ಅತಿವೃಷ್ಟಿಯಿಂದ ಬೆಳೆ ನಾಶಗೊಂಡ ಪ್ರಕರಣಕ್ಕೆ ಹೆಕ್ಟೇರ್ ಗೆ ಕನಿಷ್ಟ ರು. 1 ಲಕ್ಷ ನೀಡಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಶಾಸಕ ಅಶ್ವತ್ಥ್ ನಾರಾಯಣ ಆಗ್ರಹಿಸಿದ್ದಾರೆ.
ಮಡಿಕೇರಿ : ಪ್ರತಿ ವರ್ಷ ಮಳೆಗಾಲದ ಸಂದರ್ಭ ಪ್ರವಾಹ ಪರಿಸ್ಥಿತಿಯಿಂದ ಕೊಡಗಿನ ಜನತೆ ಸಂಕಷ್ಟಕ್ಕೀಡಾಗುತ್ತಿದ್ದಾರೆ ಈ ನಿಟ್ಟಿನಲ್ಲಿ ಸರ್ಕಾರ ಶಾಶ್ವತ ಯೋಜನೆ ರೂಪಿಸಬೇಕು. ಜೊತೆಗೆ ಅತಿವೃಷ್ಟಿಯಿಂದ ಬೆಳೆ ನಾಶಗೊಂಡ ಪ್ರಕರಣಕ್ಕೆ ಹೆಕ್ಟೇರ್ ಗೆ ಕನಿಷ್ಟ ರು. 1 ಲಕ್ಷ ನೀಡಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ಶಾಸಕ ಅಶ್ವತ್ಥ್ ನಾರಾಯಣ ಆಗ್ರಹಿಸಿದ್ದಾರೆ.
ಗುರುವಾರ ಸಿದ್ದಾಪುರ, ನೆಲ್ಯಹುದಿಕೇರಿ ಸೇರಿದಂತೆ ಕೊಡಗಿನ ವಿವಿಧ ಕಡೆಗಳಲ್ಲಿನ ಮಳೆಹಾನಿ, ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಿಸಿದ ಬಳಿಕ ನಗರದ ಜಿಲ್ಲಾಡಳಿತ ಭವನ ಎದುರಿನ ಕಾಮಗಾರಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 2018 ರಿಂದ ಕೊಡಗು ಭಾಗದಲ್ಲಿ ಭೂಕುಸಿತ, ನೆರೆ ಹಾವಳಿಯಿಂದ ಜನರು ತತ್ತರಿಸಿದ್ದು, ಭೂಕುಸಿತ ತಡೆಗೆ ಸರಕಾರ ಶಾಶ್ವತ ಕ್ರಮಕೈಗೊಳ್ಳಬೇಕು. ಪ್ರವಾಹ ಪೀಡಿತ ಪ್ರದೇಶ ವಾಸಿಗಳಿಗೆ ಪರ್ಯಾಯ ಜಾಗ ನೀಡಿ ಪುನರ್ ವಸತಿ ಕಲ್ಪಿಸಬೇಕು. ಮಳೆಯಿಂದ ಮನೆ ಕಳೆದುಕೊಂಡವರಿಗೆ ಬಾಡಿಗೆ ಹಣ ತ್ವರಿತವಾಗಿ ನೀಡುವುದರೊಂದಿಗೆ ಮನೆ ನಿರ್ಮಾಣಕ್ಕೆ ಸಹಾಯ ಒದಗಿಸಬೇಕು ಆಗ್ರಹಿಸಿದರು.ರಾಜ್ಯ ಸರ್ಕಾರದಿಂದ ಪರಿಹಾರ ಸಮರ್ಪಕವಾಗಿ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ ಕೇವಲ ಕಾಳಜಿ ಕೇಂದ್ರ ಮಾತ್ರ ಕಾಣುತ್ತಿದೆ. ರಾಷ್ಟ್ರೀಯ ಹೆದ್ದಾರಿ ಭೂಕುಸಿತ ತಡೆಗಟ್ಟುವಲ್ಲಿಯೂ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಬೆಳೆ ನಾಶಕ್ಕೆ ಬಿಜೆಪಿ ಸರ್ಕಾರವಿದ್ದಾಗ ರು. 26 ಸಾವಿರ ಪರಿಹಾರ ನೀಡಲಾಗುತಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿ 1 ಹೆಕ್ಟೇರ್ ಬೆಳೆ ನಾಶಕ್ಕೆ ರು 1 ಲಕ್ಷ ಪರಿಹಾರ ನೀಡಬೇಕು ಎಂದ ಅವರು, ಕೊಡಗು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಇದನ್ನು ಘೋಷಿಸಬೇಕು ಎಂದು ಒತ್ತಾಯಿಸಿದರು.
