ತೀವ್ರಗೊಳ್ಳುತ್ತಿರುವ ಕಬ್ಬು ಬೆಳೆಗಾರರ ಹೋರಾಟ, ಇಂದು ಹೆದ್ದಾರಿ ತಡೆ

KannadaprabhaNewsNetwork |  
Published : Nov 12, 2025, 02:30 AM IST
11ಎಚ್‌ವಿಆರ್‌7 | Kannada Prabha

ಸಾರಾಂಶ

ಪ್ರತಿ ಟನ್‌ ಕಬ್ಬಿಗೆ ಸರ್ಕಾರ ಘೋಷಣೆ ಮಾಡಿರುವ ದರವನ್ನು ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ತೀವ್ರಗೊಳುತ್ತಿದ್ದು, ಬುಧವಾರ ರಾಷ್ಟ್ರೀಯ ಹೆದ್ದಾರಿ ತಡೆ ಮಾಡುವುದಾಗಿ ಘೋಷಿಸಿದ್ದಾರೆ.

ಹಾವೇರಿ: ಪ್ರತಿ ಟನ್‌ ಕಬ್ಬಿಗೆ ಸರ್ಕಾರ ಘೋಷಣೆ ಮಾಡಿರುವ ದರವನ್ನು ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ತೀವ್ರಗೊಳುತ್ತಿದ್ದು, ಬುಧವಾರ ರಾಷ್ಟ್ರೀಯ ಹೆದ್ದಾರಿ ತಡೆ ಮಾಡುವುದಾಗಿ ಘೋಷಿಸಿದ್ದಾರೆ.

ಪ್ರತಿ ಟನ್ ಕಬ್ಬಿಗೆ ಸರ್ಕಾರ ಘೋಷಣೆ ಮಾಡಿದ 3,300 ರು.ದರವನ್ನು ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರಿಗೂ ನೀಡುವಂತೆ ಆಗ್ರಹಿಸಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದಿಂದ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ ಎರಡನೇ ದಿನವನ್ನು ಪೂರೈಸಿತು.

ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಗೆ ಮಂಗಳವಾರ ಮಠಾಧೀಶರು, ನಿವೃತ್ತ ಯೋಧರು, ಕಾಂಗ್ರೆಸ್ ಪಕ್ಷದ ಮುಖಂಡರು ಬೆಂಬಲ ನೀಡಿದರು. ಮಠಾಧೀಶರ ಪರವಾಗಿ ಮಾತನಾಡಿದ ರಟ್ಟಿಹಳ್ಳಿ ಕಬ್ಬಿಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ರೈತರು ತಮ್ಮ ಕಷ್ಟ ಸುಖವನ್ನು ವಿನಯಪೂರ್ವಕವಾಗಿ ಹೇಳಿಕೊಂಡರೆ ಸರ್ಕಾರ ಎಂದೂ ಎಚ್ಚರ ಆಗುವುದಿಲ್ಲ. ಸಂಬಂಧಿಸಿ ಸಚಿವರು, ಫ್ಯಾಕ್ಟರಿ ಮಾಲೀಕರ ಮನೆ ಎದುರು ನೇರವಾಗಿ ಪ್ರತಿಭಟನೆ ಮಾಡೋಣ. ಪ್ರತಿನಿತ್ಯ ಪೆಟ್ರೋಲ್, ಡೀಸೆಲ್, ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿವೆ. ರೈತರ ಅಳಿವು ಉಳಿವಿನ ಪ್ರಶ್ನೆ ಬಂದಿದೆ. ಇನ್ನಮೇಲಾದರು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರೈತರ ಕಷ್ಟ ಸುಖಗಳಿಗೆ ನಾಡಿನ ಮಠಾಧೀಶರು, ಹೋರಾಟಗಾರರು ಇರುತ್ತೇವೆ. ರೈತರು ಸಹ ಪ್ರತಿಭಟನೆ ಹಮ್ಮಿಕೊಳ್ಳುವ ಕೆಲ ದಿನಗಳ ಮುಂಚೆ ಸ್ವಾಮೀಜಿಗಳ ಗಮನಕ್ಕೆ ತಂದರೆ ನಾವೂ ಕೂಡ ಸಮಯ ಬಿಡುವು ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲ ಕೊಡುತ್ತೇವೆ ಎಂದರು.ಸಂಜೆ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿ, ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರ ರಿಕವರಿ ಆಧಾರದಲ್ಲಿ 3,300 ರು.ಕೊಡುವುದಾಗಿ ಘೋಷಣೆ ಮಾಡಿದೆ. ಈ ಆದೇಶ ಹಾವೇರಿ ಜಿಲ್ಲೆಯವರಿಗೂ ಅನ್ವಯವಾಗುಂತೆ ಮುಖ್ಯಮಂತ್ರಿಗಳಿಗೆ ರೈತರ ಪರವಾಗಿ ಒತ್ತಾಯ ಮಾಡಿದ್ದೇನೆ. ನಾನೂ ಕೂಡ ರೈತರ ಶ್ರಮದಿಂದ ಅನ್ನ ಊಟ ಮಾಡಿದ್ದೇನೆ. ರೈತರ ಹಿತ ಕಾಪಾಡಲು ಬದ್ಧನಿದ್ದೇನೆ ಎಂದರು.ಸಕ್ಕರೆ ಕಾರ್ಖಾನೆಯಲ್ಲಿ ತೂಕದ ಯಂತ್ರ ಹಾಗೂ ರಿಕವರಿ ಲ್ಯಾಬ್‌ನ್ನು ಸರ್ಕಾರದಿಂದಲೇ ಹಾಕಿಸಲು ರೈತರ ಪರವಾಗಿ ಒತ್ತಾಯಿಸುತ್ತೇನೆ. ನಿರ್ವಹಣೆ ಮಾಡಿಸಲು ರೈತ ಸಂಘಟನೆಯವರಿಗೆ ಕೊಡುವಂತೆ ಹಕ್ಕೊತ್ತಾಯ ಮಾಡಿಸಲಾಗುವುದು. ಈ ಬಗ್ಗೆ ಸಿಎಂ ಬಳಿ ರೈತರನ್ನು ಕರೆದುಕೊಂಡು ಹೋಗಿ ಚರ್ಚೆ ಮಾಡೋಣ ಎಂದು ಭರವಸೆ ನೀಡಿದರು.ಇಂದು ಹೆದ್ದಾರಿ ತಡೆದು ಪ್ರತಿಭಟನೆ: ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಸರ್ಕಾರ ಟನ್ ಕಬ್ಬಿಗೆ 3,300 ರು.ದರ ಘೋಷಣೆ ಮಾಡಿರುವುದು ಸ್ಪಷ್ಟತೆ ಇಲ್ಲ. ರಿಕವರಿ ಆಧಾರದಲ್ಲಿ 3,300 ರು. ಘೋಷಣೆ ಮಾಡಿದ್ದಾರೆಂದು ಹೇಳುತ್ತಾರೆ. ಜಿಲ್ಲೆಯಲ್ಲಿ 9.42 ರಿಕವರಿ ತೋರಿಸುತ್ತಾರೆ. ಹಾಗಾದರೆ ಇಲ್ಲಿಯ ರೈತರಿಗೆ ಸಿಗುವುದು ಕೇವಲ 2,944 ರು.ಮಾತ್ರ. ಇದರಿಂದ ಕಬ್ಬು ಬೆಳೆಗಾರರಿಗೆ ಅನ್ಯಾಯ ಆಗುತ್ತಿದೆ. ಅಹೋರಾತ್ರಿ ಧರಣಿ ಆರಂಭಗೊಂಡು ಎರಡು ದಿನ ಕಳೆದರೂ ಸಂಬಂಧಪಟ್ಟವರು ಆಗಮಿಸಿಲ್ಲ. ಆದ್ದರಿಂದ ಬುಧವಾರದಿಂದ ರೈತ ಸಂಘ, ಕಬ್ಬು ಬೆಳೆಗಾರರ ಸಂಘ ಎಲ್ಲರೂ ಸೇರಿಕೊಂಡು ಹೆದ್ದಾರಿ ತಡೆ ಮಾಡುತ್ತೇವೆ ಎಂದು ಘೋಷಿಸಿದರು.

ಹರಸೂರು ಬಣ್ಣದಮಠ ಅಭಿನವರುದ್ರ ಚನ್ನಮಲ್ಲಿಕಾರ್ಜುನ, ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ನೆಗಳೂರ ಗುರುಶಾಂತೇಶ್ವರ ಶ್ರೀಗಳು, ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ ಸೇರಿದಂತೆ ಕಬ್ಬು ಬೆಳೆಗಾರರು, ರೈತ ಸಂಘದ ಮುಖಂಡರು ಪಾಲ್ಗೊಂಡಿದ್ದರು.

PREV

Recommended Stories

ಪರಪ್ಪನ ಅಗ್ರಹಾರ ಜೈಲಿಗೆ ಅಂಶು ಕುಮಾರ್‌ ಅಧೀಕ್ಷಕ
ಬಟ್ಟೆ ವ್ಯಾಪಾರ ಸೋಗಲ್ಲಿ 1 ಕೋಟಿಯ ಬುಲೆಟ್‌ ಬೈಕ್‌ ಕದ್ದ