ಹೂವಿನಹಡಗಲಿ: ಎಲ್ಲಿ ನೋಡಿದರೂ ನೀರೇ ನೀರು. ಕೊಯ್ಲಿಗೆ ಬಂದಿದ್ದ ಬೆಳೆಗಳೆಲ್ಲಾ ನೀರು ಪಾಲು. ಮಾರುಕಟ್ಟೆಯಲ್ಲಿ ಈರುಳ್ಳಿಗೆ ಬೆಲೆ ಬಂತು ಎಂದು ಲಾಭದ ನಿರೀಕ್ಷೆಯಲ್ಲಿದ್ದ ರೈತರು ಸ್ವಾತಿ ಮಳೆಯ ಅಬ್ಬರದಿಂದ ಅಕ್ಷರಶಃ ತತ್ತರಿಸಿ ಹೋಗಿದ್ದಾರೆ.
ತಾಲೂಕಿನ ಇಟ್ಟಗಿ ಹೋಬಳಿ ವ್ಯಾಪ್ತಿಯ ಉತ್ತಂಗಿ, ಕೆಂಚಮ್ಮನಹಳ್ಳಿ, ಮಹಾಜನದಹಳ್ಳಿ ಸೇರಿದಂತೆ ತಾಲೂಕಿನ ಇತರೆ ಗ್ರಾಮಗಳಲ್ಲಿ ಬೆಳೆಯಲಾಗಿದ್ದ ಈರುಳ್ಳಿ ಬೆಳೆ ಜಲಾವೃತ್ತವಾಗಿದೆ. 80 ಎಕರೆಗೂ ಹೆಚ್ಚು ಪ್ರದೇಶದ ಬೆಳೆ ಹಾನಿಯಾಗಿದೆ.
ಈರುಳ್ಳಿ ಬೆಳೆಯಲು ಲಕ್ಷಾಂತರ ಬಂಡವಾಳ ಹಾಕಿದ್ದೇವೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಿದೆ ಎಂದು ಲಾಭದ ನಿರೀಕ್ಷೆಯಲ್ಲಿದ್ದ ನಮಗೆ ಸ್ವಾತಿ ಮಳೆ ಬರ ಸಿಡಿಲಿನಂತೆ ಬಂದು ಬೆಳೆ ಕೊಚ್ಚಿ ಹೋಗಿದೆ. 5 ಎಕರೆ ಈರುಳ್ಳಿಯಲ್ಲಿ 2-3 ಎಕರೆಯಲ್ಲಿ ನೀರು ನಿಂತು ಹಾನಿಯಾಗಿದೆ. ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಕೆಂಚಮ್ಮನಹಳ್ಳಿ ಗ್ರಾಮದ ಹಡಗಲಿ ಪ್ರಸಾದ ಒತ್ತಾಯಿಸಿದ್ದಾರೆ.ಪ್ರತಿ ವರ್ಷ ಈರುಳ್ಳಿ ಬೆಳೆಗಾರರು ಮಳೆ ಅಬ್ಬರಕ್ಕೆ ಸಿಲುಕಿ ಲಕ್ಷಾಂತರ ಬೆಳೆ ಹಾನಿ ಅನುಭವಿಸುತ್ತಿದ್ದಾರೆ. ಉತ್ತಮ ಇಳುವರಿ ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ಬೆಳೆ ಕೊಚ್ಚಿ ಹೋಗಿದೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತದಿಂದಲೂ ರೈತರು ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟದ ಸ್ಥಿಯಲ್ಲಿರುವ ರೈತರಿಗೆ ಕೂಡಲೇ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಈರುಳ್ಳಿ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷ ಸಿದ್ದೇಶ ಉತ್ತಂಗಿ ಆಗ್ರಹಿಸಿದ್ದಾರೆ.