ಗ್ಯಾರಂಟಿ ಹಣ ಸಿಗುತ್ತಿಲ್ಲ:
ರಾಜ್ಯ ಸರ್ಕಾರದಿಂದ ಗ್ಯಾರಂಟಿ ಹಣ ಸಿಗುತ್ತಿಲ್ಲ. ಸಾಲದ ಗ್ಯಾರಂಟಿ ಸರ್ಕಾರ ನೀಡುತ್ತಿದೆ. ಇವೆಲ್ಲ ವಿಷಯಗಳ ಕುರಿತು ಪ್ರತಿಪಕ್ಷವಾಗಿ ನಾವು ಗಮನ ಸೆಳೆಯುತ್ತೇವೆ. ಕೊಡಗಿಗೆ ಆದ್ಯತೆ ಕೊಡುವ ಕೆಲಸ ಮಾಡುತ್ತೇವೆ ಎಂದು ಅಶ್ವತ್ಥ್ ನಾರಾಯಣ ಭರವಸೆ ನೀಡಿದರು.
ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ, ವೀರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಾಡ ಸುವಿನ್ ಗಣಪತಿ, ಮಾಪಂಗಡ ಯಮುನಾ ಚಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷರಾದ ಗುಮ್ಮಟ್ಟೀರ ಕಿಲನ್ ಗಣಪತಿ, ಕಾಂಗೀರ ಸತೀಶ್,ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ ಮತ್ತಿತರರು ಇದ್ದರು.
ಜಿಲ್ಲಾಧಿಕಾರಿ ಜೊತೆ ಮಾತುಕತೆ :
ಅಶ್ವತ್ಥ ನಾರಾಯಣ ಅವರು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರೊಂದಿಗೆ ಮಳೆಗಾಲ ಪರಿಸ್ಥಿತಿ ನಿರ್ವಹಣೆ ಸಂಬಂಧ ಸಮಾಲೋಚನೆ ನಡೆಸಿದರು.
ಹೆದ್ದಾರಿಗಳಲ್ಲಿ ತಡೆಗೋಡೆ ಸಮರ್ಪಕವಾಗಿಲ್ಲ. ನರೇಗಾದಲ್ಲಿ ಪ್ರಾತಿನಿಧ್ಯ ವಹಿಸಿ ಈ ಕೆಲಸ ಮಾಡಿಸುವಂತಾಗಬೇಕು. ಅಪಾಯದ ಸ್ಥಳದಲ್ಲಿ ನೆಲೆಸಿರುವವರನ್ನು ಸ್ಥಳಾಂತರಕ್ಕೆ ಕ್ರಮವಹಿಸಬೇಕು. ಸರ್ಕಾರಿ ಜಾಗ ಗುರುತಿಸಿ ಅಥವಾ ಖಾಸಗಿ ಜಾಗ ಖರೀದಿಸಿ ವಸತಿ ಕಲ್ಪಿಸುವ ಕೆಲಸವಾಗಬೇಕು. ಪರಿಹಾರಗಳನ್ನು ತ್ವರಿತವಾಗಿ ನೀಡಬೇಕು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಪಂಚಾಯಿತಿ ಟಾಸ್ಕ್ ಫೋರ್ಸ್ ಗೆ ಮಳೆಹಾನಿ ನಿರ್ವಹಣೆಗೆ ಕನಿಷ್ಟ 50 ಸಾವಿರ ರು. ಅನುದಾನ ನೀಡಬೇಕು. ಜೊತೆಗೆ ಮಡಿಕೇರಿ ಘನತ್ಯಾಜ್ಯ ವಿಲೇವಾರಿ ಜಾಗದ ವಿವಾದ ಬಗೆಹರಿಸುವಂತೆ ಕೋರಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಅಭ್ಯತ್ ಮಂಗಲದಲದಲ್ಲಿ 12 ಎಕರೆ ಜಾಗ ನೀಡಲಾಗಿದ್ದು, ಅಲ್ಲಿ ಮೂಲಭೂತ ಸೌಕರ್ಯ ಒದಗಿಸಿ ಜಾಗ ಹಂಚಿಕೆ ಮಾಡಬೇಕೆಂದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಅಪಾಯದ ಸ್ಥಳದಲ್ಲಿ ವಾಸವಿರುವವರ ಸ್ಥಳಾಂತರಕ್ಕೆ ಕ್ರಮವಹಿಸಲಾಗುವುದು. ಬೆಳೆನಾಶ ಸಂಬಂಧ ಜಂಟಿ ಸಮೀಕ್ಷೆ ಕೈಗೊಳ್ಳಲಾಗಿದೆ. ಸದ್ಯದಲ್ಲಿ ವರದಿ ದೊರೆಯಲಿದೆ. ಕಾಫಿ ಮಂಡಳಿ ಈ ಕುರಿತು ಕ್ರಮಕೈಗೊಳ್ಳುತ್ತದೆ. ಮೈಕ್ರೋ ಫೈನಾನ್ಸ್ ಸಾಲ ಮರುಪಾವತಿ ಬಗ್ಗೆ ನಿರ್ದೇಶನ ನೀಡಲಾಗುತ್ತದೆ. ಪರಿಹಾರದೊಂದಿಗೆ ಮನೆ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ಮಾಹಿತಿ ನೀಡಿದರು.