, ಮಲ್ಲೇಶ ಉಪ್ಪಾರ, ರವಿ ತೋಟದ, ತುಕಾರಾಮ ಜಾಧವ್, ಸಿದ್ಧಲಿಂಗಪ್ಪ ಹಳ್ಳದ, ಮಲ್ಲಪ್ಪ ಬಸೆಗಣ್ಣೆವರ, ಮುರುಗೆಪ್ಪ ಪಲ್ಲೇದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.